Advertisement

ನಿಲ್ಲದ ಜಿಂದಾಲ್ ಕದನ :ಕಾಂಗ್ರೆಸ್‌-ಜೆಡಿಎಸ್‌-ಬಿಜೆಪಿ ನಡುವೆ ವಾಕ್ಸಮರ

03:04 AM Jun 19, 2019 | Team Udayavani |

ಬೆಂಗಳೂರು: ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಮತ್ತು ವಿಪಕ್ಷ ಬಿಜೆಪಿ ನಡುವೆ ಕದನ ಮುಂದುವರಿದಿದೆ. ಈ ಮಧ್ಯೆ, ಇದೇ ವಿಚಾರದಲ್ಲಿ ಅಪಸ್ವರ ಎತ್ತಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಎಚ್.ಕೆ. ಪಾಟೀಲ್ ಅವರನ್ನು ಹೈಕಮಾಂಡ್‌ ದಿಲ್ಲಿಗೆ ಕರೆಸಿಕೊಂಡಿದೆ.

Advertisement

ಜಿಂದಾಲ್ಗೆ ಭೂಮಿ ಪರಭಾರೆ ನಿರ್ಧಾರ ಕೈಗೊಂಡಾಗಿನಿಂದ ನಿರಂತರವಾಗಿ ಸರಕಾರದ ವಿರುದ್ಧ ಮುಗಿಬೀಳುತ್ತಿದ್ದ ಎಚ್.ಕೆ. ಪಾಟೀಲರನ್ನು ಹೈಕಮಾಂಡ್‌ ಕರೆಯಿಸಿಕೊಂಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಇನ್ನೊಂದೆಡೆ, ಜಿಂದಾಲ್ ಸಂಬಂಧ ಮುಖ್ಯಮಂತ್ರಿ ಮತ್ತು ಬಿಜೆಪಿ ವಿರುದ್ಧ ವಾಕ್ಸಮರ ಮುಂದುವರಿದಿದೆ. ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಿಂದಾಲ್ನಿಂದ 20 ಕೋಟಿ ರೂ. ಚೆಕ್‌ ಪಡೆದಿದ್ದರು. ಅದನ್ನು ನಾನೇ ಬಹಿರಂಗಪಡಿಸಿದ್ದೆ’ ಎಂಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ.

ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪು ಪ್ರಶ್ನಿಸುವಂತೆ ಹಗುರವಾಗಿ ಮಾತನಾಡಬೇಡಿ. ಆಡಳಿತದಲ್ಲಿ ಸಂಪೂರ್ಣ ವಿಫ‌ಲರಾಗಿ ದಿಕ್ಕೆಟ್ಟಿರುವ ನೀವು ನಿಮ್ಮ ವೈಫ‌ಲ್ಯ ಮುಚ್ಚಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ಬಿ.ಎಸ್‌. ಯಡಿಯೂರಪ್ಪ ಟ್ವೀಟ್ ಮೂಲಕ ತಾಕೀತು ಮಾಡಿದ್ದಾರೆ.

ನೈಸ್‌ ಪರ ಹೋರಾಟ ಏನಾಯಿತು?

Advertisement

ಕೆ.ಎಸ್‌. ಈಶ್ವರಪ್ಪ ಅವರು ಮಾತನಾಡಿ, ಮುಖ್ಯಮಂತ್ರಿಗಳೇ ಸಿಬಿಐ ನ್ಯಾಯಾಲಯ ಖುಲಾಸೆ ಮಾಡಿರುವ ಪ್ರಕರಣವನ್ನು ಮತ್ತೆ ಎಳೆದು ತಂದು ನ್ಯಾಯಾಲಯಕ್ಕೆ ಅಗೌರವ ತರುವುದು ನಿಮ್ಮ ಈ ಸ್ಥಾನಕ್ಕೆ ಗೌರವ ಬರಲ್ಲ. ಅಂದಹಾಗೆ ದೇವೇಗೌಡರ ರೈತಪರ ನೈಸ್‌ ಹೋರಾಟ ಏನಾಯಿತು? ನಿಮ್ಮದೇ ಸರಕಾರ, ನೀವೇ ಮುಖ್ಯಮಂತ್ರಿ ನಿಮ್ಮ ಸಹೋದರ ಲೋಕೋಪಯೋಗಿ ಸಚಿವ. ರೈತ ಕಳಕಳಿಯಿಂದ ಮತ್ತೆ ತನಿಖೆ ಮಾಡಿಸಿ ಎಂದು ಕುಟುಕಿದ್ದಾರೆ.

ಆರ್‌. ಅಶೋಕ್‌ ಈ ಕುರಿತು ಪ್ರತಿಕ್ರಿಯಿಸಿ, ಜಿಂದಾಲ್ ಭೂಮಿ ಪರಭಾರೆ ವಿಚಾರ ಚರ್ಚಿಸಲು ಮುಖ್ಯಮಂತ್ರಿಯವರು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಿ ಎಂದಿದ್ದಾರೆ.

ಸಿದ್ದು ಪ್ರಶ್ನಿಸಿದ ವಿಶ್ವನಾಥ್‌

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್‌, ಜಿಂದಾಲ್ಗೆ ಭೂಮಿ ಪರಭಾರೆ ಬಗ್ಗೆ ಮತ್ತೆ ವಿರೋಧ ವ್ಯಕ್ತಪಡಿಸಿ, ಗಣಿ ಧಣಿಗಳ ವಿರುದ್ಧ ಹೋರಾಟ ಮಾಡಿದ ಸಿದ್ದರಾಮಯ್ಯ ಅವರೇ ಈಗ ಏನು ಮಾಡಿದ್ದೀರಾ? ನೀವು ಈ ಸರಕಾರದಲ್ಲಿ ಮಂತ್ರಿಗಳ ಮಂತ್ರಿ. ಉಪ ಸಮಿತಿ ಮಾಡಿ ಎಂದು ನಾನೇ ಸಲಹೆ ನೀಡಿದೆ ಎಂದು ಹೇಳುತ್ತೀರಿ? ಉಪ ಸಮಿತಿ ಮಾಡಿದ ತತ್‌ಕ್ಷಣ ಭೂಮಿ ವಾಪಸ್‌ ಬಂತಾ? ರಾಜ್ಯದ ಭೂಗರ್ಭ ಸೀಳಿದ ರೆಡ್ಡಿಗಳನ್ನು ಜೈಲಿಗೆ ಹಾಕ್ತೀವಿ ಅಂದ್ರಿ. ಈಗ ಯಾಕೆ ಮೌನ ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ಜಿಂದಾಲ್ಗೆ ಭೂಮಿ ಪರಭಾರೆ ವಿಚಾರದಲ್ಲಿ ಸಂಪುಟ ಉಪ ಸಮಿತಿ ರಚಿಸಿ ಸರಕಾರ ಕೈ ತೊಳೆದುಕೊಂಡರೂ ಆ ಕುರಿತ ಆರೋಪ-ಪ್ರತ್ಯಾರೋಪ ಇನ್ನೂ ನಿಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next