ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ತಾವು ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ. ಬದಲಾಗಿ ಅಸಮಾನತೆ, ಆರ್ಥಿಕ ಸಂಕಷ್ಟ ಮೊದಲಾದ ಸಮಸ್ಯೆಗಳನ್ನು ಹುಟ್ಟುಹಾಕಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಅರೋಪಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ, ರಾಜ್ಯಮಟ್ಟದ ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಭಯದ
ವಾತಾವರಣದಲ್ಲಿ ಬದುಕುತ್ತಿದ್ದಾರೆ. ಮುಂದೆ ಹೀಗಾಗಬಾರದು ಎಂದರೆ ಮುಸ್ಲಿಮರು ಜಾತ್ಯತೀತ ಪಕ್ಷಕ್ಕೆ ಮತ ಹಾಕಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ ಅಚ್ಚೇ ದಿನ್ ಬರಲೇ ಇಲ್ಲ. ವಿದೇಶದಲ್ಲಿರುವ ಕಪ್ಪು$ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ. ಠೇವಣಿ ಮಾಡುವುದಾಗಿ ಹೇಳಿದ್ದರು. ಅದ್ಯಾವುದನ್ನು ಈಡೇರಿಸಿಲ್ಲ. ಕಾಳಧನವನ್ನು ನಿಯಂತ್ರಿಸುವ ಸಲುವಾಗಿ ನಗದು ಅಮಾನ್ಯಿಕರಣ ಮಾಡಿದರು. ಇದರಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದು ಕೊಂಡರು ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಯ ಕಡೆ ಗಮನ ನೀಡುತ್ತಿಲ್ಲ. ಮನ್ ಕೀ ಬಾತ್ ಎಂದರೆ, ಪತ್ನಿಯ ಜತೆ, ಪತಿರಾಯ ಮಾತನಾಡುವುದು ಎಂದರ್ಥ. ಅಷ್ಟೇ ಅಲ್ಲದೆ, ಇದು ವೈಯುಕ್ತಿಕ ಬದುಕಿಗೆ ಸೀಮಿತ ಎಂದು ವ್ಯಂಗ್ಯವಾಡಿದರು. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮನ್ ಕೀ ಬಾತ್ ಬೇಕಿಲ್ಲ. ಕಾಮ್ ಕೀ ಬಾತ್ ಬೇಕಿದೆ. ಭಾಷಣ ಮಾಡಿಕೊಂಡು ಕಾಲಕಳೆಯುವವರನ್ನು ಸೋಲಿಸಿ ಮನೆಗೆ ಕಳುಹಿಸಬೇಕೆಂದು ಹೇಳಿದರು.
ಕೇಂದ್ರದ ಮಾಜಿ ಸಚಿವ ರೆಹಮಾನ್‌ಖಾನ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ರಹೀಂಖಾನ್, ಯು.ಟಿ.ಖಾದರ್, ಮಾಜಿ ಸಚಿವ ರೋಷನ್‌ಬೇಗ್, ಶಾಸಕ ಹ್ಯಾರೀಸ್, ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ನದೀಮ್ ಝಾವಿದ್, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಸ್ತುವಾರಿ ಡಾ.ಜಫರ್ ಅಹ್ಮದ್ ಖಾನ್, ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ವೈ.ಸಯೀದ್ ಅಹ್ಮದ್, ಮುಖಂಡರಾದ ಸಲೀಂ ಆಹಮದ್ ಮೊದಲಾದವರು ಉಪಸ್ಥಿತರಿದ್ದರು.