Advertisement

ಮಾನಸಿಕ ಆರೋಗ್ಯದ ಪ್ರಾಮುಖ್ಯ 

04:04 PM Feb 01, 2022 | Team Udayavani |

ಕಳೆದ ಎರಡು ದಶಕಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ತನ್ನ ವೈವಿಧ್ಯಮಯ ಸ್ವರೂಪಗಳ ಮೂಲಕ ನಮ್ಮ ಬದುಕಿನ ವಿವಿಧ ಆಯಾಮಗಳಲ್ಲಿ ಒಳಪ್ರವೇಶಿಸಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿಗಳನ್ನು ಆರೋಗ್ಯ ಸೇವಾ ಕ್ಷೇತ್ರದಲ್ಲಿ ವಿವಿಧ ರೀತಿಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ದಾಖಲೆಗಳನ್ನು ಸಂಗ್ರಹಿಸಿಡುವುದು, ಜನಸಾಮಾನ್ಯರಿಗೆ ಮಾಹಿತಿ ಒದಗಿಸುವುದು ಇದಕ್ಕೆ ಕೆಲವು ಉದಾಹರಣೆಗಳು. ಭಾರತದ ಜನರಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಮತ್ತು ಡಿಜಿಟಲ್‌ ಸಾಕ್ಷರರ ಪ್ರಮಾಣ ಹೆಚ್ಚಳವಾಗಿರುವುದರಿಂದ ಇ-ಆರೋಗ್ಯ ಸೇವೆಯು ಭವಿಷ್ಯದಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಮತ್ತು ವಿಶೇಷವಾಗಿ  ಗ್ರಾಮೀಣ ಜನರ ಸಹಿತ ದೇಶದ ನಾಗರಿಕರಿಗೆ ಪ್ರಯೋಜನ ಉಂಟು ಮಾಡಲಿದೆ.

Advertisement

ಜಾಗತಿಕ ಸಾಂಕ್ರಾಮಿಕವಾಗಿರುವ ಕೋವಿಡ್‌-19 ಈಗಲೂ ಹಬ್ಬಿ ಹರಡುತ್ತಿದೆ. ಆರೋಗ್ಯ ಸೇವೆ ಮತ್ತು ಅದರ ಸಂಪನ್ಮೂಲಗಳಿಗೆ ಹೊಸ ಹೊಸ ಸವಾಲುಗಳನ್ನು ಒಡುತ್ತಿದೆ. ಪ್ರಯಾಣ ನಿರ್ಬಂಧಗಳು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಸಹಿತ ಅದರ ಮುಂಜಾಗ್ರತೆಗಳಿಗೆ ಕೊನೆಯೇ ಇಲ್ಲವಾಗಿದ್ದು, ಆರೋಗ್ಯ ಸೇವೆಯ ಉಪಯೋಗ ಪಡೆದುಕೊಳ್ಳಬೇಕಾದವರು ಶೀಘ್ರವಾಗಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಅಡ್ಡಿ ಉಂಟು ಮಾಡಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಕೂಡ ಈ ಬದಲಾವಣೆಯಿಂದಾಗಿ ಸಮಸ್ಯೆಗಳಾಗಿವೆ.

ಪ್ರಸ್ತುತ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಅನುಸರಿಸಲಾದ ಒಂದು ಕ್ರಮವೆಂದರೆ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳು, ಅನಾರೋಗ್ಯಗಳಿಗೆ ವೈದ್ಯಕೀಯ ಸಲಹೆ ಪಡೆದು ಬಗೆಹರಿಸಿಕೊಳ್ಳುವುದಕ್ಕೆ ಇ-ಸಮಾಲೋಚನೆಯ ಮೊರೆ ಹೋದುದು. ಖಂಡಿತವಾಗಿ ಈ ವಿಧಾನವು ಕೋವಿಡ್‌ ಪ್ರಕರಣಗಳ ಹೆಚ್ಚಳ ಮತ್ತು ಆರೈಕೆಯ ಅಗತ್ಯಗಳ ನಡುವೆ ಇರುವ ಕಂದರವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳ ವಿಚಾರದಲ್ಲಿ ಇತರ ಅನಾರೋಗ್ಯಗಳಿಗೆ ಹೋಲಿಸಿದರೆ ದೈಹಿಕ ಪರೀಕ್ಷೆಗಳು ಕಡಿಮೆ ಅಗತ್ಯ ಮತ್ತು ನಿರ್ಣಾಯಕವಾಗಿರುವುದರಿಂದ “ಇ-ಮಾನಸಿಕ ಆರೋಗ್ಯ’ ಸೊಲ್ಯೂಶನ್‌ ಆರೋಗ್ಯ ಸೇವೆಯನ್ನು ಒದಗಿಸುವವರಿಗೂ ಪಡೆಯುವವರಿಗೂ ಸಮಾನವಾಗಿ ಪ್ರಯೋಜನಕಾರಿಯಾಗಿದೆ.

ಈಗ ಕೋವಿಡ್‌-19 ಸಾಂಕ್ರಾಮಿಕದ ಹಾವಳಿಯು ಡಿಜಿಟಲ್‌ ಆರೋಗ್ಯ ಸೇವೆಯ ಬಾಗಿಲುಗಳನ್ನು ತೆರೆದುಕೊಟ್ಟಿದೆ. ಸಾಂಕ್ರಾಮಿಕ ಪರಿಸ್ಥಿತಿಯು ತಿಳಿಯಾದ ಬಳಿಕವೂ ಕೂಡ ಭಾರತದ ಗ್ರಾಮೀಣ ಪ್ರದೇಶಗಳಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ಪಸರಿಸುವುದಕ್ಕೆ ತಂತ್ರಜ್ಞಾನದ ಸಹಾಯವನ್ನು ಪಡೆಯಲು ಸಾಧ್ಯ ಎನ್ನುವುದನ್ನು ಇದು ತೋರಿಸಿಕೊಟ್ಟಿದೆ.

 

Advertisement

ಡಾ| ಕೃತಿಶ್ರೀ ಸೋಮಣ್ಣ

ಕನ್ಸಲ್ಟಂಟ್‌ ಸೈಕಿಯಾಟ್ರಿಸ್ಟ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next