ಬೆಳಗಾವಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಉದಾಸೀನತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವೈಯಕ್ತಿಕ ಆಸಕ್ತಿ ಮತ್ತು ಮಾನವೀಯತೆ ಆಧಾರದ ಮೇಲೆ ವಿಕಲಚೇತನರ ಕಲ್ಯಾಣಕ್ಕಾಗಿ ಪ್ರಯತ್ನಿಸಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಸೂಚನೆ ನೀಡಿದರು.
ಈಗ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ ಸುಮಾರು ಜಿಲ್ಲೆಯಲ್ಲಿ 1.5 ಲಕ್ಷ ವಿಕಲಚೇತನರಿದ್ದಾರೆ. ಇವರಿಗಾಗಿ ಬಳಸಬೇಕಾದ ಶೇ.5 ಅನುದಾನವನ್ನು ವ್ಯರ್ಥ ಮಾಡದೇ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಪಾಲಕರು ತಮ್ಮ ಮಕ್ಕಳು ಎದುರಿಸುತ್ತಿರುವ ಅಂಗ ವೈಕಲ್ಯದ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಬೆಳಗಾವಿ ತಾಲೂಕಿನ ಕಣಬರ್ಗಿಯ ತ್ರಿವೇಣಿ ಎಂಬ 9 ವರ್ಷದ ಮಗುವಿಗೆ ಇದುವರೆಗೆ ಮಾತು ಬಂದಿಲ್ಲ ಎಂದು ಪಾಲಕರು ತಿಳಿಸಿದಾಗ ಇದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಕೇಳಿದ ಆಯುಕ್ತ ವಿ.ಎಸ್.ಬಸವರಾಜು ಅವರು ಇದುವರೆಗೆ ಈ ಮಗುವಿನ ಬಗ್ಗೆ ಏಕೆ ಗಮನಹರಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಒಂಬತ್ತು ವರ್ಷದ ಮಗು ಶಿಕ್ಷಣದಿಂದ ವಂಚಿತಗೊಂಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮವಹಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಯುಕ್ತರು ತಕ್ಷಣವೇ ಈ ರೀತಿಯ ಸಮಸ್ಯಾತ್ಮಕ ಮಕ್ಕಳನ್ನು ಗುರುತಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಮತ್ತು ಶಿಕ್ಷಣದ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
Advertisement
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಕಲಚೇತನರ ಹಕ್ಕುಗಳ ರಕ್ಷಣೆ ಮತ್ತು ಶೇ. 5 ಆಯವ್ಯಯ ಬಳಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಕಲಚೇತನರ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದಾಗ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ವಿಕಲಚೇತನರ ಕಲ್ಯಾಣ ಯೋಜನೆ ಜಾರಿಗೆ ತರುವುದು ಕೇವಲ ಒಂದು ಇಲಾಖೆಯ ಹೊಣೆಗಾರಿಕೆ ಅಲ್ಲ. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
Related Articles
Advertisement
ಹಿಂಡಲಗಾದ ಆರು ವರ್ಷದ ಮಗುವಿನ ಕಾಲುಗಳಲ್ಲಿ ಸ್ವಾಧೀನವಿಲ್ಲದೇ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಮಗುವಿನ ತಾಯಿ ನೋವು ತೋಡಿಕೊಂಡಳು. ಸರ್ಕಾರಿ ಆಸ್ಪತ್ರೆಯಲ್ಲಿ ಆರು ಜನರು ಫಿಜಿಯೋ ತಜ್ಞ ವೈದ್ಯರಿದ್ದರೂ ಇಂತಹ ಮಕ್ಕಳಿಗೆ ಏಕೆ ಫಿಜಿಯೋಥೆರಪಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆಯುಕ್ತರು ಪ್ರಶ್ನಿಸಿದರು. ಕೂಡಲೇ ವಾರದಲ್ಲಿ ಎರಡು ದಿನ ಜಿಲ್ಲಾ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ಸೇವೆ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಅದೇ ರೀತಿ ಬೆಳಗಾವಿಯ ರುಕ್ಮಿಣಿನಗರದ ಎಂಟು ವರ್ಷದ ಬಾಲಕನಿಗೆ ಮಾತು ಬರುವುದಿಲ್ಲ. ಕಿವಿ ಕೇಳಿಸುವುದಿಲ್ಲ ಎಂಬುದನ್ನು ಗಮನಿಸಿದ ಆಯುಕ್ತರು ಬಹುಪ್ರಮಾಣದ ಅಂಗವೈಕಲ್ಯ ಹೊಂದಿರುವ ಮಗುವಿಗೆ ಬೆಂಗಳೂರಿನಲ್ಲಿ ಉಚಿತ ಶಿಕ್ಷಣ ನೀಡುವ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಕಲಚೇತನ ಮಕ್ಕಳಿಗೆ ಅಂಕವೈಕಲ್ಯತೆಯ ಪ್ರಮಾಣಪತ್ರ ನೀಡಿದರೆ ಚಿಕಿತ್ಸೆ ಮತ್ತು ಮಾಸಾಶನಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಈ ರೀತಿಯ ಮಕ್ಕಳನ್ನು ಗುರುತಿಸಿ ಮಾನವೀಯತೆ ದೃಷ್ಟಿಯಿಂದ ತಕ್ಷಣವೇ ಕ್ರಮ ವಹಿಸಬೇಕು ಎಂದು ಹೇಳಿದರು.
