Advertisement

ಸ್ವಾತಂತ್ರ್ಯ ಸಂಗ್ರಾಮದಮೇಲೆ ತಂತ್ರದ ಪ್ರಭಾವ

01:42 PM Jan 28, 2018 | |

ತಂತ್ರಶಾಸ್ತ್ರದಲ್ಲಿ ಹೆಣ್ಣಿಗೆ ಪ್ರಾಶಸ್ತ್ಯ. ಆಕೆ ಸಾಧನ, ಸಲಕರಣ ಮತ್ತು ಮುಖ್ಯವಾಗಿ ಮರೆಯಬಾರದ ಮಾತೆಂದರೆ ಗಂಡಿನ ಆತ್ಮೋನ್ನತಿಯ ಬೆಳಕಿನಕಂಭ. ಸ್ವಾರಸ್ಯಕರವೆಂದರೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಂತ್ರದೀಕ್ಷೆಯ
ಪ್ರಭಾವ ಕೆಲಸ ಮಾಡಿದ್ದು. ಅದು ಗಾಂಧಿಜಿಯವರ ಅಹಿಂಸಾ ಮಾರ್ಗದಲ್ಲಿಹೇಗೋ ಹಾಗೇ- ಇನ್ನಷ್ಟು ಸ್ಪಷ್ಟವಾಗಿ-ಕ್ರಾಂತಿಕಾರಿಗಳ ತಾಯ್ನಾಡಿನ ಪರಿಕಲ್ಪನೆಯಲ್ಲಿ ಪ್ರಜ್ವಲಿಸಿದೆ. ಮೊದಲಿಗೆ ಗಾಂಧೀಜಿಯವರ ವಿಷಯದಲ್ಲಿ ಈ ಕುರಿತು ಸಿದ್ಧವನಹಳ್ಳಿ ಕೃಷ್ಣಶರ್ಮರ ಮಾತುಗಳು.

Advertisement

“”ಹೆಣ್ಣು ಗಾಂಧೀಜಿಗೆ ತಾಯಿ. ಆಕೆ ಇಂದ್ರಿಯ ಭೋಗದ ಪದಾರ್ಥ ಎಂಬುದನ್ನು ಹೊಲ್ಲ. ಹೆಣ್ಣು ಪಾವನ ರೂಪಿ. ಅಷ್ಟು ಹೊಲಸಾಗಿ ಆಕೆಯನ್ನು ತಿಳಿಯುವುದು ಸಾಧ್ಯವಿಲ್ಲ. ಹಿಂದಿನ ಕಾಲದಲ್ಲೂ ಒಂದೊಂದು ಸಲ ಮಿಂಚಿನಂತೆ ಹೆಣ್ಣಿನ ವಿಷಯದಲ್ಲಿ ಅದು ಹೊಳೆದುಹೋಗಿದೆ. ನೂರು ತಪ್ಪು ಡಲಿ ಹೆಣ್ಣನ್ನು ಹೂವಿನಿಂದಲೂ ಕೂಡ ಹೊಡೆಯಬೇಡ ಎಂದು ತಂತ್ರಶಾಸ್ತ್ರದ ಹಾದಿ ಹಿಡಿದವರು ಹೇಳಿದ್ದಾರೆ. ವೈಷ್ಣವರು ಇನ್ನೂ ಮುಂದೆ ಹೋದರು. ಹೆಣ್ಣಿಗೆ ಪಾಪವೇ ಇಲ್ಲ ಎಂದರು. ಮೊದಲು ಹೇಳಿದವರದು ವಿಚಿತ್ರ ವೈರಾಗ್ಯವಾದರೆ ಇವರದು ವಿಪರೀತಿ ರಾಗ. ಈ ಪಾಪ-ಪುಣ್ಯಗಳ ಬೆಂಕಿ-ತುಪ್ಪಗಳ ವಿಷಯ ವ್ಯವಹಾರದಲ್ಲಿ ಗಾಂಧೀಜಿ ತೊಡಗಿಕೊಳ್ಳರು. ಗಾಂಧೀಜಿಯ ಬ್ರಹ್ಮಚರ್ಯ ಉತ್ತಮ ಜಾತಿಯದು. ಈ ಯುಗ ಕಂಡ ನೈಷ್ಠಿಕ ಬ್ರಹ್ಮಚಾರಿ ಅವರು. ಬ್ರಹ್ಮಚರ್ಯ ವ್ರತ ತೊಟ್ಟ ಮೇಲೆ ಅವರಿಗೆ ಹೆಣ್ಣು ಎನ್ನುವ ಜೀವವೆಲ್ಲ ತಂಗಿಯೋ ಮಗಳ್ಳೋ ಆಗಿ ಹೋಯಿತು. ಈ ನಿಟ್ಟಿನಲ್ಲಿ ನಡೆದವರಿಗೆ ಹೆಣ್ಣು ಅಗ್ನಿ ಕುಂಡವಲ್ಲ, ಯಜ್ಞಕುಂಡ” (ಸಿದ್ಧವನಹಳ್ಳಿ ಕೃಷ್ಣಶರ್ಮ: 1983, ಪರ್ಣಕುಟಿ, ಪುಟ 111).

