ಉಡುಪಿ: ಆರೋಗ್ಯ ಸೇವಾ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದು ಮತ್ತಷ್ಟು ವೇಗವಾಗಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ವೈದ್ಯಕೀಯ ಕ್ಷೇತ್ರಕ್ಕೆ ತಂತ್ರಜ್ಞರು ಹಾಗೂ ರೋಗಪತ್ತೆ ತಜ್ಞರ ಬೇಡಿಕೆಯಿದೆ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಸಹಾಯಕರು, ಶುಶ್ರೂಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಸಿಎಸ್‌ಐ ಲೊಂಬಾರ್ಡ್ ನರ್ಸಿಂಗ್ ಆಸ್ಪತ್ರೆಯ ಔಷಧ ವಿಭಾಗದ ಮುಖ್ಯಸ್ಥ ಡಾ| ಆರ್.ಶ್ರೀಪತಿ ಹೇಳಿದರು.
ಲೊಂಬಾರ್ಡ್ ನರ್ಸಿಂಗ್ ಕಾಲೇ ಜಿನಲ್ಲಿ ಸೋಮವಾರ ನಡೆದ ಆರೋಗ್ಯ ಕಾಳಜಿಯಲ್ಲಿ ಅರೆವೈದ್ಯಕೀಯ ಕ್ಷೇತ್ರದ ಪ್ರಾಮುಖ್ಯ ಕಾರ್ಯಾಗಾರದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.
ಆಸ್ಪತ್ರೆಗಳಲ್ಲಿ ರೋಗಿಗೆ ಚಿಕಿತ್ಸೆ ಆರಂಭಿಸುವ ಮೊದಲು ಆತನಿಗೆ ಬಾಧಿಸುವ ಕಾಯಿಲೆಯನ್ನು ಪತ್ತೆ ಹಚ್ಚಬೇಕು. ಎಲ್ಲ ತಪಾಸಣೆಗಳ ವರದಿ ಯನ್ನು ಪರಿಶೀಲಿಸಿದ ಅನಂತರವೇ ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಈ ಎಲ್ಲ ಪರೀಕ್ಷೆಗಳನ್ನು ಮಾಡಲು ಅರೆವೈದ್ಯಕೀಯ ವಿದ್ಯಾರ್ಥಿಗಳೂ ಅಪಾರ ಶ್ರಮ ವಹಿಸುತ್ತಾರೆ. ಪರೀಕ್ಷೆಯಲ್ಲಿ ಸ್ವಲ್ಪ ಏರುಪೇರಾದರೂ ಅದು ರೋಗಿಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರ ಮೇಲೂ ಅತೀ ಹೆಚ್ಚಿನ ಜವಾಬ್ದಾರಿಯಿದೆ ಎಂದು ಅವರು ಹೇಳಿದರು.
ಲೊಂಬಾರ್ಡ್ ನರ್ಸಿಂಗ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಸುಶೀಲ್ ಜತ್ತನ್ನ ಅಧ್ಯಕ್ಷತೆ ವಹಿಸಿದ್ದರು. ಅಮೃತ್ ಲ್ಯಾಬೊ ರೇಟರಿಯ ನಿರ್ದೇಶಕ ಎ.ಆರ್.ಕಿಣಿ ಹಾಗೂ ಲೊಂಬಾರ್ಡ್ ನರ್ಸಿಂಗ್ ಆಸ್ಪತ್ರೆಯ ಲ್ಯಾಬೊರೇಟರಿ ಮುಖ್ಯಸ್ಥೆ ಮಾರ್ಥ ಸುಮಂಗಲಾ ಅವರನ್ನು ಸಮ್ಮಾನಿಸ ಲಾಯಿತು. ಪ್ರಾಂಶುಪಾಲೆ ಡಾ| ಲೀಲಾ ಮಣಿಕೋತ್, ಡಾ| ಗಣೇಶ್ ಕಾಮತ್ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ| ಬಿ.ಎನ್.ಪೆರಲಾಯ ಸ್ವಾಗತಿಸಿದರು. ಝುಲ್ಫಾ ವಂದಿಸಿ, ಮನೀಷಾ ಜೆ.ರಾವ್ ಕಾರ್ಯಕ್ರಮ ನಿರೂಪಿಸಿದರು.