Advertisement

“ಮೈಕ್ರೊ ವೀಕ್ಷಕರ ಹೊಣೆ ಮಹತ್ವದ್ದು’

02:36 AM Apr 12, 2019 | Team Udayavani |

ಮಂಗಳೂರು: ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪ ಸಂಭವಿಸದಂತೆ ನೋಡಿಕೊಳ್ಳುವ ಬಹುಮುಖ್ಯ ಹೊಣೆಗಾರಿಕೆ ಮೈಕ್ರೋ ವೀಕ್ಷಕರದು ಎಂದು ಚುನಾವಣ ವೀಕ್ಷಕ ರಾಜೀವ ರತನ್‌ ಹೇಳಿದರು.
350 ಮೈಕ್ರೋ ವೀಕ್ಷಕರುಗಳಿಗೆ ಗುರುವಾರ ಪುರಭವನದಲ್ಲಿ ಆಯೋಜಿಸಲಾದ ತರಬೇತಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

Advertisement

ದ. ಕನ್ನಡ ಜಿಲ್ಲೆಯಲ್ಲಿ 640 ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು , ಇಲ್ಲಿ ಸಿಆರ್‌ಪಿಎಫ್‌ ವೆಬ್‌ ಕ್ಯಾಮರಾ ಮತ್ತು ಮೈಕ್ರೋ ವೀಕ್ಷಕರುಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಚುನಾವಣ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬಂದಿಗಳ ಕಾರ್ಯ ವಿಧಾನ, ಇವಿಎಂ, ವಿವಿ ಪ್ಯಾಟ್‌ ಸಹಿತ ಎಲ್ಲ ವಿಷಯಗಳ ಸಂಪೂರ್ಣ ಮಾಹಿತಿ ಹೊಂದಿರಬೇಕು ಎಂದು ಹೇಳಿದರು.

ಮತಗಟ್ಟೆಯ ಬಳಿ ಅಹಿತಕರ ಘಟನೆಗಳು ನಡೆದರೆ, ಮತಯಂತ್ರಗಳಲ್ಲಿ ದೋಷ ಕಂಡುಬಂದರೆ ಕೈಗೊಳ್ಳಬೇಕಾದ ಕ್ರಮ, ಆಯೋಗ ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿ ಚುನಾವಣೆ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಮತದಾನ ನಡೆಯುವ ಹಿಂದಿನ ದಿನವೇ ಇತರ ಸಿಬಂದಿ ಜತೆ ಮತಗಟ್ಟೆಯಲ್ಲಿರಬೇಕು. ಮತದಾನದ ದಿನ ಬೆಳಗ್ಗೆ 6ರಿಂದ ನಡೆಸುವ ಮಾಕ್‌ಪೋಲ್‌ ಪರಿಶೀಲಿಸಿ, ಖಚಿತಪಡಿಸಿಕೊಂಡು ಅಳಿಸಿ ಹಾಕಬೇಕು.

ಮತಗಟ್ಟೆಯೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅನುಮತಿ ನೀಡಬಾರದು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಪೋಲಿಂಗ್‌ ಏಜೆಂಟರಿಗೆ ಅನುಮತಿ ನೀಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ ಅವರು ಏನಾದರೂ ತೊಂದರೆಯಾದರೆ ತತ್‌ಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಸೂಚನೆಯನ್ನು ನೀಡಿದರು.

ಮತದಾನದ ದಿನ ಮತದಾನದ ಪ್ರಮಾಣ, ಮತಯಂತ್ರದಲ್ಲಿ ದೋಷಗಳು ಕಂಡುಬಂದರೆ ಮತಗಟ್ಟೆಗೆ ಭೇಟಿ ನೀಡಿದ ಸೆಕ್ಟರ್‌ ಅಧಿಕಾರಿ ಮತ್ತು ಪೊಲೀಸ್‌ ಅಧಿಕಾರಿಗಳ ವಿವರ, ಅನಧಿಕೃತ ವ್ಯಕ್ತಿಗಳು ಮತಗಟ್ಟೆ ಪ್ರವೇಶಿಸಿದ ವಿವರ, ಮತದಾನಕ್ಕೆ ಯಾವುದೇ ಅಡಚಣೆಯಾದರೆ ಮಾಹಿತಿ ನೀಡುವಂತೆ ಸೂಚಿಸಿದರು.

Advertisement

ಮೈಕ್ರೋ ವೀಕ್ಷಕರಿಗೆ ಇವಿಎಂ, ವಿವಿ ಪ್ಯಾಟ್‌ಗಳ ಕುರಿತು ಡಾ| ಜಾನ್‌ ಪಿಂಟೋ ಪ್ರಾತ್ಯಕ್ಷಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಆರ್‌. ವೆಂಕಟಾಚಲಪತಿ, ಸಹಾಯಕ ಆಯುಕ್ತರಾದ ಪ್ರಮೀಳಾ, ಮಾಸ್ಟರ್‌ ಟ್ರೈನರ್‌ ಪ್ರದೀಪ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next