ಗಾಂಧೀಜಿ ತಂತ್ರಶಾಸ್ತ್ರ ಸಾಧಕ ಎಂದು ಈ ಮಾತಿನ ಅರ್ಥವಲ್ಲ. ಆದರೆ, ವೈಷ್ಣವ ಧರ್ಮದ ಮರ್ಮ ಅರಿತು ಆಚರಿಸಿದ್ದ ಗಾಂಧೀಜಿಯವರ ಮೂಲಕ ಕಂಡೂ ಕಾಣದಂತೆ ಹೆಣ್ಣಿಗಿರುವ ಗೌರವ ಸ್ಥಾನ ಹೆಚ್ಚಿತು. ಇದು ನೈಜ ತಂತ್ರಶಾಸ್ತ್ರಕ್ಕೆ ದೊಡ್ಡ ಕೊಡುಗೆಯೇ ಆಗಿದೆ. ಗಾಂಧೀಜಿಯವರು ಸ್ತ್ರೀಲೋಕದ ಬಗ್ಗೆ ಹೇಳಿರುವ ಈ ಮಾತು ಕೇವಲ
ತಾಂತ್ರಿಕದ ಹೆಸರಿನಲ್ಲಿ ಹೆಣ್ಣಿನ ದೇಹ ಭೋಗದಲ್ಲಿ ತೊಡಗಿರುವವರನ್ನು ಮಾತ್ರವಲ್ಲದೆ, ತಂತ್ರದೊಡನೆ ಏನೂ ಸಂಬಂಧವಿರದ ಸಕಲ ಗಂಡುಗಳನ್ನೂ ಎಚ್ಚರಿಸಿ ತಿವಿಯುವಂತಿದೆ: ನನ್ನ ಹೆಂಡತಿಯೇ ನನ್ನ ಸರ್ವ ಸ್ತ್ರೀಲೋಕ. ಆಕೆಯನ್ನು ಅರ್ಥಮಾಡಿಕೊಂಡಾಗ ನನಗೆ ಇಡೀ ಹೆಣ್ಣು ಜಾತಿಯ ಮನಸ್ಸೇ ಅರ್ಥವಾಯಿತು (ಅದೇ, ಪುಟ 115).
.
ತಾಂತ್ರಿಕ ಪಂಥದ ಪ್ರಭಾವ ಕ್ರಾಂತಿಕಾರಿ ಸಂಘಟನೆಗಳನ್ನು ಹೇಗೆ ಪ್ರಭಾವಿಸಿತ್ತು ಎಂಬುದರ ಚಿತ್ರಣ ಶಿವರಾಮು ಅವರ ಕಥೆ ಒಂದು ವ್ಯಥೆ ಗ್ರಂಥದಲ್ಲಿದೆ. 1902ರಲ್ಲಿ ಸತೀಶ್‌ ಚಂದ್ರಬೋಸ್‌ರಿಂದ ಮೊದಲ್ಗೊಂಡ “ಅನುಶೀಲನ ಸಮಿತಿ’ ಸ್ಫೋಟಕ ವಸ್ತುಗಳ ಬಳಕೆ, ತಯಾರಿಕೆ, ಶಸ್ತ್ರಾಸ್ತ್ರಗಳ ಬಳಕೆ-ತರಬೇತಿಯನ್ನು ನೀಡುವ ಕೇಂದ್ರವಾಗಿತ್ತು. ಬಂಗಾಳದಲ್ಲಿ ತಲೆಯೆತ್ತಿದ ಈ ಕ್ರಾಂತಿಕಾರಿ ಗುಂಪಿನ ಚಟುವಟಿಕೆ ರಹಸ್ಯವಾಗಿದ್ದಲ್ಲದೆ, ಅದರ ಸದಸ್ಯತ್ವ
ಪಡೆಯುವ ಕ್ರಮ ಕಠಿಣವಾಗಿತ್ತು. ರಾಜಕೀಯ ಸ್ವಾತಂತ್ರ್ಯ ಪಡೆಯುವ ಗುರಿಯಿಂದ ಈ ಗುಂಪಿನ ದೀಕ್ಷೆಯ ಕಾರ್ಯಕ್ರಮದ ಹಿಂದೆ ತಾಂತ್ರಿಕ ಪಂಥದ ಪ್ರಭಾವ ಕಂಡುಬರುತ್ತದೆ. ಬಂಕಿಮ, ರವೀಂದ್ರ ಅರವಿಂದರ ಬರಹಗಳ ಮೂಲಕ ಬಂಗಾಳದ/ ಭಾರತದ ವಿವಿಧ ಪ್ರಾಂತಗಳ ಶಕ್ತಿದೇವತೆಯು (ಕಾಳಿ, ದುರ್ಗಿ ಇತ್ಯಾದಿ ರಾಷ್ಟ್ರದೇವತೆಯ ಸ್ವರೂಪ ತಳೆದಿದ್ದಳು.

