Advertisement

ವಿದ್ಯುತ್‌ ದರ ಪರಿಷ್ಕರಣೆ ಅನಿವಾರ್ಯ: ಮೆಸ್ಕಾಂ; ಅನಗತ್ಯ: ಗ್ರಾಹಕರು

02:54 PM Feb 28, 2017 | Team Udayavani |

ಮಂಗಳೂರು: ವಿತ್ತೀಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿದ್ಯುತ್‌ ದರ ಏರಿಕೆ ಅಗತ್ಯವೆಂದು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗದ ಮುಂದೆ ಮೆಸ್ಕಾಂ ಪ್ರತಿಪಾದಿಸಿದರೆ ಬರ ಪರಿಸ್ಥಿತಿ ಹಾಗೂ ಹಣಕಾಸಿನ ಕೊರತೆಯನ್ನು ಇತರ ಮೂಲಗಳಿಂದ ಭರಿಸಲು ಸಾಧ್ಯವಿರುವುದರಿಂದ ದರ ಏರಿಕೆಗೆ ಅನುಮತಿ ನೀಡಬಾರದು ಎಂದು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಮನವಿ ಮಾಡಿದರು.

Advertisement

ಪ್ರತಿ ಯೂನಿಟ್‌ ವಿದ್ಯುತ್‌ಗೆ 1.48 ರೂ. ಏರಿಕೆ ಮಾಡಬೇಕು ಎಂದು ಕೋರಿ ಆಯೋಗಕ್ಕೆ ಮೆಸ್ಕಾಂ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ದರ ಪರಿಷ್ಕರಣೆ ಬಗ್ಗೆ ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ಶಂಕರಲಿಂಗೇ ಗೌಡ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಚಾರಣೆ ಜರಗಿತು.

ಕೊರತೆ ನೀಗಿಸಲು ಏರಿಕೆ:ಎಂಡಿ
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಅವರು ಕಂಪೆನಿಯ ಸೇವೆ, ವ್ಯವಹಾರ ಹಾಗೂ ಸ್ವರೂಪದ ಬಗ್ಗೆ ವಿವರಿಸಿ 2017-18ನೇ ಸಾಲಿನಲ್ಲಿ ಒಟ್ಟು 3558.09 ಕೋ.ರೂ. ಅಗತ್ಯ ಅಂದಾಜಿಸಲಾಗಿದೆ. 2857.64 ಕೋ.ರೂ. ಕಂದಾಯ ನಿರೀಕ್ಷಿಸಲಾಗಿದ್ದು ಒಟ್ಟು 700 ಕೋ.ರೂ. ಕೊರತೆ ತಲೆದೋರಲಿದೆ. ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ವಿದ್ಯುತ್‌ ಖರೀದಿಸುವುದು ಹಾಗೂ ವಿದ್ಯುತ್‌ ಜಾಲವನ್ನು ಉತ್ಕೃಷ್ಟ ಮಟ್ಟದಲ್ಲಿ ನಿರ್ವಹಣೆ ಮಾಡುವುದು ಮತ್ತು ವಿಶ್ವಸನೀಯ ಗ್ರಾಹಕ ಸ್ನೇಹಿ ಕಾರ್ಯಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ವಿದ್ಯುತ್‌ ಖರೀದಿ ಪ್ರಮಾಣ ಹಾಗೂ ವಿದ್ಯುತ್‌ ಖರೀದಿ ವೆಚ್ಚದಲ್ಲಿ ಏರಿಕೆಯಾಗಿರುತ್ತದೆ. ಆದುದರಿಂದ ವಿದ್ಯುತ್‌ ದರ ಏರಿಕೆ ಅಗತ್ಯವಾಗಿದ್ದು ಆಯೋಗ ಅನುಮತಿ ನೀಡಬೇಕು ಎಂದು ಕೋರಿದರು.

ವಿದ್ಯುತ್‌ ದರ ಏರಿಕೆ ಬೇಡ: ಸಾರ್ವಜನಿಕರು
ರೈತರ ಪರವಾಗಿ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ ಭಾರತೀಯ ಕಿಸಾನ್‌ ಸಂಘದ ಸತ್ಯನಾರಾಯಣ ಉಡುಪ ಅವರು ರಾಜ್ಯದ ಇತರ ಎಸ್ಕಾಂಗಳಿಗೆ ಹೋಲಿಸಿದರೆ ಮೆಸ್ಕಾಂನ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇದಲ್ಲದೆ ಮೆಸ್ಕಾಂಗೆ ಸರಕಾರದಿಂದ ಗಣನೀಯ ಪ್ರಮಾಣದಲ್ಲಿ ಸಹಾಯ ಧನಗಳು ಹಾಗೂ ಇತರ ಎಸ್ಕಾಂಗಳಿಂದ ವಿದ್ಯುತ್‌ ಸರಬರಾಜು ಬಗ್ಗೆ ಹಣ ಬಾಕಿ ಇದ್ದು ಇದನ್ನು ವಸೂಲಿ ಮಾಡಿ ಕೊರತೆಯನ್ನು ಸರಿದೂಗಿಸಲು ಸಾಧ್ಯವಿದೆ. ಈ ಬಾರಿ ಬರ ಪರಿಸ್ಥಿತಿಯೂ ಇದೆ. ಆದುದರಿಂದ ಆಯೋಗ ಮೆಸ್ಕಾಂಗೆ ವಿದ್ಯುತ್‌ ದರ ಏರಿಕೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು. ಮೆಸ್ಕಾಂ ವ್ಯಾಪ್ತಿಯಲ್ಲಿ 29 ಲಕ್ಷ ಎಲ್‌ಇಡಿ ಬಲ್ಬ್ಗಳು ವಿತರಿಸಲಾಗಿದ್ದು ಕಳಪೆ ಗುಣಮಟ್ಟದ ಪರಿಣಾಮ ಶೇ.70ರಷ್ಟು ಹಾಳಾಗಿವೆ ಎಂದವರು ವಿವರಿಸಿದರು. ಸಂಘಟನೆ ಪರವಾಗಿ ಬಿ.ವಿ.ಪೂಜಾರಿ, ಗೋವಿಂದರಾಜು, ಶಾಂತಪ್ಪ ಗೌಡ ಅವರು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದರು. 

ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಜೀವನ್‌ ಸಲ್ದಾನ, ಶ್ರೀನಿವಾಸ ಕಾಮತ್‌ ಹಾಗೂ ನಜೀರ್‌, ವತಿಕಾ ಪೈ, ಶೈತ್ಯಾಗಾರ ಮತ್ತು ಶೀಥಲೀಕರಣ ಘಟಕದ ದೇವದಾಸ್‌, ರಾಜೇಂದ್ರ ಸುವರ್ಣ, ಸಣ್ಣ ಕೈಗಾರಿಕ ಸಂಘದ ಅಧ್ಯಕ್ಷ ಹೆನ್ರಿ ಪಿಂಟೋ, ಪರಮೇಶ್ವರಪ್ಪ, ಶೋಭನ್‌ಬಾಬು, ರಾಮಕೃಷ್ಣ ಶರ್ಮಾ, ಶ್ರೀನಿವಾಸ ಭಟ್‌, ವೆಂಕಟಗಿರಿ, ಬಾಲಸುಬ್ರಹ್ಮಣ್ಯ ಭಟ್‌, ನರಸಿಂಹ ನಾಯಕ್‌, ಹನುಮಂತ ಕಾಮತ್‌, ಜೆ.ಬಿ.ಡಿಮೆಲ್ಲೊ, ಎಂಎಸ್‌ಇಝಡ್‌ನ‌ ಸೂರ್ಯನಾರಾಯಣ, ನೈರುತ್ಯ ರೈಲ್ವೆಯ ಸಗಾಯಿ ಮಣಿರಾಜನ್‌ ಮೊದಲಾದವರು ಮಾತನಾಡಿ ವಿದ್ಯುತ್‌ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದರು.

Advertisement

ಆಯೋಗದ ಸದಸ್ಯರಾದ ಎಚ್‌.ಡಿ. ಅರುಣ್‌ ಕುಮಾರ್‌ ಹಾಗೂ ಡಿ.ಬಿ. ಮಣಿವೇಲು ಉಪಸ್ಥಿತರಿದ್ದರು.

ಎ. 1ರಿಂದ ದರ ಪರಿಷ್ಕರಣೆ
ವಿದ್ಯುತ್‌ ದರ ಪರಿಷ್ಕರಣೆ ಬಗ್ಗೆ ಈಗಾಗಲೇ ಮೈಸೂರು, ಬೆಂಗಳೂರು, ಕೆಪಿಟಿಸಿಎಲ್‌ ಹಾಗೂ ಮಂಗಳೂರು ಎಸ್ಕಾಂಗಳಲ್ಲಿ ಸಾರ್ವಜನಿಕ ವಿಚಾರಣೆ ಮುಗಿದಿದೆ. ಹುಬ್ಬಳ್ಳಿ ಹಾಗೂ ಗುಲ್ಬರ್ಗಾದಲ್ಲಿ ಶೀಘ್ರ ವಿಚಾರಣೆ ನಡೆಯಲಿದ್ದು ಎ. 1ರಿಂದ ದರ ಪರಿಷ್ಕರಣೆಯಾಗಲಿದೆ ಎಂದು ಆಯೋಗದ ಅಧ್ಯಕ್ಷ ಶಂಕರಲಿಂಗೇಗೌಡ ತಿಳಿಸಿದರು. ಗ್ರಾಹಕರಿಂದ ಬರುವ ದೂರುಗಳಿಗೆ ಶೀಘ್ರ ಸ್ಪಂದಿಸಿ ಪರಿಹರಿಸದಿದ್ದರೆ ಎಸ್ಕಾಂಗಳಿಗೆ ದಂಡ ವಿಧಿಸುವ ಕ್ರಮವನ್ನು ಅನುಸರಿಸಲು ಆಯೋಗ ನಿರ್ಧರಿಸಿದ್ದು ಇದು ಕೂಡಾ ಎ.1 ರಿಂದು ಜಾರಿಗೆ ಬರಲಿದೆ ಎಂದವರು ತಿಳಿಸಿದರು.

2018ರ ಮೇ ಅಂತ್ಯಕ್ಕೆ ರಾಜ್ಯದಲ್ಲಿ 2000 ಮೆ.ವಾ. ಸೌರ ವಿದ್ಯುತ್‌ ಉತ್ಪಾದನೆಯಾಗಲಿದ್ದು ವಿದ್ಯುತ್‌ ಸರಬರಾಜ್‌ ಶೆಡ್ನೂಲ್‌ ಹೊಂದಾಣಿಕೆಯಲ್ಲಿ ಹೊಸ ಸವಾಲು ಎದುರಾಗುವ ನಿರೀಕ್ಷೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next