Advertisement

ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ತಡೆಯಲಾಗದು

09:46 PM Dec 25, 2019 | Lakshmi GovindaRaj |

ಹಾಸನ: ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿದರೂ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಾಗಿರುವುದನ್ನು ಪುನರ್‌ ಪರಿಶೀಲನೆ ಮಾಡುವುದಿಲ್ಲ ಆದರೆ ಕಾಯ್ದೆಯ ಬಗ್ಗೆ ಮತ್ತು ಅದರ ಸಕಾರಾತ್ಮಕ ಅಂಶಗಳ ಬಗ್ಗೆ ಬಿಜೆಪಿಯು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜನವರಿಯಲ್ಲಿ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸ್ಪಷ್ಟಪಡಿಸಿದರು.

Advertisement

ನಗರದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯಿದೆ ಪುನರ್‌ ಪರಿಶೀಲನೆ ಸಾಧ್ಯವಿಲ್ಲ ಎಂಬುದನ್ನು ಪ್ರಧಾನಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ಬಿಜೆಪಿ ಬದ್ಧವಾಗಿದ್ದು, ಕಾಯ್ದೆಯ ಜಾರಿಯಿಂದ ದೇಶಕ್ಕಾಗುವ ಅನುಕೂಲಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ವಲಸಿಗರಿಗೆ ಪೌರತ್ವ: ಭಾರತಕ್ಕೆ ನೆರೆ,ಹೊರೆಯ ದೇಶಗಳು ಜನರು ಬಂದು ನೆಲಸಬಹುದು ಎಂದರೆ ಭಾರತ ಉಳಿಯಲು ಸಾಧ್ಯವೇ ? ವಿದೇಶಗಳಿಂದ ಬಂದ ವಲಸಿಗರು ದೇಶದಲ್ಲಿ ನೆಲಸಿ ಸವಲತ್ತುಗಳನ್ನು ಅನುಭವಿಸುವುದಾದರೆ ದೇಶದ ಮೂಲ ನಿವಾಸಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ನೆರೆಹೊರೆಯ ದೇಶಗಳಿಂದ ವಲಸೆ ಬಂದಿರುವ ಆ ದೇಶಗಳ ಅಲ್ಪಸಂಖ್ಯಾತರಿಗೆ ಒಮ್ಮೆ ಪೌರತ್ವ ನೀಡಿ ದೇಶದ ಪ್ರಜೆಗಳಿಗೆ ಒಳಿತು ಮಾಡುವುದು ಕಾಯ್ದೆಯ ಉದ್ದೇಶವಾಗಿದೆ ಎಂದು ಹೇಳಿದರು.

ದೇಶದ ಮುಸ್ಲಿಮರಿಗೆ ಆತಂಕವಿಲ್ಲ: ಭಾರತದಲ್ಲಿ ಹುಟ್ಟಿದ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಆದರೆ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದಿರುವ ಬಾಂಗ್ಲಾ, ಪಾಕಿಸ್ತಾನ, ಅಪಾ^ನಿಸ್ತಾನದ ಮುಸ್ಲಿಮರನ್ನು ದೇಶದಿಂದ ಹೊರ ಹಾಕುವುದು ಒಳ್ಳೆಯದಲ್ಲವೇ? ನಿಮಗೆ ಸಂಕಟವಿದ್ದರೆ ನಮ್ಮ ಕೆನ್ನೆಗೆ ಹೊಡೆಯಿರಿ ಆದರೇ ದೇಶಕ್ಕೆ ನಷ್ಟ ಮಾಡಬೇಡಿ ಎಂದು ದೇಶದ ಪ್ರಧಾನಿ ಮೋದಿಯವರು ಹೇಳಿದ್ದಾರೆ ಎಂದರು.

ಈಗಾಗಲೇ ಸಿಎಎ ಪ್ರಕಾರ. 11 ವರ್ಷದಿಂದ ಭಾರತದಲ್ಲಿ ನೆಲಸಿರುವ ಅಲ್ಪಸಂಖ್ಯಾತರು ಅರ್ಹತೆ ಇದ್ದವರು ಪೌರತ್ವಕ್ಕೆ ಅರ್ಜಿ ಹಾಕಿಕೊಂಡು ಪೌರತ್ವ ಪಡೆಯಬಹುದು. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾಸ್ತಾನದಿಂದ ಬಂದವರು ಭಾರತವೇ ನಮ್ಮ ತವರು ಎಂದುಕೊಂಡು ನೆಲೆಸಲು ಮುಂದಾಗಿದ್ದಾರೆ. ಅವರನ್ನು ಸಹಿಸಲು ಸಾಧ್ಯವೇ ಎಂದೂ ಎಂದೂ ಪ್ರಶ್ನಿಸಿದರು.

Advertisement

ಸಿಎಎ ಹಾಗೂ ಎನ್‌ಆರ್‌ಸಿಗೆ ಸಂಬಂಧವಿಲ್ಲ: ಎನ್‌.ಆರ್‌.ಸಿ. ಬಂದರೆ ರಾಜಾಕರಣ ಮಾಡಲು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಕೆಲವು ಪಕ್ಷಗಳು ಮುಸ್ಲಿಮರನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿವೆ. ಸಿಎಎ ಗೂ ಮತ್ತು ಎನ್‌ಆರ್‌ಸಿ ಗೂ ಯಾವ ಸಂಬಂಧವಿಲ್ಲ. ಎನ್‌ಆರ್‌ಸಿ. ಜಾರಿಗೆ ಕಾಂಗ್ರೆಸ್‌ನವರೇ ಮುಂದಾಗಿದ್ದರು. ಭಾರತೀಯನಿಗೆ ಗುರುತು ಇರಬೇಕು ಎಂದು ಎನ್‌.ಆರ್‌.ಸಿ. ಪ್ರಾರಂಭವಾಗಿದೆ. ಆಧಾರ್‌ ಕಾರ್ಡ್‌ಗೆ ಯಾರೂ ದಾಖಲೆ ಕೊಡಲು ಆಗುವುದಿಲ್ಲ. ಪೌರತ್ವ ಕಾಯ್ದೆ ತಿದ್ದುಪಡಿ ಈಗ ಕೈಗೆತ್ತಿಕೊಂಡಿರುವುದಲ್ಲ. ಬಹಳ ವರ್ಷಗಳ ಚರ್ಚೆಯ ನಂತರ ಈಗ ಜಾರಿಯಾಗುತ್ತಿದೆ. ಈ ಬಗ್ಗೆ ಜನರಿಗೆ ಬಿಜೆಪಿ ಮನವರಿಕೆ ಮಾಡಿಕೊಡಲಿದೆ ಎಂದರು.

ಮಂಗಳೂರಿನ ಗಲಭೆ ಪೂರ್ವ ಜಿಯೋಜಿತ ಎಂಬುದು ಸಿಸಿ ಕ್ಯಾಮೆರಾ ದೃಶ್ಯಾವಳಿಗಳಿಂದ ಗೊತ್ತಾಗುತ್ತಿದೆ. ಆ ದೃಶ್ಯಾವಳಿಗಳನ್ನು ಬಿಜೆಪಿ ಸೃಷ್ಟಿಸಿಲ್ಲ. ಪೆಟ್ರೋಲ್‌ ಬಾಂಬ್‌, ಲಾರಿಗಳಲ್ಲಿ ಮೂಟೆಗಟ್ಟಲೆ ಕಲ್ಲುಗಳನ್ನು ತಂದವರು ಯಾರು ಎಂಬುದು ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಇದನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ನೋಡಿ ಮನವರಿಕೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಮತ್ತಿತರರು ಈ ಸಮದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next