ಈ ಸಮಿತಿಯ ಹಿರಿಯ ನಾಯಕ ಪುಲಿನ ಬಿಹಾರಿದಾಸ್‌ ಹೊಸಬರಿಗೆ ಪ್ರತಿಜ್ಞೆ ಮಾಡಿಸುತ್ತಿದ್ದರು. “”ಯಾವುದಾದರೂ ಕಾಳಿ ದೇವಸ್ಥಾನದಲ್ಲಿ 10-12 ಜನ ಸೇರುತ್ತಿದ್ದರು. ಆಗ ಹೊರಗಿನವರಾಗಲೀ, ಮಂದಿರದ ಪೂಜಾರಿಯೇ
ಆಗಲೀ ಒಳಗೆ ಪ್ರವೇಶವಿಲ್ಲ. ಹೊಸ ಸದಸ್ಯರು ಕಾಳಿಕಾ ಮಾತೆಗೆ ಪೂಜೆ, ನೈವೇದ್ಯ ಒಪ್ಪಿಸುತ್ತಿದ್ದರು. ಬಳಿಕ ಪ್ರತಿಜ್ಞೆ ಮಾಡಬೇಕಾದವನು ತಾಯಿಯೆದುರು ಮಂಡಿಯೂರಿ ಕುಳಿತುಕೊಳ್ಳುತ್ತಿದ್ದ. ಅವನ ತಲೆಯ ಮೇಲೆ ಭಗವದ್ಗೀತೆ, ಒಂದು ಭರ್ಚಿ ಇಡಲಾಗುತ್ತಿತ್ತು. ಹಿಂದಿನ ದಿನದಿಂದ ಅವನು ಉಪವಾಸ ಇರಬೇಕಾಗಿತ್ತು.
ಕೆಲವೊಮ್ಮೆ ಈ ಪ್ರತಿಜ್ಞಾ ಸ್ವೀಕಾರ ಕಾಳೀಮಂದಿರದ ಬದಲು ಶ್ಮಶಾನದಲ್ಲಿ ನಡೆಯುತ್ತಿತ್ತು. ದೀಕ್ಷೆ ಪಡೆದ ನಂತರ ಹೊಸಬನಿಗೆ ಗುಪ್ತನಾಮ ಕೊಡುತ್ತಿದ್ದರು” (2005: ಪುಟ 101-102).

