Advertisement
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಹೆಚ್ಚಿಸುವ ಬಗ್ಗೆ 2017-18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಮಾರ್ಚ್ ಅಂತ್ಯದೊಳಗೆ ನಿವೃತ್ತರಾಗುವವರಿಗೂ ಈ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಕ್ಷಣದಿಂದಲೇ ನಿವೃತ್ತಿ ವಯಸ್ಸು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಅದರಂತೆ ಸಚಿವ ಸಂಪುಟದಲ್ಲಿ ಅಂಗೀಕರಿಸಿದ ತಿದ್ದುಪಡಿ ಕುರಿತು ತಕ್ಷಣವೇ ಆದೇಶ ಹೊರಡಿಸಲು ಕಾರ್ಮಿಕ ಇಲಾಖೆಗೆ ಸೂಚಿಸಲಾಗಿದೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚೀಲನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಮತ್ತು ಮಾನವ ಕೆಲಸ ರಹಿತ ಅತ್ಯಾಧುನಿಕ ಕುರಿ ಮತ್ತು ಮೇಕೆಗಳ ವಧಾಗಾರ ಸ್ಥಾಪಿಸಲು ಸಚಿವ ಸಂಪುಟಸಭೆ ಅನುಮೋದನೆ ನೀಡಿದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಕುರಿ ಮತ್ತು ಮೇಕೆ ಸಾಕಣೆಯನ್ನು ರೈತರು ಮುಖ್ಯ ಕಸುಬಾಗಿ ಪರಿಗಣಿಸಿದ್ದು, ಅವರಿಗೆ ಕುರಿ ಮತ್ತು ಮೇಕೆಗಳ ವಧಾಗಾರ ವ್ಯವಸ್ಥೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ವಧಾಗಾರ ಸ್ಥಾಪಿಸುವ ಕುರಿತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಚೀಲನಹಳ್ಳಿ ಗ್ರಾಮದ ಸರ್ವೇ ನಂ. 14ರಲ್ಲಿ 20 ಎಕರೆ ಜಮೀನನ್ನು ಏಳು ವರ್ಷದ ಹಿಂದೆ ಮೀಸಲಿಡಲಾಗಿತ್ತು. ಇದೀಗ ಸುಮಾರು 25.23 ಕೋಟಿ ರೂ.ವೆಚ್ಚದಲ್ಲಿ ಆ ಜಾಗದಲ್ಲಿ ಅತ್ಯಾಧುನಿಕ ವಧಾಗಾರ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಇಲ್ಲಿನ ಕೆಲಸಗಳು ಮಾನವ ರಹಿತವಾಗಿರುತ್ತವೆ. ಇದರಿಂದ ಆ ಭಾಗದಲ್ಲಿ ಕುರಿ ಸಾಕಣೆ ಅಭಿವೃದ್ಧಿ ಜತೆಗೆ ಕುರಿ, ಮೇಕೆ ಮಾಂಸಗಳ ರಫ್ತಿಗೂ ಅನುಕೂಲವಾಗಲಿದೆ.
