Advertisement

ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಸವಾಲಿನ ಹಾದಿ

02:33 AM Jun 03, 2020 | Sriram |

ದೇಶವೀಗ ಬಹುದೊಡ್ಡ ಸವಾಲನ್ನು ಎದುರಿಸುತ್ತಿದೆ. ಲಾಕ್‌ಡೌನ್‌ ನಿರ್ಬಂಧಗಳ ಸಡಿಲಿಕೆಯ ನಂತರದಿಂದ ಸೋಂಕಿತರ ಸಂಖ್ಯೆ ಅಪಾರ ಪ್ರಮಾಣದಲ್ಲಿ ವೇಗವಾಗಿ ವೃದ್ಧಿಸುತ್ತಿದ್ದು, ಈಗ ಎರಡು ಲಕ್ಷ ಸೋಂಕಿತರು ಪತ್ತೆಯಾಗಿದ್ದರೆ, ದೇಶವು ಜಾಗತಿಕ ಹತ್ತು ಹಾಟ್‌ಸ್ಪಾಟ್‌ಗಳಲ್ಲಿ ಏಳನೇ ಸ್ಥಾನಕ್ಕೆ ಏರಿದೆ. ಮಾರ್ಚ್‌ ತಿಂಗಳಿಂದ ದೇಶಾದ್ಯಂತ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಆರೋಗ್ಯ ಇಲಾಖೆಗಳು, ಆಡಳಿತಗಳ ನಿರಂತರ ಪರಿಶ್ರಮ ಹಾಗೂ ಕಟ್ಟುನಿಟ್ಟಾದ ಲಾಕ್‌ಡೌನ್‌ನ ಹೊರತಾಗಿಯೂ ಸೋಂಕಿತರ ಸಂಖ್ಯೆ ಈ ಪ್ರಮಾಣದಲ್ಲಿದೆ ಎನ್ನುವುದು ಆಘಾತ ಮೂಡಿಸುತ್ತದೆ. ಆದರೆ, ಒಂದು ವೇಳೆ ಕಟ್ಟುನಿಟ್ಟಾದ ಲಾಕ್‌ಡೌನ್‌ ತರದೇ ಹೋಗಿದ್ದರೆ ಪರಿಸ್ಥಿತಿ ಇನ್ನು ಹೇಗೆ ಇರುತ್ತಿತ್ತೋ ಎಂದು ಯೋಚಿಸುವುದಕ್ಕೂ ಕಷ್ಟವಾಗುತ್ತದೆ.

Advertisement

ಈಗ ಲಾಕ್‌ಡೌನ್‌ 5.0 ಅಥವಾ ಅನ್‌ಲಾಕ್‌ 1.0ದಿಂದಾಗಿ ಕೋವಿಡ್-19  ವಿರುದ್ಧದ ಹೋರಾಟ ಯಾವ ರೂಪಪಡೆಯಲಿದೆ? ರೋಗ ನಿಯಂತ್ರಣ ಸಾಧ್ಯವಾಗಲಿದೆಯೇ ಅಥವಾ ಈವರೆಗಿನ ಎಲ್ಲಾ ಪ್ರಯತ್ನಗಳಿಗೂ ಪೆಟ್ಟು ಬೀಳಲಿದೆಯೇ ಎಂಬ ಪ್ರಶ್ನೆ ಎದುರಾಗುತ್ತಿದೆ. ಏಮ್ಸ್‌ ಸಂಸ್ಥೆಯ ವೈದ್ಯರ ತಂಡವೊಂದು ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ದೇಶದಲ್ಲಿ ಕೊರೊನಾ ಸೋಂಕು ಪ್ರಮಾಣ ಉತ್ತುಂಗಕ್ಕೆ ಏರಿ ಇಳಿದ ಮೇಲೆ ಹಲವು ವಾರಗಳ ನಂತರ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸುವುದೇ ಸರಿಯಾದ ಮಾರ್ಗ ಎಂದು ಹೇಳುತ್ತಿದೆ. ಅದರ ಸಲಹೆಯ ಪಾಲನೆ ಈಗ ಸಾಧ್ಯವಾಗುವುದಿಲ್ಲ, ಏಕೆಂದರೆ, ನಿರ್ಬಂಧಗಳು ಸಡಿಲವಾಗಿ ಅನೇಕ ವಲಯಗಳಿಗೆ ಮರುಚಾಲನೆ ಸಿಕ್ಕಿದೆ. ದೇಶದ ಆರ್ಥಿಕತೆಯನ್ನು ಹಳಿಯೇರಿಸುವೆಡೆಗೆ ಬಹುತೇಕ ರಾಜ್ಯ ಸರ್ಕಾರಗಳ ಹಾಗೂ ದೇಶದ ಗಮನವೀಗ ಹೆಚ್ಚಾಗಿದೆ. ಇದು ಅನಿವಾರ್ಯ ಸಹ ಆಗಿತ್ತು ಎನ್ನುವುದು ನಿರ್ವಿವಾದ.