ಬಂಗಾಳ, ಅಸ್ಸಾಂ ಪ್ರಾಂತ್ಯಗಳು ಹಿಂದಿನಿಂದಲೂ ಶಕ್ತಿ ಪಂಥದ ಮುಖ್ಯ ಸ್ಥಾನಗಳು ಎಂಬುದನ್ನು ಸ್ಮರಿಸಿದರೆ, ರಾಷ್ಟ್ರೀಯ ಆಂದೋಲನದಲ್ಲಿ ತಾಂತ್ರಿಕ-ಶಾಕ್ತಪಂಥದ ಪ್ರಭಾವವನ್ನು ನೋಡುವಾಗ ಆಶ್ಚರ್ಯವೆನಿಸುವುದಿಲ್ಲ.
“ವಂದೇ ಮಾತರಂ’ ಗೀತೆಗೆ “ಆನಂದ ಮಠ’ ಕಾದಂಬರಿಯಿಂದ ಪ್ರತ್ಯೇಕ ಸ್ಥಾನ ದೊರೆತು ಅದು ಸ್ವಾತಂತ್ರ್ಯ ಆಂದೋಲನದ ಸ್ಫೂರ್ತಿ ಗೀತೆಯಾದ ಕಾಲದಲ್ಲಿ ಬಂದ ಅನೇಕ ಹಾಡುಗಳ ಮೇಲೆ ಶಾಕ್ತ ಸಂಪ್ರದಾಯದ ನೇರಪ್ರಭಾವವಿದೆ. ಕಾಲಕ್ರಮದಲ್ಲಿ ಇವು ದಾಖಲಾಗದೆ ಕಣ್ಮರೆಯಾಗಿದ್ದರೂ, ದೊರೆತಿರುವ ಕೆಲವು
ಸಾಲುಗಳನ್ನು ನೋಡಿದರೂ ಶಕ್ತಿ ಸಂಪ್ರದಾಯದ ಮಾತನ್ನು ಸ್ವರೂಪದ ಆರಾಧನೆಯು, 19-20ನೇ ಶತಮಾನದ ಸಂಧಿಕಾಲದಲ್ಲಿ ನೆಲವನ್ನು ತಾಯಿ ಎಂದು ನೋಡುವ ದೃಷ್ಟಿಕೋನಕ್ಕೆ ದಾರಿ ಮಾಡಿಕೊಟ್ಟಿತು ಎಂಬುದು ತಿಳಿಯುತ್ತದೆ.

