ಚಿಂತಾಮಣಿ: ಅತೀಯಾದ ರಸ್ತೆ ಗುಂಡಿಗಳ ಪರಿಣಾಮ ಎರಡು ದ್ವಿಚಕ್ರವಾಹನಗಳು ಮುಖಾಮುಕಿ ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯಗೊಂಡು ರಸ್ತೆಯಲ್ಲೇ ಅರ್ಧ ಗಂಟೆಗೂ ಹೆಚ್ಚುಕಾಲ ನರಳಾಡಿ ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಏನಿಗದಾಲೆ ಕ್ರಾಸ್‌ನ ಮಿಂಚಲಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಯರ್ರಕೋಟೆ ನಿವಾಸಿ ಚಂದ್ರಪ್ಪ, ಬತ್ತಲಹಳ್ಳಿ ಶಂಕರರೆಡ್ಡಿ , ಚೇಳೂರು ಹರೀಶ್ ಎಂದು ಗುರುತಿಸಲಾಗಿದೆ.
30 ನಿಮಿಷ ರಸ್ತೆಯಲ್ಲೇ ಪರದಾಟ: ಏನಿಗದಾಲೆ ಕ್ರಾಸ್ ನ ಮಿಂಚಲಹಳ್ಳಿ ಬಳಿ ಸಂಭವಿಸಿ ದ್ವಿಚಕ್ರವಾಹನಗಳ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ ಆ್ಯಂಬುಲೆನ್ಸ್ ಬಾರದ ಪರಿಣಾಮ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಾಯಾಳುಗಳು ಅಪಘಾತ ಸ್ಥಳದಲ್ಲೇ ನೋವಿನಿಂದ ನರಳಾಡುವಂತಾಯಿತು ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.
ಮಾನವೀಯತೆ ಮೆರೆದ ಪೋಲಿಸರು: ಅಪಘಾತ ಸ್ಥಳಕ್ಕೆ ದ್ವಿಚಕ್ರವಾಹನದಲ್ಲಿ ಆಗಮಿಸಿದ್ದ ಕೆಂಚಾರ‌್ಲಹಳ್ಳಿ ಪೋಲಿಸ್ ಠಾಣೆಯ ಇಬ್ಬರು ಪೇದೆಗಳು ಅಪಘಾತದಲ್ಲಿ ಗಾಯಗೊಂಡು ಆ್ಯಂಬುಲೆನ್ಸ್ ಬಾರದೆ ನೋವಿನಿಂದ ನರಳಾಡುತ್ತಿದ್ದ ಗಾಯಾಳುಗಳನ್ನು ಕಂಡು ಠಾಣೆಗೆ ಕರೆ ಮಾಡಿ ಪೋಲಿಸ್ ವಾಹನವನ್ನು ಕರೆಸಿಕೊಂಡು ಅಪಘಾತ ಸ್ಥಳದಿಂದ ಗಾಯಾಳುಗಳನ್ನು ಸಾಗಿಸಿದ್ದಾರೆ.
ಆದರೆ, ಅಪಘಾತ ಸ್ಥಳದಿಂದ ಎರಡೂವರೆ ಕಿ.ಮೀ ಸಂಚರಿಸುವಷ್ಟರಲ್ಲಿ ಪೋಲಿಸ್ ವಾಹನವು ಪಂಚರ್ ಆಗಿ ನಿಂತ ಪರಿಣಾಮ ಗಾಯಾಳುಗಳು ಇನ್ನಷ್ಟು ನೋವು ಅನುಭವಿಸುವಂತಾಯಿತು. ನಂತರ ಚಿಂತಾಮಣಿಯಿಂದ ಆ್ಯಂಬುಲೆನ್ಸ್ ಕರೆಸಿ ನಗರದ ಸಾರ್ವಜನಿಕರ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ: ಅಪಘಾತ ಸ್ಥಳದಿಂದ ಗಾಯಾಳುಗಳನ್ನು ಸಾಗಿಸಲು ಆ್ಯಂಬುಲೆನ್ಸ್ ಗಾಗಿ ಸಾರ್ವಜನಿಕರು ಚಿಂತಾಮಣಿ, ಚೇಳೂರು, ಬಾಗೇಪಲ್ಲಿ, ಏನಿಗದಾಲೆ, ಕಂಚಾರ‌್ಲಹಳ್ಳಿ, ಮುರಗಮಲ್ಲಾ, ಕೇಂದ್ರಗಳಿಗೆ ಕರೆಮಾಡಿ ವಿಷಯ ತಿಳಿಸಿದರೂ ಎಲ್ಲಾ ಕೇಂದ್ರದಲ್ಲೂ ಆ್ಯಂಬುಲೆನ್ಸ್ ಇಲ್ಲ ಎಂದು ಉತ್ತರ ನೀಡಿದ್ದಾರೆ ಎಂದ ಸಾರ್ವಜನಿಕರು ಆರೋಗ್ಯ ಇಲಾಖೆ ಇದ್ದು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಗುಂಡಿಗಳೆ ಕಾರಣ: ಚಿಂತಾಮಣಿ-ಚೇಳೂರು ಸಂಪರ್ಕಿಸುವ ರಸ್ತೆಗಳು ತುಂಬ ಹದಗೆಟ್ಟಿದ್ದು ಹಾಗೂ ಎರಡು ಮೂರು ಅಡಿಯ ಗುಂಡಿಗಳಿವೇ ಇದ್ದು, ದ್ವಿಚಕ್ರವಾಹನ ಸವಾರರು ಸಂಚರಿಸಲು ಅಸಾಧ್ಯವಾಗಿದ್ದು ಈ ಅಪಘಾತವು ಸಹ ಗುಂಡಿ ತಪ್ಪಿಸಲು ಹೋಗಿ ಎರಡು ಬೈಕುಗಳು ಮುಖಾಮುಕಿ ಡಿಕ್ಕಿಹೊಡೆದುಕೊಂಡಿವೆ ಎಂದು ಸ್ಥಳೀಯರು ತಿಳಿಸಿದರು.