Advertisement
ಅಂದು ಆಕೆಯ ಪಾಲಿಗೆ ಕೆಟ್ಟ ದಿನವೇ ಆಗಿಬಿಟ್ಟಿತ್ತು. ಗಾಢವಾಗಿ ಪ್ರೀತಿಸಿದ್ದ ಗೆಳೆಯ ದೂರಾಗಿದ್ದ, ಮನೆಯಲ್ಲಿ ಹೆತ್ತವರ ನಿತ್ಯ ಜಗಳ, ಪ್ರೀತಿ ಮತ್ತು ನೆಮ್ಮದಿ ಎಂಬುದು ಆಕೆಯ ಪಾಲಿಗೆ ಸತ್ತು ಹೋಗಿತ್ತು, ಹಾಗಾಗಿ ಆಕೆ ಸಾಯಲು ನಿರ್ಧರಿಸಿದ್ದಳು. ಹಾಗೆ ನಿರ್ಧರಿಸಿ ತನ್ನ ಮನೆಯಿಂದ ಹೊರಬಿದ್ದವಳೇ ತನ್ನ ಮನೆಯಿಂದ ಸ್ವಲ್ಪವೇ ದೂರದಲ್ಲಿದ್ದ ರಸ್ತೆಯಲ್ಲಿ ನಿಂತುಕೊಂಡೇ ಬರೋಬ್ಬರಿ ಒಂದು ಬಾಟಲಿ ಫಿನಾಯಿಲ್ ಅನ್ನು ಗಟಗಟನೇ ಕುಡಿದುಬಿಟ್ಟಿದ್ದಳು!
Related Articles
Advertisement
ಒಂದು ವಾರಗಳ ಆಸ್ಪತ್ರೆಯ ವಾಸದ ನಂತರ ಹೊರಜಗತ್ತಿಗೆ ಕಾಲಿಟ್ಟವಳೇ ತನ್ನ ಹೊಸ ಬದುಕನ್ನು ರೂಪಿಸಿಕೊಳ್ಳಲು ಬೇಕಾಗಿದ್ದ ಆತ್ಮಸ್ಥೈರ್ಯ ಮತ್ತು ಮನೋಬಲವನ್ನು ಪಡೆದುಕೊಳ್ಳಲು ನಿರ್ಧರಿಸಿ ಅದಕ್ಕೆ ಅಗತ್ಯವಿದ್ದ ಕೌನ್ಸಿಲಿಂಗ್ ಅನ್ನು ಪಡೆದುಕೊಳ್ಳುತ್ತಾಳೆ ಹಾಗೂ ಮನೋವೈದ್ಯರು ನೀಡಿದ ಕೆಲವೊಂದು ಔಷಧಿಗಳೂ ಸಹ ಆಕೆಯ ಶೀಘ್ರ ಚೇತರಿಕೆಗೆ ಕಾರಣವಾಗುತ್ತದೆ.ತನ್ನ ಆರೋಗ್ಯವೆಲ್ಲಾ ಒಂದು ಹಂತಕ್ಕೆ ಬಂದ ನಂತರ ಆಕೆ ಮಾಡಿದ ಮೊದಲ ಕೆಲಸವೆಂದರೆ ತನ್ನ ತಾಯಿಯನ್ನು ಕರೆದುಕೊಂಡು ಆ ಮನೆಯಿಂದ ಹೊರಬಂದದ್ದು. ಕಳೆದುಹೋದ ದಿನಗಳನ್ನು ಎಣಿಸಿ ಪಶ್ಚಾತ್ತಾಪ ಪಡುವುದೇನೂ ಇಲ್ಲ ಎಂದು ಖಾತ್ರಿ ಮಾಡಿಕೊಂಡ ಬಳಿಕ ಆಕೆ ತನ್ನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸುತ್ತಾಳೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಳಿಕ ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸಕ್ಕೂ ಸೇರಿಕೊಳ್ಳುತ್ತಾಳೆ.