Advertisement

ವೇದದಲ್ಲಿ ಪೃಥ್ವಿ ಸೂಕ್ತ, ಭೂಸೂಕ್ತಗಳಿದ್ದರೂ, ಹೊಸ ಕಾಲದಲ್ಲಿ ಸ್ವಾತಂತ್ರ್ಯ ಪಡೆಯುವ ಹುಮ್ಮಸ್ಸು ನೆಲತಾಯಿಗೆ ಹೊಸ ಜೀವಕಳೆಯನ್ನು ತಂದುಕೊಟ್ಟಿತು.  ಕೆಲವು ಸ್ವಾತಂತ್ರ್ಯ ಹೋರಾಟಗಾರ ಮಾತುಗಳು ಈ ಹೊಸತನವನ್ನು ಹಿಡಿದಿಟ್ಟಿರುವುದನ್ನು ನೋಡಬಹುದು: 1ಶಕ್ತಿ ಸಂಪ್ರದಾಯದ ದೀಕ್ಷೆ ಪಡೆದ ನಮ್ಮ ಶಿರಸ್ಸು ಸರ್ವಶಕ್ತಳಾದ ತಾಯಿಯ ಚರಣದಲ್ಲಿ ಬಾಗಿದೆ. ಯುದ್ಧದ ಖಣಖಣರವ ಕೇಳಿ ತಾಯಿ ಬರುತ್ತಾಳೆ (ವರದಾಚರಣ ಮಿತ್ರ ಎಂಬ ಕ್ರಾಂತಿಕಾರಿ ಬರೆದ ಹಾಡು). 2ತಾಯಿ! ರತ್ನಾಭರಣಗಳನ್ನು ಕಳಚಿ ಬಿಸುಡು, ನರ ರುಂಡಗಳ ಮಾಲೆ ತೊಡು. ಚಿನ್ನದ ಕೊಳಲು ಪಕ್ಕಕ್ಕಿಡು, ಬಿಚ್ಚುಗತ್ತಿ ಹಿಡಿದು, ರಕ್ಕಸರನ್ನು ಕಡಿದು, ಅವರ ರಕ್ತದಿಂದ ನಿನ್ನ ದಾಹ ತಣಿಸಿಕೊ. (ಹರೀಶಚಂದ್ರ ಚಕ್ರವರ್ತಿ ಎಂಬ ಕ್ರಾಂತಿಕಾರಿಯ ಹಾಡು) 3ರಕ್ತ ಸಮುದ್ರವನ್ನು ಕಡೆದು ನಾವಿಂದು ಅಮೂಲ್ಯ ಸ್ವಾತಂತ್ರ್ಯ
ಲಕ್ಷಿ¾ಯನ್ನು ಮೇಲಕ್ಕೆ ತರುತ್ತೇವೆ, ತಾಯಿ, ರಣಚಂಡಿಯಾಗಿ ನೀ ಏಳು. ನಿನ್ನ ಕಾಲ ಬಳಿ ಅರ್ಪಿಸಲು ನೈವೇದ್ಯ ತಂದಿದ್ದೇವೆ! (ಕಿಶೋರ ಚಂದ್ರ ಗಂಗೂಲಿ ಎಂಬ ಕ್ರಾಂತಿಕಾರಿಯ ಹಾಡು) (ಅದೇ,ಪುಟ 95) ಸ್ವಾತಂತ್ರ್ಯ ಪಡೆಯುವ ತಹ ತಹಕ್ಕೆ ಕೇಂದ್ರ ಆರಾಧ್ಯ ದೇವತೆಯಾಗಿ ಹೀಗೆ ಶಕ್ತಿಯು ಭಾರತಮಾತೆಯಾಗಿ ಅವತರಿಸಿದಳು. ಕಾಲಕಾಲಕ್ಕೆ
ಸಾಮಾಜಿಕ-ಸಾಂಸ್ಕೃತಿಕ ಆವಶ್ಯಕತೆಗೆ ತಕ್ಕಂತೆ ದೇವತೆಗಳು ಹುಟ್ಟುವುದು, ರೂಪಾಂತರಗೊಳ್ಳುವುದು ಭಾರತಕ್ಕೆ ಹೊಸತಲ್ಲ. ಮುಖ್ಯವಾಗಿ ನೆಲದ ಮುಕ್ತಿ, ಸ್ತ್ರೀ ಗೌರವ ಇವು ಗಾಂಧೀಜಿ ಮತ್ತು ಮೆಲೆ ಉಲ್ಲೇಖೀಸಿದ ಕ್ರಾಂತಿಕಾರಿಗಳ
ನಡುವಿನ ಸಾಮಾನ್ಯ ಅಂಶ. ತಂತ್ರವು ಸಮಯ ಬಂದಾಗ ಆಧ್ಯಾತ್ಮಿಕ ಆಯಾಮದೊಡನೇ, ಸಾಮಾಜಿಕ ಜವಾಬ್ದಾರಿಯನ್ನು ವಹಿಸುವುದಕ್ಕೆ ಇದೊಂದು ಉತ್ತಮ ಉದಾಹರಣೆ, ಭಾರತೀಯ ನವೋದಯ ಸಾಹಿತ್ಯದ
ಹಿಂದಿರುವ ಒಂದು ಮುಖ್ಯ ಪ್ರೇರಣೆ ರಾಷ್ಟ್ರೀಯತೆಯ ಹುಡುಕಾಟ, ಈ ಹುಡುಕಾಟಕ್ಕೆ ಶಾಕ್ತತಂತ್ರದ ನೆಲೆಗಟ್ಟಿದೆ.

