ಒಮ್ಮೆ ನಾನು ಮತ್ತು ನನ್ನ ಅಮ್ಮ ಮಾರ್ಕೆಟ್‌ಗೆ ಹೋಗಿದ್ದೆವು. ಮನೆಗೆ ಬೇಕಾದ ಸಾಮಾನು-ದಿನಸಿಗಳನ್ನು ಖರೀದಿಸಿದ ಬಳಿಕ ಇನ್ನೇನು ಮರಳ್ಳೋಣ ಎಂಬಷ್ಟರಲ್ಲಿ ನನ್ನ ದೃಷ್ಟಿ ಅಲ್ಲೇ ಬದಿಯಲ್ಲಿ ಕುಳಿತಿದ್ದ ಭಿಕ್ಷುಕನೊಬ್ಬನ ಕಡೆಗೆ ಹೊರಳಿತು. ಅಲ್ಲೊಂದು ಮರವಿತ್ತು. ಅದರ ನೆರಳಿನಲ್ಲಿ ಆತ ಕುಳಿತಿದ್ದ. ತಲೆಗೂದಲು ಕೆದರಿತ್ತು. ಕಾಲು ತುಂಡಾಗಿತ್ತು, ದೇಹ ಸೊರಗಿತ್ತು. ದೇಹದಲ್ಲಿ ದೈನ್ಯತೆ ಎದ್ದು ಕಾಣುತ್ತಿತ್ತು. ನನಗೆ ಅವನನ್ನು ನೋಡಿ ತುಂಬ ಸಂಕಟವೆನಿಸಿತು.
ನಾವು ಅವನ ಮುಂದೆ ಹಾದು ಹೋಗುತ್ತಿದ್ದಂತೆ ತನ್ನ ಎರಡೂ ಕೈಗಳನ್ನು ಮುಂದೆ ಚಾಚಿ, “ಅಮ್ಮಾ , ಏನಾದ್ರೂ ಇದ್ರೆ ಕೊಡಮ್ಮ’ ಎಂದು ಬೇಡಿಕೊಂಡ. ನನ್ನ ಕೈಯಲ್ಲಿ ಇಪ್ಪತ್ತು ರೂಪಾಯಿ ನೋಟು ಇತ್ತು. ಏನನ್ನೋ ಖರೀದಿಸಲು ಇಟ್ಟುಕೊಂಡಿದ್ದೆ. ಅದನ್ನು ಅವನ ಕೈಗೆ ಹಾಕಿದೆ. ಆ ನೋಟನ್ನು ತನ್ನ ಎರಡೂ ಕಣ್ಣುಗಳಿಗೆ ತಾಕಿಸಿ, ತನ್ನಲ್ಲಿಟ್ಟುಕೊಳ್ಳುತ್ತ ಎರಡೂ ಕೈಗಳನ್ನು ಜೋಡಿಸಿ ಧನ್ಯವಾದ ಹೇಳಿದನು.
ನನ್ನ ಕಂಠ ಗದ್ಗದವಾಯಿತು. ನನ್ನ ಕಣ್ಣುಗಳು ಹನಿಗೂಡಿದವು. ನಾನು ಸುಮ್ಮನೆ ಅವನನ್ನೇ ನೋಡುತ್ತ ನಿಂತಿದ್ದೆ. “ಬರ್ಪುಜನದೆ ಪೊರ್ತಾಂಡ್’- (“ಬರುವುದಿಲ್ಲವೇನೇ ಹೊತ್ತಾಯ್ತು’) ಎಂದು ಅಮ್ಮ ಕರೆದರು. ನಾನು ತತ್‌ಕ್ಷಣಕ್ಕೆ ವಾಸ್ತವಕ್ಕೆ ಬಂದೆ. ಅವರು ನನ್ನಿಂದ ಸಾಕಷ್ಟು ಮುಂದೆ ಹೋಗಿದ್ದರು. ಭಿಕ್ಷುಕನನ್ನೇ ನೋಡುತ್ತ ಅಮ್ಮನತ್ತ ಬೇಗ ಬೇಗನೆ ನಡೆಯತೊಡಗಿದೆ.
ಎಂಥ ಬಂಧವೊ ಏನೋ, ಅವನ ದೈನ್ಯದ ಬಿಂಬವೇ ನನ್ನ ಕಣ್ಣೆದುರು ಗಾಢವಾಗಿ ಕುಳಿತುಬಿಟ್ಟಿತ್ತು. ಹುಟ್ಟುವಾಗ ಆತ ಹೇಗಿದ್ದನೋ, ಆಮೇಲೆ ಯಾಕೆ ಹಾಗಾದನೊ, ಅವನಲ್ಲಿ ಎಂಥ ಕನಸುಗಳಿದ್ದವೊ, ಆ ಕನಸುಗಳೆಲ್ಲ ಯಾಕೆ ಕಮರಿ ಹೋದವೊ- ಎಂದೆಲ್ಲ ಯೋಚಿಸುತ್ತ ನನ್ನ ಮನಸ್ಸು ತಳಮಳಪಟ್ಟಿತು. ಸುತ್ತಮುತ್ತ ನೋಡಿದರೆ ಜನರೆಲ್ಲ ಅವರವರದೇ ಲೋಕದಲ್ಲಿ ಮುಳುಗಿ ಹೋಗಿದ್ದರು.
ನಿಕ್ಷಿತಾ ಕುಲಾಲ್
ದ್ವಿತೀಯ ಪಿಯುಸಿ, ಎಕ್ಸಲೆಂಟ್ ಕಾಲೇಜ್, ಮೂಡುಬಿದಿರೆ