Advertisement

ವಿವಾದಕ್ಕೆ ಕಾರಣವಾದ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ

09:34 AM Jun 20, 2022 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಈಗಾಗಾಲೇ ಭಾಗಶಃ ಕಾರ್ಯ‌ನಿರ್ವಹಣೆ ಮಾಡುತ್ತಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ( ಬೇಸ್ ) ನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉದ್ಘಾಟನೆ ಮಾಡುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

Advertisement

ಸುಮಾರು 201 ಕೋಟಿ ರೂ. ಮೊತ್ತದ ನೂತನ ಬೇಸ್ ಕ್ಯಾಂಪ್ ಉದ್ಘಾಟನೆಯನ್ನು ಮೋದಿ ನಡೆಸಲಿದ್ದಾರೆ ಎಂದು ರಾಜ್ಯ ಸರಕಾರ ಕಾರ್ಯಕ್ರಮ‌ ರೂಪಿಸಿದೆ. ಆದರೆ ತಮ್ಮ ಸರಕಾರದ ಅವಧಿಯಲ್ಲಿ ಡಾ.ಮನಮೋಹನ್ ಸಿಂಗ್ ಉದ್ಘಾಟನೆ ಮಾಡಿದ ಯೋಜನೆಗೆ ಮರು ಉದ್ಘಾಟನಾ ಭಾಗ್ಯ ಕರುಣಿಸುವುದೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆಗೆ ಶ್ರಮ ವಹಿಸಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಸರಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ರಾಜ್ಯಕ್ಕೆ ಮೋದಿ ಆಗಮನ : ಬಿಜೆಪಿಗೆ ಚುನಾವಣಾ ಚುರುಕು

ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಸ್ಥಾಪನೆಯ ಹಿಂದಿನ ಶ್ರಮ, ಲಂಡನ್ ಪ್ರವಾಸ ಸಂದರ್ಭದಲ್ಲಿ ಅಲ್ಲಿನ ವಿದ್ಯಾ ಸಂಸ್ಥೆಗಳ ಜತೆಗೆ ನಡೆಸಿದ ಮಾತುಕತೆ, ಸರಕಾರದ ಮನವೊಲಿಕೆಯ ಹಿಂದಿನ ಕಸರತ್ತು ಹಾಗೂ ಉದ್ಘಾಟನೆಯವರೆಗಿನ ವಿಚಾರವನ್ನು ಸರಣಿ ಟ್ವೀಟ್ ಮೂಲಕ ಪ್ರಿಯಾಂಕ ಖರ್ಗೆ ವಿವರಿಸಿದ್ದಾರೆ. ಯೋಜನೆಯ ನೀಲನಕ್ಷೆಯನ್ನು ಪ್ರಧಾನಿ ಮೋದಿ ಈಗ ವೀಕ್ಷಿಸುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ದುರ್ಬಲ ಗವರ್ನಿಂಗ್ ಕೌನ್ಸಿಲ್ : ಇದೆಲ್ಲದಕ್ಕಿಂತ‌ ಮುಖ್ಯವಾಗಿ ಸ್ಕೂಲ್ ಆಫ್ ಎಕಾನಾಮಿಕ್ಸ್ ನ ಗೌರ್ನಿಂಗ್ ಕೌನ್ಸಿಲ್ ನ್ನು ಬಿಜೆಪಿ ಸರಕಾರ ದುರ್ಬಲಗೊಳಿಸಿರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸುಧಾಮೂರ್ತಿ, ಕಿರಣ್ ಮುಜುಂದಾರ್ ಶಾ, ಸ್ಯಾಮ್ ಪಿಟ್ರೋಡಾ ರಂಥ ಉದ್ಯಮಿಗಳ ಜತೆಗೆ ರಾಷ್ಟ್ರದ ಖ್ಯಾತ ಅರ್ಥಶಾಸ್ತ್ರಜ್ಞರನ್ನು ಗೌರ್ನಿಂಗ್ ಕೌನ್ಸಿಲ್ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳು, ಪರಿವಾರದ ಹಿನ್ನೆಲೆಯವರು, ಬಸವರಾಜ್ ಹೊರಟ್ಟಿಯವರ ಪುತ್ರ ಸೇರಿದಂತೆ ರಾಜಕೀಯವಾಗಿ ಪ್ರಬಲರಾಗಿರುವವರನ್ನು ನೇಮಕ ಮಾಡಲಾಗಿದೆ ಎಂಬ ಆರೋಪ‌ ಕೇಳಿ‌ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next