Advertisement

ಮುಧೋಳ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಎಂದು?

12:44 PM Dec 12, 2019 | Suhan S |

ಮುಧೋಳ: ನಗರದಲ್ಲಿ ಬಹುದಿನಗಳಿಂದ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಭಾಗ್ಯ ದೊರೆಯದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ದೊರೆಯಬೇಕಿದ್ದ ಉಪಾಹಾರ ಮತ್ತು ಊಟದ ವ್ಯವಸ್ಥೆ ಗಗನಕುಸುಮವಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ದೊರೆಯಲಿ ಎಂಬ ಉದ್ದೇಶದಿಂದ ಕಾಂಗ್ರೆಸ್‌

Advertisement

ಸರ್ಕಾರದ ಅವಧಿಯಲ್ಲಿ ಪ್ರತಿ ವಿಧಾನ ಸಭೆ ಮತಕ್ಷೇತ್ರಕ್ಕೆ ಒಂದರಂತೆ ಇಂದಿರಾ ಕ್ಯಾಂಟೀನ್‌ ತೆರೆಯಲಾಗಿತ್ತು. ಅದರಂತೆ ಮುಧೋಳ ನಗರದಲ್ಲಿಯೂ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗಿದೆ. ಆದರೆ, ಕ್ಯಾಂಟೀನ್‌ ನಿರ್ಮಾಣದ ವೇಳೆ ಉತ್ಸಾಹ ತೋರಿದ ಅಧಿಕಾರಿಗಳು ಅದರ ಉದ್ಘಾಟನೆಗೆ ವೇಳೆ ನಿರುತ್ಸಾಹಿಗಳಾಗಿರುವುದು ಮಾತ್ರ ದುರಂತವೇ ಸರಿ.

ನಗರದ ಹಳೇ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ ಅಧಿಕಾರಿಗಳ ನಿರ್ಲಕ್ಷದಿಂದ ಉದ್ಘಾಟನೆ ಭಾಗ್ಯ ವಂಚಿತವಾಗಿದೆ. ಕ್ಯಾಂಟೀನ್‌ ನಿರ್ಮಾಣಗೊಂಡು ಹಲವು ತಿಂಗಳು ಕಳೆದರೂ ಇದುವರೆಗೂ ಉದ್ಘಾಟನೆಯಾಗಿಲ್ಲ. ಶೀಘ್ರವೇ ಕ್ಷೇತ್ರದ ಶಾಸಕರ ಅನುಮತಿಯೊಂದಿಗೆ ಕ್ಯಾಂಟೀನ್‌ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು.

ಏನೇನು ದೊರೆಯುತ್ತೆ: ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್‌ ಪ್ರತಿನಿತ್ಯ ಒಂದೊಂದು ಬಗೆಯ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಸೋಮವಾರ ಪುಳಿಯೋಗರೆ, ಮಂಗಳವಾರ ಖಾರಾಬಾತ್‌, ಬುಧವಾರ ಪೊಂಗಲ್‌, ಗುರುವಾರ ರವಾ ಕಿಚಡಿ, ಶುಕ್ರವಾರ ಚಿತ್ರನ್ನ, ಶನಿವಾರ ವಾಂಗೀಬಾತ್‌ ಹಾಗೂ ಭಾನುವಾರ ಖಾರಾಬಾತ್‌ ಮತ್ತು ಕೇಸರಿ ಬಾತ್‌ ಈ ಎಲ್ಲ ಉಪಹಾರದ ಜತೆಯಲ್ಲಿ ಪ್ರತಿದಿನ ಇಡ್ಲಿ ನೀಡಲಾಗುವುದು. ಪ್ರತಿ ಪ್ಲೇಟ್‌ ಉಪಾಹಾರಕ್ಕೆ 5ರೂ ದರ ನಿಗದಿ ಮಾಡಲಾಗಿದೆ. ಅದೇ ರೀತಿ ಮಧ್ಯಾಹ್ನ ಹಾಗೂ ರಾತ್ರಿ ವಿವಿಧ ಬಗೆಯ ಊಟದ ಮೆನು ಇದ್ದು, 10 ರೂ. ದರ ನಿಗದಿ ಮಾಡಲಾಗಿದೆ.

 

Advertisement

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next