ಇದೇ ಸಂದರ್ಭದಲ್ಲಿ ಬಂಗಾಲದ ವಿಷಯದಲ್ಲಿ ಮತ್ತೂಂದು ವಿಷಯ ಪ್ರಸ್ತಾಪಿಸಬಹುದು. ಅದು ಭಾರತೀಯ ರೊಮ್ಯಾಂಟಿಸಂನ ಮೂಲದ ಪ್ರಶ್ನೆ. ಬ್ರಿಟಿಷ್‌ ಶಿಕ್ಷಣದ ಪರಿಣಾಮವಾಗಿ ದೇಸೀ ಶಿಕ್ಷಣ ವ್ಯವಸ್ಥೆಗೆ ಪರ್ಯಾಯಮವಾಗಿ
ಬಂದ ಇಂಗ್ಲೆಂಡ್‌ ಮೂಲಕ ಪಠ್ಯಕ್ರಮದಿಂದಾಗಿ ವರ್ಡ್ಸ್‌ವರ್ತ್‌, ಷೆಲ್ಲಿ ಇತ್ಯಾದಿ ರೊಮ್ಯಾಂಟಿಕ್‌ ಕವಿಗಳ ಓದು ಭಾರತಕ್ಕೆ ಬಂದಿತು. ಆ ಮೂಲಕವೇ ಕನ್ನಡ, ಮರಾಠಿ, ಬಂಗಾಲಿಯಲ್ಲಿ ನವೋದಯ ರೊಮ್ಯಾಂಟಿಸಂ ತಳಹದಿಯ ಮೇಲೆ ರೂಪುಗೊಂಡಿತು ಎಂಬ ಜನಪ್ರಿಯವಾದವಿದೆ. ಆದರೆ, ಶಂಕರ ಮೊಕಾಶಿ ಪುಣೇಕರರು ಇದಕ್ಕೆ ವಿರುದ್ಧವಾಗಿ ವಾದ ಹೂಡಿದ್ದಾರೆ. ಅದು ತಾಂತ್ರಿಕ ಪಂಥದ ಆಧಾರದಿಂದ ಭಾರತೀಯ ರೊಮ್ಯಾಂಟಿಸಂನ್ನು ತೋರಿಸುವ ಪ್ರಯತ್ನ.
“”ಇಂಗ್ಲಿಷ್‌ ಶಿಕ್ಷಣ, ಧಾರ್ಮಿಕ ಸುಧಾರಣ ಚಳುವಳಿಗಳು ಬಂಗಾಲದಲ್ಲಿ ಶುರುವಾಯಿತು; ಶಕ್ತಿ ಪೂಜೆಯ ನಾಡಾದ ಬಂಗಾಳದಲ್ಲಿ ರೊಮ್ಯಾಂಟಿಕ್‌ ಕಾವ್ಯದ ಸ್ತ್ರೀ ಸೌಂದರ್ಯದ ಆದರಣೆಗೂ ಶಾಕ್ತ-ತಾಂತ್ರಿಕ ಸಂಪ್ರದಾಯಕ್ಕೂ
ಸುಲಭವಾಗಿ ಮೇಳ ಕೂಡಿತು” (1995: ಪುಟ 117).

 ಈ ಹಿನ್ನೆಲೆಯಲ್ಲಿ ಪುಣೇಕರರು ವಾದ ಹೀಗಿದೆ: 1 ಶ್ರೀ ರಾಮಕೃಷ್ಣ ಪರಮಹಂಸ (ವೇದಾಂತ), ಶ್ರೀ ವಿವೇಕಾನಂದ (ಸನ್ಯಾಸ ಮಾರ್ಗ) ಗಳಿಂದ ಇಂಗ್ಲಿಷ್‌ ವಾತಾವರಣ, ಶಾಕ್ತ ಪ್ರಭಾವದ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ಹೊಸತನ ಬಂದಿತು. ಮುಂದೆ ಅರವಿಂದ “ದೇಹಾತ್ಮಗಳ ಸಾಮನ್ವಯಿಕ ತತ್ವ’ವೂ ಮೂಡಿತು.

2 ಬ್ರಜೇಂದ್ರನಾಥ ಸೀಲರು “ಪಾಶ್ಚಾತ್ಯ ರೊಮ್ಯಾಂಟಿಸಿಝಂನ್ನೇ ಭಾರತೀಯ ತತ್ವದ ಅಂಗವಾಗಿ ನೊಣಗಲು ಯತ್ನಿಸಿದರು’. 