ವಿಕಲಚೇತನ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಶೇ.5 ಅನುದಾನ ಲಭ್ಯವಿದ್ದು, ಈ ಅನುದಾನದಲ್ಲಿ ಸೂಕ್ತ ಚಿಕಿತ್ಸಾ ಘಟಕ ಆರಂಭಿಸುವಂತೆ ಹೇಳಿದ ಅವರು, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರತಿವರ್ಷ ಸಮೀಕ್ಷೆ ನಡೆಸಲಾಗುತ್ತಿದ್ದರೂ ವಿಕಲಚೇತನ ಮಕ್ಕಳು ಚಿಕಿತ್ಸೆ ಮತ್ತು ಶಿಕ್ಷಣದಿಂದ ವಂಚಿತಗೊಳ್ಳುತ್ತಿರುವ ಬಗ್ಗೆ ಅವರು ತೀವ್ರ ವಿಷಾದ ವ್ಯಕ್ತಪಡಿಸಿದರು.
ಅಂಗವಿಕಲ ಮಕ್ಕಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಪರಿಹಾರ ಸೂಚಿಸಿದ ಅಯುಕ್ತರು ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಇರುವ ಶೇ.5 ಅನುದಾನದ ಬಳಕೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕೆ.ವಿ., ವಿಕಲಚೇತನರ ಕಲ್ಯಾಣಕ್ಕಾಗಿ ಇರುವ ಹಣವನ್ನು ಎಲ್ಲ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳು ಕಡ್ಡಾಯವಾಗಿ ಮೀಸಲಿಟ್ಟು ಅದನ್ನು ಸದ್ಬಳಕೆ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ್ ನರಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹಂಜಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಬಿ.ಪುಂಡಲೀಕ್ ಉಪಸ್ಥಿತರಿದ್ದರು.
ಆಯಕ್ತರ ಜಿಲ್ಲಾ ಪ್ರವಾಸ:
ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಜೂನ್ 12 ಹಾಗೂ 13ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. 12 ರಂದು ಬೆಳಗ್ಗೆ 11-30 ರಿಂದ ಸಂಜೆ 5-30 ರವರೆಗೆ ಚಿಕ್ಕೋಡಿಯ ಮಿನಿವಿಧಾನಸೌಧದಲ್ಲಿರುವ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಭವನ, 13 ರಂದು ಬೆಳಗ್ಗೆ 10 ರಿಂದ ಮದ್ಯಾಹ್ನ 1 ರವರೆಗೆ ಕ್ಷೇತ್ರ ಭೇಟಿ, ಸುಲಭ ಲಭ್ಯತಾ ಸೌಲಭ್ಯ ಪರಿಶೀಲನೆ, ಮದ್ಯಾಹ್ನ 2-30 ರಿಂದ ಸಂಜೆ 5-30 ರವರೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಕುಂದುಕೊರತೆ ಸಭೆಯನ್ನು ನಡೆಸುವರು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದ್ದಾರೆ.