Advertisement

ಸೂಪರ್‌ಸೀಡ್‌ಗೆ ತಡೆಯಾಜ್ಞೆ: ಮತ್ತೆ ನನಗೆ ಅಧಿಕಾರ

03:22 PM Jul 28, 2019 | Team Udayavani |

ತುಮಕೂರು: ತುಮಕೂರು ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತೆ ನನಗೆ ಅಧಿಕಾರ ಹಸ್ತಾಂತರಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿರುವುದು ಇದು ಮೊದಲಲ್ಲ. ಈ ಹಿಂದೆಯೂ ಇದೇ ರೀತಿ ಮಾಡಿದ್ದರು. 2003ರಲ್ಲಿ ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಆಗಿತ್ತು. ಆ ಸಂದರ್ಭದಲ್ಲೂ ನಾನೇ ಅಧ್ಯಕ್ಷನಾಗಿದ್ದೆ ಎಂದು ಹೇಳಿದರು.

ಸಣ್ಣಪುಟ್ಟ ಲೋಪ ಆಗಿರಬಹುದು: ಈಗ ದುರುದ್ದೇಶ ಪೂರಿತವಾಗಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿದ್ದರು. ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನನಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಧಿಕಾರ ಮತ್ತೆ ನೀಡಿದ್ದಾರೆ. ಡಿಸಿಸಿ ಬ್ಯಾಂಕ್‌ ಮೊದಲು ಹೇಗೆ ಕಾರ್ಯನಿರ್ವಹಿಸುತಿತ್ತೋ ಹಾಗೆಯೇ ಮುಂದುವರೆಯುತ್ತದೆ. ಯಾವುದೇ ಬದಲಾವಣೆಯಿಲ್ಲ. ಗ್ರಾಹಕರಿಗೆ ಅನುಕೂಲ ಮಾಡುವ ಸಲುವಾಗಿ ಸಣ್ಣಪುಟ್ಟ ಲೋಪ ಆಗಿರುತ್ತದೆ ಎಂದು ಹೇಳಿದರು.

ಸರ್ಕಾರದ ಠೇವಣಿ ಇಲ್ಲ: ಲೋಪ ಇಲ್ಲದಂತೆ 21 ಜಿಲ್ಲೆಗಳಲ್ಲಿ ಬ್ಯಾಂಕ್‌ ನಡೆಯುತ್ತಿಲ್ಲ. ಸಣ್ಣ ಪುಟ್ಟ ಲೊಪ ನಡೆಯುತ್ತದೆ. ಆದರೆ ಹಣಕಾಸಿನ ಲೋಪ ಆಗಿದ್ದರೆ ಅದನ್ನ ಪ್ರಶ್ನೆ ಮಾಡಿದರೇ ಒಪ್ಪಿಕೊಳ್ತೇನೆ. ಆಡಳಿತದಲ್ಲಿ ಹಿಂದೆ ಮುಂದೆ ವ್ಯತ್ಯಾಸ ಆಗಿರಬಹುದು.

ಪಕ್ಷಾತೀತ ವಾಗಿ ಹಲವು ನಾಯಕರು ಬ್ಯಾಂಕ್‌ ಲೋನ್‌ ಪಡೆದು ಬಡ್ಡಿ ಕಟ್ಟಿದ್ದಾರೆ. ಮಾತನಾಡುವ ಯಾರದ್ದೂ ಇಲ್ಲಿ ಬಂಡವಾಳ ಇಲ್ಲಾ. ಬಡವರು ಹಣ ಇಟ್ಟಿದ್ದಾರೆ. ಸರ್ಕಾರದ್ದೂ ಇಲ್ಲಿ ಯಾವುದೇ ಷೇರು ಮೊತ್ತ, ಠೇವಣಿ ಇಲ್ಲ. ಜನ ನನ್ನನ್ನ ನೋಡಿ ಒಂದು ಸಾವಿರ ಕೋಟಿ ರೂ. ಠೇವಣಿ ಇಟ್ಟಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು.

Advertisement

ಬಿಜೆಪಿ ಸರ್ಕಾರ ರಚನೆ ಹಾಗೂ ಡಿಸಿಸಿ ಬ್ಯಾಂಕ್‌ ಸೂಪರ್‌ಸೀಡ್‌ಗೆ ತಡೆಯಾಜ್ಞೆ ಹೊರಬಂದ ಹಿನ್ನೆಲೆಯಲ್ಲಿ ಕೆ.ಎನ್‌.ರಾಜಣ್ಣ ಅಭಿಮಾನಿಗಳು ನಗರದ ಟೌನ್‌ಹಾಲ್ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಶನಿವಾರ ವಿಜಯೋತ್ಸವ ಆಚರಿಸಿದರು.

