Advertisement

ರಾಜ್ಯ ಸರ್ಕಾರದ ವಜಾ ತಕ್ಷಣದ ಆಯ್ಕೆ

01:21 AM Jul 20, 2019 | Team Udayavani |

ಬೆಂಗಳೂರು: ಶುಕ್ರವಾರವೇ ವಿಶ್ವಾಸಮತಯಾಚನೆಯನ್ನು ಪೂರ್ಣಗೊಳಿಸಿ ಎಂದು ನೀಡಲಾಗಿದ್ದ ಎರಡೂ ಸೂಚನೆಗಳನ್ನು ಸಿಎಂ ಕುಮಾರಸ್ವಾಮಿ ಅವರು ಪಾಲಿಸುವಲ್ಲಿ ವಿಫ‌ಲರಾಗಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಬಹುಮತದ ಸರ್ಕಾರ ಆಡಳಿತದಲ್ಲಿ ಇರುವಂತೆ ನೋಡಿಕೊಳ್ಳುವ ಸಾಂವಿಧಾನಿಕ ಜವಾಬ್ದಾರಿ ರಾಜ್ಯಪಾಲರ ಮೇಲಿದೆ. ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಅಥವಾ ಬಹುಮತ ಕಳೆದುಕೊಂಡಿದೆ ಎಂದು ರಾಜ್ಯಪಾಲರಿಗೆ ಮನನವಾದರೆ ತಕ್ಷಣ ಸರ್ಕಾರವನ್ನು ಬಹುಮತಕ್ಕೆ ತರಬೇಕಾಗಿರುವುದು ರಾಜ್ಯಪಾಲರ ಹೊಣೆಗಾರಿಕೆ.

ಆ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ಮುಖ್ಯಮಂತ್ರಿಯವರಿಗೆ ಸೂಚನೆ ನೀಡಿದ್ದಾರೆ. ಆ ಸೂಚನೆ ಪಾಲನೆ ಆಗದಿದ್ದರೆ ತಕ್ಷಣ ನೇರವಾಗಿ ಸರ್ಕಾರ ವಜಾ ಮಾಡುವ ಪರಮ ಅಧಿಕಾರ ರಾಜ್ಯಪಾಲರಿಗಿದೆ ಎಂದು ಸುಪ್ರೀಂಕೋರ್ಟ್‌ ವಕೀಲ ಕೆ.ವಿ ಧನಂಜಯ ಹೇಳುತ್ತಾರೆ.

ಒಂದೊಮ್ಮೆ ಬಹುಮತ ಸಾಬೀತುಪಡಿಸಲು ಒಂದಷ್ಟು ಕಾಲಾವಕಾಶ ಬೇಕು ಎಂದಾದಲ್ಲಿ ಮುಖ್ಯಮಂತ್ರಿಯವರು ರಾಜ್ಯಪಾಲರನ್ನು ಭೇಟಿ ಮಾಡಿ ಕಾಲಾವಕಾಶಕ್ಕೆ ಸಮರ್ಥ ಕಾರಣಗಳನ್ನು ಕೊಟ್ಟು ಮನದಟ್ಟು ಮಾಡಬೇಕು. ಆ ಕಾರಣ ಸಮರ್ಥನೀಯ ಎಂದು ಮನವರಿಕೆ ಆದಲ್ಲಿ ರಾಜ್ಯಪಾಲರು ಕಾಲಾವಕಾಶ ನೀಡಬಹುದು. ನೀಡದಿದ್ದರೆ ಆ ಬಗ್ಗೆ ಚಕಾರ ಎತ್ತುವ ಅಥವಾ ಆಕ್ಷೇಪ ವ್ಯಕ್ತಪಡಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಧನಂಜಯ ಹೇಳುತ್ತಾರೆ.

ನಿರ್ದೇಶನ ಉಲ್ಲಂಘನೆ ಗಂಭೀರ ವಿಚಾರ: “ರಾಜ್ಯಪಾಲರ ನಿರ್ದೇಶನ ಉಲ್ಲಂ ಸುವುದು ಗಂಭೀರ ವಿಚಾರ,’ ಎಂದು ಹಿರಿಯ ವಕೀಲರು ಹಾಗೂ ಮಾಜಿ ಅಡ್ವೋಕೆಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂದು ರಾಜ್ಯಪಾಲರಿಗೆ ಮೆಲ್ನೋಟಕ್ಕೆ ಕಂಡು ಬಂದರೆ ಬಹುಮತ ಸಾಬೀತಿಗೆ ಸೂಚಿಸಲು ಹಕ್ಕಿದೆ.