3 ಪುಣೇಕರರು ಶಾಕ್ತ ಮೂಲದ ರೊಮ್ಯಾಂಟಿಸಂ ಈ ಮೊದಲೇ ಆಗಿತ್ತು ಎಂಬುದನ್ನು ತೋರಿಸಿಕೊಟ್ಟಿರುವುದು ಸ್ವಾರಸ್ಯಕರವಾಗಿದೆ. “”ಒಂದು ರೀತಿಯಿಂದ  naturalaisation (humanisation) of the supernatural ಬಂಗಾಳದಲ್ಲಿ ಎಂದೋ ಆಗಿ ಹೋಗಿತ್ತು. ಚೈತನ್ಯದೇವ ಕಾನ್ಹಪಾದ (ಡೊಂಬಿ ಪದಗಳು) ಜಾÂಯಸಿ, ವಿದ್ಯಾಪತಿ, ಇವರೆಲ್ಲರೂ ಶಾಕ್ತ ರೊಮ್ಯಾಂಟಿಕರೇ. ಜಾÂಯಸಿಯಂತೂ ಮುಸಲ್ಮಾನನು. ಟಾಗೋರರ
ಹ್ಯುಮನಿಸಂ ಬಂಗಾಳಕ್ಕೆ ಅವಶ್ಯವೇ ಇರಲಿಲ್ಲ. ಬಂದದ್ದು ಒಳ್ಳೆಯದೇ ಆಯಿತು” (ಅದೇ).

4ಬಹಳ ಮುಖ್ಯವಾಗಿ ಪುಣೇಕರರ ಲಕ್ಷ್ಯವಿರುವುದು ಅದುವರೆಗೂ ಇದ್ದ “ಮೂಲ ಶಾಕ್ತ ಸ್ವರೂಪದ ritualism ಅಳಿದು ಅದರ ಬದಲು ತುಸು intellectural abstracation ಬೆರತು’ಕೊಂಡಿದ್ದು ಬಗ್ಗೆ. ನವೋದಯದಲ್ಲಿ ಉಂಟಾದ ಭಾಷಾ ಸುಕುಮಾರತೆಯ ಮೂಲ ಇಲ್ಲದೆ! ಮೊಕಾಶಿ ಕೊಡುವ ಪರಿಕಲ್ಪನಾತ್ಮಕ ಹಂತದಲ್ಲಿಲ್ಲದಿದ್ದರೂ ಭಾಷಿಕ ಹದದಲ್ಲಿ ಬಂದ ಬದಲಾವಣೆ ಎಷ್ಟೆಂದರೆ ಇಂದು ನಾವು ಶಿಕ್ಷಿತರು ತಂತ್ರವೆಂದರೆ ನಾಚುವಷ್ಟು ಮುಂದೆ ಬಂದದ್ದರ
ಸೂಚಕವಾಗಿದೆ. ಅವರು ಸೂಚಿಸುವಂತೆ “ಮಾತೆ’ ಪದದ ಬದಲು “ಮಾತೃಶಕ್ತಿ’; “ಕಾಮ’ದ ಬದಲು “ಪ್ರೇಮ’, “ತ್ರಿಪುರ ಸುಂದರಿ’ ತತ್ವದ ಜಾಗದಲ್ಲಿ “ಸೌಂದರ್ಯ ತತ್ವ’; “ಸೃಷ್ಟಿ’ ಬದಲು “ನಿಸರ್ಗ. ಅಂದರೆ, ರಾಷ್ಟ್ರೀಯ ಆಂದೋಲನದ ಹಿನ್ನೆಲೆಯಲ್ಲಿ ತಾಯಿತತ್ವ ಆಳವಾಗಿ ಕೆಲಸ ಮಾಡಿದ್ದರೂ ಅದರ ಸಾಮಾಜಿಕ-ತಾತ್ವಿಕ ನೆಲೆಗಳು ನಿರ್ಲಕ್ಷ್ಯಕ್ಕೆ ಒಳಗಾದವು.

Advertisement

Udayavani is now on Telegram. Click here to join our channel and stay updated with the latest news.

Next