Advertisement

ಆದಾಯ ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ಅಗತ್ಯ

12:03 PM Jul 25, 2018 | |

ಬೆಂಗಳೂರು: ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳಲ್ಲೇ ವ್ಯರ್ಥಶ್ರಮ ಹಾಕುವ ಬದಲಿಗೆ, ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತುಕೊಡುವ ಅಗತ್ಯವಿದೆ ಐಟಿ ದಿಗ್ಗಜ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. 

Advertisement

ನಗರದ ಪುರಭವನದಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆ (ಕರ್ನಾಟಕ ಮತ್ತು ಗೋವಾ ವಲಯ) ಹಮ್ಮಿಕೊಂಡಿದ್ದ “ಆದಾಯ ತೆರಿಗೆ ದಿನಾಚರಣೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳ ಹಿಂದೆಬೀಳುವುದು ಪುನರಾವರ್ತಿತ ಮತ್ತು ವ್ಯರ್ಥಶ್ರಮ ಅಷ್ಟೇ. ಇದೇ ಶ್ರಮವನ್ನು ತೆರಿಗೆ ಸಂಗ್ರಹ ಹೆಚ್ಚಿಸಲು ವಿನಿಯೋಗಿಸಿದರೆ, ಕಡಿಮೆ ಅವಧಿಯಲ್ಲಿ ಸಕಾರಾತ್ಮಕ ಫ‌ಲಿತಾಂಶ ಕಾಣಬಹುದು ಎಂದು ಅಭಿಪ್ರಾಯಪಟ್ಟರು. 

ಇತ್ತೀಚೆಗೆ ನಡೆದ ಆರ್ಥಿಕ ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ತೀರ್ಮಾನವಾಗದೆ ಬಾಕಿ ಉಳಿದ ಪ್ರಕರಣಗಳಲ್ಲಿ ನೇರ ಮತ್ತು ಪರೋಕ್ಷ ತೆರಿಗೆ ಮೊತ್ತ ಎಂಟು ಲಕ್ಷ ಕೋಟಿ ರೂ. ಇದು ದೇಶದ ಒಟ್ಟಾರೆ ವೃದ್ಧಿ ದರ (ಜಿಡಿಪಿ)ದ ಶೇ. 5ರಷ್ಟಾಗುತ್ತದೆ.

ಇನ್ನು ಈ ರೀತಿಯ ವ್ಯಾಜ್ಯಗಳಲ್ಲಿ ತೆರಿಗೆ ಇಲಾಖೆಯ ಯಶಸ್ಸಿನ ಪ್ರಮಾಣ ಶೇ. 30ಕ್ಕಿಂತ ಕಡಿಮೆ! ಅಂದರೆ ಶೇ. 70ರಷ್ಟು ಪ್ರಕರಣಗಳಲ್ಲಿ ತೀರ್ಪು ತೆರಿಗೆ ಇಲಾಖೆ ವಿರುದ್ಧ ಬಂದಿದೆ. ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ವೃದ್ಧಿ ವಿಚಾರದಲ್ಲಿ ಹೆಚ್ಚು ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದರು.  

ಅದೇ ರೀತಿ, ಗರಿಷ್ಠ ಮಟ್ಟದ ತೆರಿಗೆಗಳಿಗಿಂತ ಹೆಚ್ಚು ತೆರಿಗೆಯ ವ್ಯಾಪ್ತಿ ವಿಸ್ತರಿಸುವ ಅಗತ್ಯವಿದೆ ಎಂದೂ ಪ್ರತಿಪಾದಿಸಿದ ಅಜೀಂ ಪ್ರೇಮ್‌ಜಿ, ಕನಿಷ್ಠ ಮಟ್ಟದ ತೆರಿಗೆಗಳು ಪಾವತಿದಾರರಲ್ಲಿ ಬದ್ಧತೆಯನ್ನು ಕೂಡ ತರುತ್ತವೆ.

Advertisement

ಇದು ಅಂತಿಮವಾಗಿ ತೆರಿಗೆ ವೃದ್ಧಿಯಲ್ಲಿ ಪರಿಣಾಮ ಬೀರುತ್ತದೆ. ಈ ಮೊತ್ತವನ್ನು ಸರ್ಕಾರವು ಜನರ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿನಿಯೋಗಿಸಲು ಅನುಕೂಲ ಆಗುತ್ತದೆ ಎಂದು ಹೇಳಿದರು. 

ತೆರಿಗೆ ವೃದ್ಧಿ ದರದಲ್ಲಿ ಹಿಂದೆ: ದೇಶದ ತೆರಿಗೆ ವೃದ್ಧಿ ದರ ವಾರ್ಷಿಕ ಶೇ. 16ರಷ್ಟಿದೆ. ಆದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದು ದುಪ್ಪಟ್ಟು ಅಂದರೆ ಶೇ. 35ರಿಂದ 40ರಷ್ಟಿದೆ. ಈ ನಿಟ್ಟಿನಲ್ಲಿ ನಾವು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ.

ಸ್ವಯಂಪ್ರೇರಿತ ಆದಾಯ ತೆರಿಗೆ ಪಾವತಿಗೆ ಜನರಲ್ಲಿನ ಅರಿವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದ ಅವರು, ತೆರಿಗೆ ಇಲಾಖೆಯಲ್ಲಿ ತಂತ್ರಜ್ಞಾನದ ಬಳಕೆ ಉತ್ತಮ ಬೆಳವಣಿಗೆ ಎಂದು ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು. 

ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ (ಕರ್ನಾಟಕ ಮತ್ತು ಗೋವಾ ವಲಯ) ಬಿ.ಆರ್‌. ಬಾಲಕೃಷ್ಣನ್‌ ಮಾತನಾಡಿ, ದೇಶದ ಒಟ್ಟಾರೆ ತೆರಿಗೆ ಸಂಗ್ರಹ 10 ಲಕ್ಷ ಕೋಟಿ ಇದ್ದು, ಇದರಲ್ಲಿ ರಾಜ್ಯದ ಪಾಲು ಒಂದು ಲಕ್ಷ ಕೋಟಿ ರೂ. ಆದಾಯ ತೆರಿಗೆಯಲ್ಲಿ ಕರ್ನಾಟಕ-ಗೋವಾ ವಲಯ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದರು. ನಟಿ ಮತ್ತು ರಂಗ ಶಂಕರ ಮುಖ್ಯಸ್ಥೆ ಅರುಂಧತಿ ನಾಗ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next