Advertisement

ಭಾರತ ಕ್ರಿಕೆಟ್‌ ವ್ಯವಸ್ಥೆ ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ: ಯುವಿ ಬೇಸರ

10:33 AM Sep 30, 2019 | sudhir |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ವ್ಯವಸ್ಥಾಪಕರು ಬೆಂಬಲಿಸಿದ್ದರೆ ತನಗೆ ಇನ್ನೊಂದು ವಿಶ್ವಕಪ್‌ ಆಡಲು ಸಾಧ್ಯವಿತ್ತು ಎಂದು ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಪಂದ್ಯದಲ್ಲಿ ತಾನು ಪಂದ್ಯಶ್ರೇಷ್ಠನಾಗಿದ್ದೆ. ಆದರೂ ಕೂಟದ ಅನಂತರ ತನ್ನನ್ನು ತಂಡದಿಂದ ಕೈಬಿಡಲಾಯಿತು ಎಂದು ಅವರು ನೊಂದು ನುಡಿದಿದ್ದಾರೆ.

Advertisement

2007ರ ಟಿ20 ವಿಶ್ವಕಪ್‌ ಹಾಗೂ 2011ರ ಏಕದಿನ ವಿಶ್ವಕಪ್‌ ವಿಶ್ವಕಪ್‌ ವಿಜಯದಲ್ಲಿ ಅತಿಮುಖ್ಯ ಪಾತ್ರ ವಹಿಸಿರುವ ಯುವಿಗೆ ಅನಂತರ ಯಾವುದೇ ಏಕದಿನ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. 2019ರ ವಿಶ್ವಕಪ್‌ನಲ್ಲಿ ಅವರು ಆಡಲೇಬೇಕೆಂಬ ಬಯಕೆ ಹೊಂದಿದ್ದರು. ಆದರೆ ಅವರ ಕಳಪೆ ಫಾರ್ಮ್ ಅದಕ್ಕೆ ಬೆಂಬಲ ನೀಡಲಿಲ್ಲ. ಅದಕ್ಕೂ ಕೆಲವು ವರ್ಷ ಮುನ್ನವೇ ಅವರು ಶಾಶ್ವತವಾಗಿ ಸ್ಥಾನ ಕಳೆದುಕೊಂಡಿದ್ದರು. ತಂಡದಿಂದ ಹೊರಹಾಕುವಾಗ ತನ್ನೊಂದಿಗೆ ಆಯ್ಕೆ ಮಂಡಳಿ ನಡೆದುಕೊಂಡ ರೀತಿ ಬಗ್ಗೆ ಯುವಿ ಬೇಸರ ವ್ಯಕ್ತಪಡಿಸಿದ್ದಾರೆ.

ಯೋ ಯೋ ಟೆಸ್ಟ್‌ ತೇರ್ಗಡೆ
2017ರ ಚಾಂಪಿಯನ್ಸ್‌ ಟ್ರೋಫಿ ಬಳಿಕ ತನಗೆ ಶ್ರೀಲಂಕಾ ಪ್ರವಾಸಕ್ಕೆ ಸಜ್ಜಾಗುವಂತೆ ತಿಳಿಸಲಾಯಿತು. ಅನಂತರ ದಿಢೀರನೇ ಯೋ ಯೋ ಟೆಸ್ಟ್‌ನಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ತಿಳಿಸಲಾಯಿತು. ಆಗ 36 ವರ್ಷದವನಾಗಿದ್ದ ತಾನು ಯೋ ಯೋದಲ್ಲಿ ತೇರ್ಗಡೆಯಾಗುವುದಿಲ್ಲವೆಂದು ಅವರು ಭಾವಿಸಿದ್ದರು. ಆದರೆ ತಾನು ಅದರಲ್ಲಿ ಯಶಸ್ವಿಯಾದೆ. ಅನಂತರ ಮತ್ತೆ ಅಭಿಪ್ರಾಯ ಬದಲಿಸಿದ ವ್ಯವಸ್ಥಾಪಕರು, ದೇಶಿ ಕೂಟದಲ್ಲಿ ಆಡಿ ಯಶಸ್ವಿಯಾಗುವಂತೆ ತಿಳಿಸಿದರು. ಇದರ ಬದಲು ನೇರವಾಗಿ ತನಗೆ ವಿಷಯ ತಿಳಿಸಿದ್ದರೆ, ತನಗೆ ನಿವೃತ್ತಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ಯುವಿ ಹೇಳಿಕೊಂಡಿದ್ದಾರೆ.

ನಿವೃತ್ತಿ ತನಗೆ ಸ್ವಲ್ಪಮಟ್ಟಿಗೆ ಹೊರೆಯಾಯಿತು. ಆದರೆ ಸರಿಯಾದ ಸಮಯಕ್ಕೆ ತಾನು ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next