ಈ ಯುವತಿಯ ಬಾಳಲ್ಲಿ ಈ ಘಟನೆಗಳೆಲ್ಲಾ ನಡೆದು ಇದೀಗ ಕೆಲವು ವರ್ಷಗಳೇ ಕಳೆದುಹೋಗಿದೆ. ಆದರೂ ಆ ದಿನಗಳನ್ನೊಮ್ಮೆ ನೆನೆದರೆ ಈಗಲೂ ಆಕೆಯ ಕಣ್ಣಲ್ಲಿ ಒಂದು ಅವ್ಯಕ್ತ ಭಯ ಇಣುಕುತ್ತದೆ. ಆದರೆ ಹೀಗೆ ಸಾವನ್ನು ಗೆದ್ದು ಬಂದ ಈಕೆಯ ಜೀವನ ಇದೀಗ ಚೆನ್ನಾಗಿದೆ ಮಾತ್ರವಲ್ಲ ಇತರರಿಗೆ ಮಾದರಿಯಾಗಿಯೂ ಇದೆ. ಸಮಾನ ಮನಸ್ಕರ ಜೊತೆಗೂಡಿ ತನ್ನದೇ ಆದ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡಿರುವ ಈಕೆ ವಿಶೇಷ ಸಂದರ್ಭಗಳಲ್ಲೆಲ್ಲಾ ಕರ್ತವ್ಯದಲ್ಲಿರುವ ಪೊಲೀಸರ ಬಳಿ ಹೋಗಿ ಅವರಿಗೆ ಚಹಾ ನೀಡುವ ವಿಭಿನ್ನ ಕಾರ್ಯವೊಂದನ್ನೂ ಸಹ ಮಾಡುತ್ತಿದ್ದಾಳೆ.
ತನ್ನ ಈ ಎಲ್ಲಾ ಕಥೆಯನ್ನು ‘ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿರುವ ಈ ಯುವತಿ ಆ ಬರಹದ ಜೊತೆಯಲ್ಲಿ ತನ್ನ ಫೊಟೋವನ್ನೂ ಸಹ ಹಾಕಿಕೊಂಡಿದ್ದಾಳೆ. ಆ ಫೊಟೋದಲ್ಲಿ ಆಕೆಯ ಆತ್ಮವಿಶ್ವಾಸದ ನಗುವನ್ನು ನೋಡಿದ ಯಾರೇ ಆದರೂ ಈಕೆಯ ಜೀವನದಲ್ಲಿ ಇಷ್ಟೆಲ್ಲಾ ಕಹಿ ಘಟನೆಗಳು ಆಗಿರಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲ. ಆದರೆ, ಬದುಕೇ ಹಾಗೇ. ಯಾರಿಂದ ನಾವು ಪ್ರೀತಿ ವಿಶ್ವಾಸವನ್ನು ಬಯಸುತ್ತೇವೆಯೋ ಅವರಿಂದ ನಮಗೆ ಕಿಲುಬು ಕಾಸಿನ ಪ್ರೀತಿಯೂ ಸಿಕ್ಕಿರುವುದಿಲ್ಲ. ನಾವು ನಂಬಿದ ವ್ಯಕ್ತಿಗಳೇ ಅದೊಂದು ದಿನ ಸರೀಯಾಗಿ ಕೈ ಎತ್ತಿ ಹೋಗಿರುತ್ತಾರೆ. ಆದರೆ ಇವೆಲ್ಲದರ ನಡುವೆಯೂ ಎಲ್ಲೋ ಒಂದು ಕಡೆ ನಮಗೆ ಹೊಸ ಜೀವನ, ಹೊಸ ಸವಾಲುಗಳು ಕಾಯುತ್ತಿರುತ್ತವೆ. ಅವುಗಳನ್ನು ನಾವು ಗುರುತಿಸಿ, ಸ್ವೀಕರಿಸಿ ಮುನ್ನಡೆದಲ್ಲಿ ಮಾತ್ರವೇ ಆ ಸವಾಲುಗಳು ನಮ್ಮನ್ನು ನಾವು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತವೆ. ಜೀವನದಲ್ಲಿ ಎದುರಾದ ನೋವುಗಳನ್ನು ಚಾದರವನ್ನಾಗಿಸಿ ಮುಸುಕು ಹೊದ್ದುಕೊಂಡು ನರಳುವ ಬದಲು ಅದನ್ನೇ ಮಾಯಾ ಚಾದರವಾಗಿಸಿ ಅದರ ಮೇಲೇರಿ ಅವಕಾಶಗಳೆಂಬ ವಿಶಾಲ ಆಗಸದಲ್ಲಿ ನಾವು ತೇಲಾಡಬಹುದಲ್ಲವೇ? ಆದರೆ, ಆಯ್ಕೆ ನಮ್ಮದು! ಈ ಯುವತಿಯ ಇಷ್ಟೂ ಕಥೆ ಕೇಳಿದ ಮೇಲೆ ನಮಗೆಲ್ಲಾ ಅನ್ನಿಸುವುದು ಇದೇ ತಾನೇ…?