ಇದೊಂದು ರೀತಿಯಲ್ಲಿ ಭಾರತಕ್ಕಷ್ಟೇ ಅಲ್ಲದೇ, ಎಲ್ಲಾ ದೇಶಗಳಿಗೂ ಬಿಕ್ಕಟ್ಟಿನ ಸಮಯ. ಕೊರೊನಾ ವಿರುದ್ಧ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ. ಆರಂಭಿಕ ಹಂತದಲ್ಲಿ ಭರವಸೆ ಮೂಡಿಸಿದ್ದ ಅನೇಕ ಲಸಿಕೆಗಳೀಗ ವಿಫ‌ಲವಾಗಿವೆ. ಲಸಿಕೆ ಯಶಸ್ವಿಯಾಗಿ ಲಭ್ಯವಾದರೂ ಅದನ್ನು ಬೃಹತ್‌ ಪ್ರಮಾಣದಲ್ಲಿ ಉತ್ಪಾದಿಸಿ, ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದಕ್ಕೂ ಬಹಳಷ್ಟು ಸಮಯ ಹಿಡಿಯುತ್ತದೆ. ಇದೆಲ್ಲದರ ಮಧ್ಯೆಯೇ, ಕೋವಿಡ್-19 ಕ್ಕೆ ಲಸಿಕೆಯೇ ಸಿಗದೇ ಹೋಗಬಹುದು ಎನ್ನುವ ಎಚ್ಚರಿಕೆಯನ್ನೂ ತಜ್ಞರು ನೀಡುತ್ತಿದ್ದಾರೆ. ಹೀಗಿರುವಾಗ, ಅದರೊಂದಿಗೆ ಬದುಕುವುದು ಅನಿವಾರ್ಯವಾಗಲೂಬಹುದು. ಹಾಗೆಂದು, ನಿರಾಶಾವಾದಿಗಳಾಗುವ ಅಗತ್ಯವಿಲ್ಲ. ಭರವಸೆ ಮೂಡಿಸಿದ್ದ ಕೆಲವು ಲಸಿಕೆಗಳು ವಿಫ‌ಲವಾದರೂ, ಭಾರತ ಸೇರಿದಂತೆ ಜಗತ್ತಿನಾದ್ಯಂತ, ಅಗಾಧ ಪ್ರಮಾಣದಲ್ಲಿ ಸಂಶೋಧನೆಗಳು ನಡೆದಿವೆ. ಲಸಿಕೆಯ ವಿಷಯ ಬದಿಗಿಟ್ಟರೂ, ಸುರಕ್ಷತಾ ಪರಿಕರಗಳ ಉತ್ಪಾದನೆಯಂತೂ ವಿಫ‌ುಲವಾಗಿದೆ. ಮಾರ್ಚ್‌ ಮಧ್ಯಭಾಗದವರೆಗೂ ಒಂದೇ ಒಂದು ಪಿಪಿಇ ಕಿಟ್‌ ಭಾರತದಲ್ಲಿ ಉತ್ಪಾದನೆಯಾಗುತ್ತಿರಲಿಲ್ಲ. ಈಗ ಪ್ರತಿ ದಿನ 4.5 ಲಕ್ಷ ಕಿಟ್‌ಗಳನ್ನು ಉತ್ಪಾದಿಸಲಾರಂಭಿಸಿದೆ. ಶೂನ್ಯದಿಂದ 7 ಸಾವಿರ ಕೋಟಿ ರೂಪಾಯಿಯ ಉದ್ಯಮವು ಎರಡು ತಿಂಗಳಲ್ಲಿ ಬೆಳೆದುನಿಂತಿದೆ. ಇದಷ್ಟೇ ಅಲ್ಲದೇ, ಮಾಸ್ಕ್, ಸ್ಯಾನಿಟೈಜರ್‌ಗಳ ಉತ್ಪಾದನೆಯೂ ಅಭೂತಪೂರ್ವವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯು ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ(ಮೂಡುವ ಅಗತ್ಯವೂ ಇದೆ).

ಒಟ್ಟಲ್ಲಿ ಅತಿಯಾಗಿ ಆತಂಕಿತರಾಗದೇ, ಬಂದದ್ದನ್ನು ಧೈರ್ಯದಿಂದ (ಸುರಕ್ಷಿತವಾಗಿ) ಎದುರಿಸುವುದಕ್ಕೆ ನಾವೆಲ್ಲರೂ ಮಾನಸಿಕವಾಗಿ ಸಿದ್ಧರಾಗಲೇಬೇಕಿದೆ. ಅಸಡ್ಡೆಯೆನ್ನುವುದು ಅಪಾಯಕ್ಕೆ ಆಹ್ವಾನ ನೀಡುತ್ತದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಈ ಎರಡು ತಿಂಗಳಲ್ಲಿ ನಾವು ನೋಡಿದ್ದೇವೆ. ಈ ತಪ್ಪುಗಳಿಂದ ಪಾಠ ಕಲಿತು ಆಶಾವಾದದೊಂದಿಗೆ ಹೆಜ್ಜೆ ಹಾಕೋಣ.

Advertisement

Udayavani is now on Telegram. Click here to join our channel and stay updated with the latest news.

Next