Advertisement

ಈಗಾಗಲೇ ರಾಜ್ಯಪಾಲರು ನೀಡಿರುವ ನಿರ್ದೇಶನಗಳನ್ನು ಸಿಎಂ ಉಲ್ಲಂಘಿಸಿದ್ದಾರೆ. ಈ ಅಂಶಗಳನ್ನು ಆಧರಿಸಿ ರಾಜ್ಯಪಾಲರು ಮುಂದಿನ ತೀರ್ಮಾನಗಳನ್ನು ಕೈಗೊಳ್ಳಬಹುದು. ರಾಜ್ಯಪಾಲರ ಸೂಚನೆ ಹೊರತಾಗಿಯೂ ಬಹುಮತ ಸಾಬೀತು ವಿಳಂಬವಾಗುತ್ತಿರುವುದು ಗಂಭೀರ ವಿಚಾರವಾಗಿದೆ ಎಂದು “ಉದಯವಾಣಿ’ಗೆ ಅವರು ತಿಳಿಸಿದರು.

ರಾಜ್ಯಪಾಲರಿಗೆ ಅಧಿಕಾರವುಂಟು: ಈ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಹೈಕೋರ್ಟ್‌ ವಕೀಲರಾಗಿರುವ ಎ.ಅರುಣ್‌ ಶ್ಯಾಮ್‌, “ರಾಜ್ಯದಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯ ರಾಜ್ಯಪಾಲರು ಮುಖ್ಯಸ್ಥರಾಗಿರುತ್ತಾರೆ. ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ, ಸ್ಪೀಕರ್‌ ಹಾಗೂ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವ ಸಂವಿಧಾನಬದ್ಧ ಅಧಿಕಾರ ಅವರಿಗಿದೆ ಎಂದಿದ್ದಾರೆ.

ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಘೋಷಿಸಲಾಗಿದೆ. ಒಂದು ಕಡೆ ಸರ್ಕಾರಕ್ಕೆ ಬಹುಮತ ಇಲ್ಲ. ಮತ್ತೂಂದು ಕಡೆ ಸಚಿವರು ಇಲ್ಲದಿದ್ದರೂ ದೈನಂದಿನ ಆಡಳಿತ ಯಥಾಪ್ರಕಾರ ನಡೆಯುತ್ತಿದೆ. “ರಾಜ್ಯಪಾಲರು ತಮಗಿರುವ ಅಧಿಕಾರ ಚಲಾಯಿಸಿ ವಿಶ್ವಾಸ ಮತ ಯಾಚನೆ ಮಾಡಲು ನೀಡಿರುವ ಸೂಚನೆಯನ್ನು ಸ್ಪೀಕರ್‌ ಹಾಗೂ ಮುಖ್ಯಮಂತ್ರಿಗಳು ಉಲ್ಲಂಘಿಸಿದ್ದಾರೆ.

ವಿಶ್ವಾಸಮತ ಯಾಚನೆಯಲ್ಲೂ ವಿಳಂಬ ಮಾಡಲಾಗುತ್ತಿದೆ. ಈ ಅಂಶಗಳನ್ನು ಗಮನಿಸಿ ರಾಜ್ಯದಲ್ಲಿ ಸಂವಿಧಾನ ಬಿಕ್ಕಟ್ಟು ಹಾಗೂ ಅರಾಜಕತೆ ಸೃಷ್ಟಿಯಾಗಿದೆ ಎಂಬ ವಿಸ್ತ್ರತ ವರದಿಯನ್ನು ರಾಷ್ಟ್ರಪತಿಗಳಿಗೆ ಕೊಡಬಹುದು. ಈ ವರದಿ ಪರಿಶೀಲಿಸಿ ರಾಷ್ಟ್ರಪತಿಗಳು, ರಾಷ್ಟ್ರಪತಿ ಆಳ್ವಿಕೆ, ಇನ್ನಿತರೆ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ,’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next