ಊರುಕೆರೆ ವಿಎಸ್‌ಎಸ್‌ಎನ್‌ ಅಧ್ಯಕ್ಷ ಷಣ್ಮುಖ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಸಾಕಷ್ಟು ಶ್ರಮಿಸಿದ್ದಾರೆ. ಬ್ಯಾಂಕ್‌ನಿಂದ ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿದ್ದಾರೆ. ಅಂತಹವರಿಗೆ ಬ್ಯಾಂಕ್‌ ಸೂಪರ್‌ಸೀಡ್‌ ಮಾಡುವ ಮೂಲಕ ತೊಂದರೆ ನೀಡಿದರು. ತೊಂದರೆ ನೀಡಿದ ವರೇ ಇಂದು ಅಧಿಕಾರ ಕಳೆದುಕೊಂಡಿದ್ದಾರೆ, ರಾಜಣ್ಣ ನುಡಿದಂತೆ ವಾರದೊಳಗೆ ಡಿಸಿಸಿ ಬ್ಯಾಂಕ್‌ ಅಧಿಕಾರ ಮರಳಿ ಪಡೆದಿದ್ದಾರೆ ಎಂದು ಹೇಳಿದರು.

ಸುವರ್ಣ ಯುಗ ಪ್ರಾರಂಭ: ಝೀರೋ ಟ್ರಾಫಿಕ್‌ನಿಂದ ಜಿಲ್ಲೆಯ ಜನರು ಬೇಸತ್ತಿದ್ದರು. ಸರ್ಕಾರ ಬಿದ್ದು ಝೀರೋ ಟ್ರಾಫಿಕ್‌ ಕಳೆದುಕೊಂಡಿರುವುದರಿಂದ ಜಿಲ್ಲೆಗೆ ಒಳಿತಾಗಿದೆ ಎಂದು ಪರಮೇಶ್ವರ್‌ ಹೆಸರೆತ್ತದೆ ಷಣ್ಮುಖ ಟೀಕಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ರಾಜಣ್ಣ ಅಗತ್ಯವಾಗಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಜಿಲ್ಲೆಗೆ ಸುವರ್ಣ ಯುಗ ಪ್ರಾರಂಭವಾಗಿದ್ದು, ಝೀರೋ ಟ್ರಾಫಿಕ್‌ ಮುಕ್ತಗೊಂಡಿರುವುದು ಹೆಚ್ಚು ಸಂತಸವಾಗಿದೆ ಎಂದು ಹೇಳಿದರು.

ಕುಲಗೆಟ್ಟ ಸಮ್ಮಿಶ್ರ ಸರ್ಕಾರ ಬಿದ್ದು, ಝೀರೋ ಟ್ರಾಫಿಕ್‌ ಮುಕ್ತಗೊಂಡಿರುವುದು ತುಮಕೂರು ಜನರಿಗೆ ನೆಮ್ಮದಿ ಉಂಟು ಮಾಡಿದ್ದು, ಝೀರೋ ಟ್ರಾಫಿಕ್‌ನಿಂದ ತೊಂದರೆಗೆ ಒಳಗಾಗಿದ್ದ ರೋಗಿಗಳು, ಪೊಲೀಸರು, ಶಾಲಾ ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಬೆಳ್ಳಾವಿ ವಿಎಸ್‌ಎಸ್‌ಎನ್‌ ಅಧ್ಯಕ್ಷ ಉಮೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಉಳಿಯಲು ಕಾರಣವಾಗಿರುವ ಕೆ.ಎನ್‌.ರಾಜಣ್ಣ ಕಾರಣ. ದಕ್ಷ ಆಡಳಿತದಿಂದ ಬ್ಯಾಂಕ್‌ ಅಭಿವೃದ್ಧಿ ಕಂಡಿದೆ. ಡಿಸಿಸಿ ಬ್ಯಾಂಕ್‌ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಬ್ಯಾಂಕಿಂಗ್‌ ವ್ಯವಹಾರ ಮಾಡುವಲ್ಲಿ ರಾಜಣ್ಣ ಪಾತ್ರ ದೊಡ್ಡದಿದೆ. ಅಂತಹ ಅಧ್ಯಕ್ಷರನ್ನು ಸೂಪರ್‌ಸೀಡ್‌ ಮಾಡುವ ಮೂಲಕ ಕೆಟ್ಟ ರಾಜಕಾರಣ ಮಾಡಿದವರ ವಿರುದ್ಧ ತಡೆಯಾಜ್ಞೆ ಸಿಕ್ಕಿದೆ ಎಂದು ಹೇಳಿದರು.

ಟಿಎಂಪಿಎಸ್‌ ನಿರ್ದೇಶಕ ಸುರೇಶ್‌, ಮುಖಂಡರಾದ ಮಹೇಶ್‌ಬಾಬು, ರಫೀವುಲ್ಲಾ, ಪಂಚಾಕ್ಷರಯ್ಯ, ಡಾ.ನಾಗಾರಾಜು, ಶಬ್ಬೀರ್‌ ಅಹ್ಮದ್‌, ಆಟೋ ರಾಜು, ಕೆಂಪಹನುಮಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next