Advertisement

ಸಂಭ್ರಮದ ನಡುವೆ ಓದುವ ಅನಿವಾರ್ಯತೆ

12:52 AM Sep 18, 2019 | Team Udayavani |

ಮಂಗಳೂರು: ದಸರಾ ರಜೆಯ ಬಳಿಕ ಮಧ್ಯಾವಧಿ ಪರೀಕ್ಷೆ ನಡೆಸಲು ನಿರ್ಧರಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರಮದಿಂದಾಗಿ ಈ ಬಾರಿ ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳಿಗೆ ದಸರಾ ಹಬ್ಬದ ಸಂಭ್ರಮ ಇಲ್ಲದಂತಾಗಿದೆ. ಶಿಕ್ಷಕರಿಂದಲೂ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.

Advertisement

ಪ್ರತಿ ವರ್ಷ ಸೆ. 15ರಿಂದ 26ರ ತನಕ ಪರೀಕ್ಷೆ ನಡೆಸಿ ಸೆ. 28ರಿಂದ ಅ. 13ರ ವರೆಗೆ ರಜೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ರಜೆ ವೇಳಾಪಟ್ಟಿಯಂತೆ ಇದ್ದರೂ ಪರೀಕ್ಷೆ ಮಾತ್ರ ರಜೆಯ ಬಳಿಕ ಅ. 16ರಿಂದ ನಡೆಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ಉಪನ್ಯಾಸಕರು ಚಿಂತೆಗೀಡಾಗಿದ್ದಾರೆ. ರಜೆ ಪೂರ್ತಿ ಪರೀಕ್ಷೆಯ ಗುಂಗಿದ್ದು, ದಸರಾ ಕಣ್ತುಂಬಿಕೊಳ್ಳಲು ಸಾಧ್ಯವಾಗದು ಎಂಬುದು ಕಾರಣ.

ಈ ತಿರ್ಮಾನಕ್ಕೆ ಕಾರಣ ಕೇಳಿದರೆ, ಮಕ್ಕಳ ದಾಖಲಾತಿ ವಿಳಂಬ, ಪಾಠ ಆಗಿಲ್ಲ ಎಂಬ ಕಾರಣವನ್ನು ಇಲಾಖೆ ಹೇಳುತ್ತಿದೆ ಎಂದು ಕಾಲೇಜೊಂದರ ಪ್ರಾಂಶುಪಾಲ ವಿಠಲ ಎ. ತಿಳಿಸಿದ್ದಾರೆ.

ಅಂಕ ಗಳಿಕೆಯ ಮೇಲೂ ಪರಿಣಾಮ?
ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನಹರಿಸುತ್ತಾರೆ. ಪರೀಕ್ಷಾ ದಿನದವರೆಗೂ ಪುನರ್ಮನನ ಮಾಡುವುದರಿಂದ ಮತ್ತು ಸಂಶಯ ಪರಿಹರಿಸಲು ಉಪನ್ಯಾಸಕರು ಲಭ್ಯರಿರುವು ದರಿಂದ ಹೆಚ್ಚು ಅನುಕೂಲವಾಗುತ್ತದೆ. ರಜೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಅಭ್ಯಾಸ ಮಾಡುವುದು ಅನುಮಾನವೇ. ಇದು ಅಂಕ ಗಳಿಕೆಯ ಮೇಲೆ ಪರಿಣಾಮ ಬೀರುವ ಆತಂಕವಿದೆ ಎನ್ನುತ್ತಾರೆ ಉಪನ್ಯಾಸಕರು.

ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದು
ಪ್ರಥಮ ಪಿಯುಸಿಗೆ ಆಗಸ್ಟ್‌ ವರೆಗೂ ದಾಖಲಾತಿ ನಡೆದಿದೆ. ದಾಖಲಾತಿ ವಿಳಂಬ ಮತ್ತು ಪರೀಕ್ಷೆಗೆ ಬೇಕಾದಷ್ಟು ಪಠ್ಯ ಬೋಧನೆ ಆಗದ ಹಿನ್ನೆಲೆಯಲ್ಲಿ ರಜೆಯ ಬಳಿಕ ಪರೀಕ್ಷೆ ನಡೆಸಲಾಗುತ್ತದೆ. ದಸರಾ ಇದ್ದರೂ ವಿದ್ಯಾರ್ಥಿಗಳಿಗೆ ಓದಲು ಸಮಸ್ಯೆ ಆಗದು.
– ವಾಸುದೇವ ಕಾಮತ್‌
ಉಪ ನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ

Advertisement

ಮೊದಲಿನಂತೆಯೇ ಪರೀಕ್ಷೆ ನಡೆಯಲಿ
ರಜೆಯ ಬಳಿಕ ಪರೀಕ್ಷೆ ಇರಿಸಿರುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳು ದಸರಾವನ್ನು ಆಸ್ವಾದಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪ.ಪೂ. ಶಿಕ್ಷಣ ಮಂಡಳಿಗೆ ಮನವಿ ಮಾಡಲಾಗಿದ್ದು, ಮೊದಲಿನಂತೆಯೇ ಪರೀಕ್ಷೆಗಳನ್ನು ನಡೆಸುವಂತೆ ಆಗ್ರಹಿಸಿದ್ದೇವೆ.
– ಉಮೇಶ್‌ ಕರ್ಕೇರ, ದ.ಕ.ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ

ಪ್ರೌಢಶಾಲೆಗೆ ಯಥಾ ಪ್ರಕಾರ
ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ರಜೆಯ ಬಳಿಕ ಪರೀಕ್ಷೆ ನಡೆಸುವ ಯಾವುದೇ ಪ್ರಸ್ತಾವ ಬಂದಿಲ್ಲ.
– ವೈ. ಶಿವರಾಮಯ್ಯ ಡಿಡಿಪಿಐ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next