Advertisement

ಮಾನವ ಹಕ್ಕುಗಳ ಅನುಷ್ಠಾನ ಮುಖ್ಯ

02:25 PM Dec 11, 2017 | |

ದಾವಣಗೆರೆ: ಮಾನವ ಹಕ್ಕುಗಳ ಬಗ್ಗೆ ವೇದಿಕೆ ಭಾಷಣ, ಘೋಷಣೆಗಿಂತಲೂ ಕೃತಿಯಲ್ಲಿ ಅನುಷ್ಠಾನ ಅತೀ ಮುಖ್ಯ ಎಂದು ರಾಷ್ಟ್ರೀಯ
ಮಾನವ ಹಕ್ಕುಗಳ ಆಯೋಗದ ವಿಶ್ರಾಂತ ಅಧ್ಯಕ್ಷ ಡಾ| ಶಿವರಾಜ ವಿ. ಪಾಟೀಲ್‌ ತಿಳಿಸಿದರು.

Advertisement

ಭಾನುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಮಾನವ ಹಕ್ಕುಗಳ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಾವು
ಇನ್ನೊಬ್ಬರಿಂದ ಗೌರವ ಅಪೇಕ್ಷಿಸುತ್ತೇವೆಯೋ ಅದೇ ರೀತಿ ಇನ್ನೊಬ್ಬರನ್ನು ಗೌರವಿಸುವುದೇ ಮಾನವ ಹಕ್ಕು. ಮಾನವ ಹಕ್ಕುಗಳ ಅನುಷ್ಠಾನಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು ಎಂದರು.

ದೇಶ, ಭಾಷೆ, ಜಾತಿ, ವರ್ಗ, ಪಂಥ, ಲಿಂಗ… ಹೀಗೆ ಯಾವ ಭೇದಭಾವ ಇಲ್ಲದೇ ಇರುವಂತಹ ನೈಜ ಹಕ್ಕುಗಳೇ ಮಾನವ ಹಕ್ಕು.
ಪ್ರತಿಯೊಬ್ಬರು ಹುಟ್ಟಿನಿಂದಲೇ ಮಾನವ ಹಕ್ಕುಗಳ ಪಡೆಯುತ್ತಾರೆ. ನಮ್ಮ ದೇಶದಲ್ಲಿ ಮಾನವ ಹಕ್ಕುಗಳು ಒಳಗೊಂಡಂತೆ ಪ್ರತಿ ಹಕ್ಕುನ ರಕ್ಷಣೆ, ಪೋಷಣೆಗೆ ಸಾಕಷ್ಟು ಕಾನೂನು ಇವೆ. ನಮ್ಮಲ್ಲಿ ಕಾನೂನುಗಳಿಗೇನು ಕೊರತೆ ಇಲ್ಲ. ಆದರೆ, ಅನುಷ್ಠಾನದಲ್ಲಿ ಕೊರತೆ ಕಂಡು ಬರುತ್ತಿದೆ. ಹಾಗಾಗಿಯೇ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿವೆ. ಯಾವುದೇ ಹಕ್ಕು, ಕಾನೂನುಗೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ಅತೀ ಮುಖ್ಯ ಎಂದು ಪ್ರತಿಪಾದಿಸಿದರು.

ಭಾರತದಲ್ಲಿ ಮಾನವ ಹಕ್ಕುಗಳಿಗೆ ಯಾವುದೇ ಲೇಬಲ್‌ ಇಲ್ಲ. ಋಗ್ವೇದ ಕಾಲದಿಂದಲೂ ಮಾನವ ಹಕ್ಕುಗಳು ಇವೆ. ಅನೇಕಾನೇಕ ದಾರ್ಶನಿಕರು ಸಾರಿರುವ ಸಮಾನತೆಯ ಮಂತ್ರವೇ ಮಾನವ ಹಕ್ಕು. ಕಾಲಾನುಕ್ರಮೇಣ ಮೌಲ್ಯಗಳ ಕುಸಿತದಂತೆ ಮಾನವ ಹಕ್ಕುಗಳ ಉಲ್ಲಂಘನೆಯೂ ಹೆಚ್ಚಾಗುತ್ತಿದೆ. ಇಡೀ ಮಾನವ ಸಂಕುಲಕ್ಕೆ ಅತೀ ಮುಖ್ಯವಾದ ಮಾನವ ಹಕ್ಕುಗಳ ದಿನಾಚರಣೆಯಂದು ಮಾನವ ಹಕ್ಕುಗಳ ಸಂರಕ್ಷಣೆಯ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು. 

ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ ಮಾನವ ಸಂಕುಲದ ಮೇಲೆಯೇ ನಡೆಸಿದ ಆಕ್ರಮಣ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನು ಜಾರಿಗೆ ಕಾರಣವಾ ಯಿತು. ಒಂದರ್ಥದಲ್ಲಿ ಹಿಟ್ಲರ್‌ ಮಾನವ ಹಕ್ಕುಗಳ ವೇದಿಕೆ ಅಸ್ತಿತ್ವಕ್ಕೆ ಕಾರಣಕರ್ತ. 1948ರ ಡಿ.10 ವಿಶ್ವಸಂಸ್ಥೆ ವಿಶ್ವ ಮಾನವ ಹಕ್ಕುಗಳ ಘೋಷಣೆ ಮಾಡಿತು. 1993 ರಲ್ಲಿ ಭಾರತ ಜಗತ್ತಿನ ಮೊದಲ ದೇಶವಾಗಿ ಮಾನವ ಹಕ್ಕುಗಳ ಘೋಷಣೆ ಮಾಡಿತು ಎಂದು ತಿಳಿಸಿದರು.

Advertisement

ಸದಾ ಜಾಗೃತ ನಾಗರಿಕ ಸಮಾಜ, ಬದ್ಧತೆ ಸ್ವಯಂ ಸೇವಾ ಸಂಸ್ಥೆ, ಪ್ರಾಮಾಣಿಕತೆ, ದಕ್ಷತೆಯ ಅಧಿಕಾರ ವರ್ಗ, ಸಕ್ರಿಯತೆಯ ನ್ಯಾಯಾಂಗ ವ್ಯವಸ್ಥೆ ಮತ್ತು ಸಕರಾತ್ಮಕ ಮಾಧ್ಯಮ ಒಂದಾಗಿ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕು. ಬಾಲ್ಯವಿವಾಹ,
ಬಾಲಕಾರ್ಮಿಕತೆಗೆ ಒಳಗಾಗುವಂತವರಲ್ಲಿ ಒಬ್ಬರನ್ನು ರಕ್ಷಿಸುವುದು ಅವರ ಭವಿಷ್ಯವನ್ನೇ ರೂಪಿಸಿದಂತೆ. ನಾವೆಲ್ಲರೂ ಮೊದಲು ಉತ್ತಮ ಮಾನವರಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡೋಣ, ಮಾನವ ಹಕ್ಕುಗಳ ರಕ್ಷಿಸೋಣ ಎಂದು ಮನವಿ ಮಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ. ಶ್ರೀದೇವಿ ಮಾತನಾಡಿ, ವೇದಗಳ ಕಾಲದಿಂದಲೂ ಮಾನವ ಹಕ್ಕುಗಳಿವೆ. ಆದರೆ, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗುತ್ತಿಲ್ಲ. ಪ್ರತಿಯೊಬ್ಬರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ಮಾನವ ಹಕ್ಕುಗಳ ದಿನಾಚರಣೆ ನಮ್ಮ ಹಕ್ಕುಗಳ ದಿನಾಚರಣೆ.
ಅರ್ಹರನ್ನ ಗುರುತಿಸಿ, ಸೂಕ್ತ ಅವಕಾಶ ಮಾಡಿಕೊಡುವಂತಾಗಬೇಕು. ನಿಜವಾಗಿಯೂ ಸಮಾನತೆಯ ಅವಕಾಶ ಮಾಡಿಕೊಡುವ ಮೂಲಕ ಶಕ್ತಾನುಸಾರ ಸಮಾಜವ ಸರಿ ದಾರಿಗೆ ತರಬೇಕು ಎಂದು ಮನವಿ ಮಾಡಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಮಾನವ ಹಕ್ಕುಗಳ  ವೇದಿಕೆ ಜಿಲ್ಲಾ ಉಪಾಧ್ಯಕ್ಷ ಬಿ.ಎಂ. ಹನುಮಂತಪ್ಪ, ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ಕುಮಾರ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಉದ್ದೇಶ್‌, ಉಪ ವಿಭಾಗಾಧಿಕಾರಿ ಸಿದ್ದೇಶ್ವರ್‌ ಇತರರು ಇದ್ದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಸ್ವಾಗತಿಸಿದರು. ಪ್ರಭಾಕರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next