Related Articles
ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ಶಾಲೆಗಳನ್ನು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕರ್ನಾಟಕ ಶಿಕ್ಷಣ ನೀತಿ-1983ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಇತ್ತೀಚೆಗೆ ತುಮಕೂರು ಜಿಲ್ಲೆಯ ಸಿಬಿಎಸ್‌ಇ ವಸತಿ ಶಾಲೆಯೊಂದರಲ್ಲಿ ವಿಷಾಹಾರ ಸೇವಿಸಿ ಮಕ್ಕಳು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಶಿಕ್ಷಣ ನೀತಿಗೆ ತಿದ್ದುಪಡಿ ತರಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
Advertisement
ಪ್ರಸ್ತುತ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ಹಿಡಿತ ಇರಲಿಲ್ಲ. ಹೀಗಾಗಿ ಒಂದು ಬಾರಿ ನಿರಾಕ್ಷೇಪಣಾ ಪತ್ರ ಪಡೆದ ಬಳಿಕ ಆ ಶಾಲೆಗಳು ತಮ್ಮ ಇಷ್ಟಕ್ಕೆ ಬಂದಂತೆ ಕೆಲಸ ನಿರ್ವಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಆ ಶಿಕ್ಷಣ ಸಂಸ್ಥೆಗಳನ್ನೂ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಂಡು ರಾಜ್ಯ ಸರ್ಕಾರ 2016ರಲ್ಲಿ ಜಾರಿಗೆ ತಂದಿರುವ ಮಕ್ಕಳ ಸುರಕ್ಷತಾ ನೀತಿಯನ್ನು ಆ ಶಾಲೆಗಳಿಗೂ ಅನ್ವಯ ಮಾಡುವುದರ ಜತೆಗೆ ಶುಲ್ಕ ನಿಗದಿ ಬಗ್ಗೆಯೂ ಗಮನಹರಿಸಲು ತೀರ್ಮಾನಿಸಿದೆ.
ಸಮವಸ್ತ್ರ ಮತ್ತು ಸೈಕಲ್‌ಗೆ 328.35 ಕೋಟಿ:2017-18ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು 328.35 ಕೋಟಿ ರೂ. ವೆಚ್ಚ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ ಜವಾಬ್ದಾರಿಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ (ಕೆಎಚ್‌ಡಿಸಿ) ಈಗಾಗಲೇ ವಹಿಸಲಾಗಿದ್ದು, 2017-18ನೇ ಸಾಲಿನ ಸಮವಸ್ತ್ರ ಪೂರೈಕೆಗಾಗಿ ಸಂಸ್ಥೆಗೆ 156.35 ಕೋಟಿ ರೂ. ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಅಲ್ಲದೆ, 2017-18ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ಓದುತ್ತಿರುವ 5.10 ಲಕ್ಷ ಮಕ್ಕಳಿಗೆ ಜೂನ್ ಒಳಗಾಗಿ ಸೈಕಲ್ ವಿತರಿಸಲು ತೀರ್ಮಾನಿಸಿರುವ ಸರ್ಕಾರ, ಅದಕ್ಕಾಗಿ 172 ಕೋಟಿ ರೂ. ಅನುದಾನ ಒದಗಿಸಲು ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದೆ. ಇತರ ಪ್ರಮುಖ ತೀರ್ಮಾನಗಳು:
– ಭೂಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅಳತೆಗೆ ಬಾಕಿ ಇರುವ 5.27 ಲಕ್ಷ ಪ್ರಕರಣಗಳನ್ನು ತ್ವರಿತಗೊಳಿಸುವ ಉದ್ದೇಶದಿಂದ ಖಾಲಿ ಇರುವ 1,076 ಭೂಮಾಪಕರ ಹುದ್ದೆಗಳಿಗೆ ನಿವೃತ್ತ ಭೂಮಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದು.
– ರಾಜ್ಯದ ಮುಂಡರಗಿ, ಕಂಪ್ಲಿ, ತೆಕ್ಕಲಕೋಟೆ, ಕೊತ್ತೂರು, ಮಹಾಲಿಂಗಪುರ, ತೇರದಾಳ, ಮುದುಗಲ್, ಸೀರಲಕೊಪ್ಪ, ಮುಲ್ಕಿ (ಒಟ್ಟು 9) ಪಟ್ಟಣಗಳಿಗೆ 205.7 ಕೋಟಿ ರೂ.ವೆಚ್ಚದಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ನಿರ್ಮಿಸುವುದು.
– ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 9,456 ಅರೆ ವೈದ್ಯಕೀಯ ಸಿಬ್ಬಂದಿಯನ್ನು ವಿಶೇಷ ನೇಮಕಾತಿ ಮೂಲಕ ಭರ್ತಿ ಮಾಡುವುದು.