ಶಿರಸಿ: ಸ್ಕೇಟಿಂಗ್ ಒಂದು ಸಾಹಸ ಕ್ರೀಡೆಯಾಗಿದ್ದು, ಈ ಸ್ಕೇಟಿಂಗ್ ಮಾಡುವುದರಿಂದ ಎಂಡೋಫೀನ್ಸ್ ಎಂಬ ಹಾರ್ಮೋನ್ಸ್ ಮೆದುಳಿನಲ್ಲಿ ಉತ್ಪತ್ತಿಯಾಗುತ್ತದೆ. ಇದು ನಮ್ಮ ದೇಹವನ್ನು ಯಾವತ್ತೂ ಲವಲವಿಕೆಯಿಂದ ಇಟ್ಟಿರುತ್ತದೆ ಎಂದು ಭಾರತೀಯ ಸೇನೆಯ ನಿವೃತ್ತ ಸುಬೆದಾರ ಇ ರಾಮು ಹೇಳಿದರು.
ಅವರು ಅದ್ವೈತ ಸ್ಕೇಟಿಂಗ್ ಕ್ಲಬಿನಲ್ಲಿ ನಡೆದ ಹತ್ತು ದಿನಗಳ ಸ್ಕೇಟಿಂಗ್ ಶಿಬಿರದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.
ಶಿರಸಿಯಲ್ಲಿ ಈ ಕ್ರೀಡೆಗೆ ತರಬೇತಿಯನ್ನು ಹಾಗೂ ಪ್ರೋತ್ಸಾಹವನ್ನು ನೀಡುತ್ತ ಬಂದಿರುವ ಅದ್ವೈತ ಸ್ಕೇಟಿಂಗ್ ಕ್ಲಬ್ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಈಗಾಗಲೇ ನೂರಾರು ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದು, ಮುಂದೇಯೂ ಎಲ್ಲ ಕ್ರೀಡಾಪಟುಗಳಿಗೆ ಯಶಸ್ಸು ಸಿಗಲಿ ಹಾಗೂ ಇಂದು ಎಲ್ಲ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದೆ. ಭಾರತೀಯ ಸೈನ್ಯವೂ ಇಂದು ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಬಂಗಾರದ ಪದಕವನ್ನು ಗೆದ್ದು, ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅದ್ವೈತ ಸ್ಕೇಟಿಂಗ್ ಕ್ಲಬ್‍ನ ಶಂಕರ ಗೌಡ ಹಾಗೂ ರಾಜ್ಯ ಮಟ್ಟದ ಕ್ರೀಡಾಪಟುಗಳಾದ ಅದ್ವೈತ ಕುಡಾಳಕರ, ನವೀನ ಮಡಿವಾಳರ, ಚೈತನ್ಯ, ಯಶ್, ತರುಣ, ಅದ್ವೈತ ದೇವ್ ಹಾಗೂ ಶ್ರಿವಾಸ್ತ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ಮಟ್ಟದ ರೋಲರ್ ಹಾಕಿ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಅದ್ವೈತ ಸ್ಕೇಟಿಂಗ್ ಕ್ಲಬಿನಿಂದ ಮೂರು ಬಾರಿ ಪ್ರತಿನಿಧಿಸಿದ ಮಾನ್ಯತಾ ಅಂಗಡಿ ಹಾಗೂ ಮೊಹಾಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಖುಷಿ ಸಾಲೇರ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅದ್ವೈತ ಸ್ಕೇಟಿಂಗ್ ಕ್ಲಬ್ ಅಧ್ಯಕ್ಷ ಕಿರಣಕುಮಾರ, ವಿಶ್ವನಾಥ ಕುಡಾಳಕರ, ಕ್ಲಬಿನ ಪ್ರಧಾನ ಕಾರ್ಯದರ್ಶಿ ಗೌರಿ ಲೋಕೇಶ್, ಸುಲಕ್ಷಣಾ, ಪಯಣ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯ ಪರಮೇಶ್ವರ, ತರಬೇತುದಾರರಾದ ಶ್ಯಾಮಸುಂದರ, ತರುಣ ಗೌಳಿ, ಟ್ರಾಕ್ ಟಿಮಂ ಸದಸ್ಯರು ಹಾಗೂ ಪಾಲಕ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅರ್ಚನಾ ಪಾವುಸ್ಕರ ನಿರೂಪಿಸಿದರು.