ಕಲಬುರಗಿ: ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಸ್ಥಾನ ದೊಡ್ಡದಾಗಿದ್ದು, ಅದರ ಪಾವಿತ್ರ್ಯತೆ, ಮಹತ್ವ ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಿಕ್ಷಕ ಸಂತೋಷಕುಮಾರ ಖಾನಾಪುರೆ ಹೇಳಿದರು.
ಅಫಜಲಪುರ ತಾಲೂಕಿನ ಭೈರಾಮಡಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 20 ವರ್ಷಕ್ಕೂ ಸೇವೆ ಸಲ್ಲಿಸಿ, ವರ್ಗಾವಣೆಯಾಗಿ ಬೇರೆ ಶಾಲೆಗೆ ನಿಯೋಜನೆ ಆಗಿರುವ ಆರು ಶಿಕ್ಷಕರ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಕರ ವರ್ತನೆ ಹಾಗೂ ಮಾತುಗಳನ್ನು ನೋಡಿ ಈಗಿನ ವಿದ್ಯಾರ್ಥಿಗಳು ಕಲಿತು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಾವೆಲ್ಲರೂ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ. ಸಮಾಜದಲ್ಲಿ ಯಾರಿಗೂ ಸಿಗದ ಮರ್ಯಾದೆ ಗುರುಗಳಿಗೆ ಸಿಗುವುದರಿಂದ, ನಮ್ಮ ಬೋಧನೆ ಯಾವಾಗಲೂ ಎಲ್ಲ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ನೀಡುವಂತಿರಬೇಕು ಎಂದು ಹೇಳಿದರು.
ಶಾಲೆಯ ಮುಖ್ಯಶಿಕ್ಷಕ ಹುಚ್ಚಪಯ್ಯ ಹಿರೇಮಠ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧಕರು, ದೇಶದ ಅತ್ಯುತ್ತಮ ನಾಗರಿಕರನ್ನು ಸೃಷ್ಟಿ ಮಾಡುವ ಮಹತ್ತರ ಹೊಣೆ ನಮ್ಮ ಮೇಲಿದೆ. ಹೀಗಾಗಿ ನಾವು ನಮ್ಮ ತನು, ಮನದಿಂದ, ಪ್ರಾಮಾಣಿಕ ಸೇವೆ ಸಲ್ಲಿಸಬೇಕಾಗಿರುವುದು ಹೆಚ್ಚಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವರ್ಗಾವಣೆ ಆಗಿರುವ ಶಿಕ್ಷಕರಾದ ಜಯಶ್ರೀ ಗಚ್ಚಿನಮನಿ, ಸಿದ್ಧಣ್ಣ ಅಲಮೇಲಕರ್, ಜಯವಂತ ಜಾಧವ, ಅಶೋಕ ಚವಾಣ, ಬಕುಲಾಬಾಯಿ ಕುಲಕರ್ಣಿ, ರತ್ನಾಬಾಯಿ ಪಾಟೀಲ ಮಾತನಾಡಿ, ಭೈರಾಮಡಗಿಯಂತ ಐತಿಹಾಸಿಕ ಗ್ರಾಮದಲ್ಲಿ ಕಳೆದ 65 ವರ್ಷಗಳಷ್ಟು ಹಳೆಯ, ಪ್ರತಿಷ್ಠಿತ ಶಾಲೆಯಲ್ಲಿ ಕೆಲಸ ಮಾಡಲು ಪುಣ್ಯ ಮಾಡಿರಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ರಾಮ ಪಟ್ಟಣ, ಸದಸ್ಯರಾದ ಮಡಿವಾಳಪ್ಪ ಚಾಳಿಕಾರ, ಶರಣಗೌಡ ಪಾಟೀಲ ಮಗಿ, ಶಿಕ್ಷಕರಾದ ರಾಜು ನೀಲಂಗೆ, ಪುಷ್ಪಾ ಚಲಗೇರಿ, ಸಿದ್ಧಮ್ಮಾ ಬಾದನಳ್ಳಿ, ಸರೂಬಾಯಿ ಹೆಳವರ, ಕರವೇ ಅಧ್ಯಕ್ಷ ಮಹಾಂತೇಶ ಪಾಟೀಲ, ಶರಣಗೌಡ ಈ. ಪಾಟೀಲ, ಮಹಾಂತಯ್ಯ ಗುತ್ತೇದಾರ ಹಾಗೂ ಇನ್ನಿತರ ಶಿಕ್ಷಕರನ್ನು ಸನ್ಮಾನಿಸಿ, ಬೀಳ್ಕೊಟ್ಟರು.