Advertisement
ಇಲ್ಲಿಯ ಕಣಬರ್ಗಿ ರಸ್ತೆಯ ದೇಸಾಯಿ ಲಾನ್‌ನಲ್ಲಿ ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಧಿಕಾರಕ್ಕೆ ಬಂದು ಬಿಟ್ಟಿದ್ದೀವಿ ಎಂಬ ಭ್ರಮೆಯಲ್ಲಿದ್ದು, ಕ್ಯಾಬಿನೇಟ್‌ನಲ್ಲಿ ಯಾವ ಇಲಾಖೆ ಹಂಚಿಕೊಳ್ಳಬೇಕು ಎಂಬುದಾಗಿ ಪ್ರಯತ್ನ ನಡೆಸುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
Related Articles
Advertisement
ಪದವೀಧರ ಕ್ಷೇತ್ರದ ಹನುಮಂತ ನಿರಾಣಿ ಹಾಗೂ ಶಿಕ್ಷಕರ ಕ್ಷೇತ್ರದ ಅರುಣ ಶಹಾಪುರ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮುದಿ ಎತ್ತು ಎಂದ ಕಾರಜೋಳ: ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರೈತರ ಮನೆಯಲ್ಲಿ ಮುಪ್ಪಾದ ಎತ್ತುಗಳು ನೇಗಿಲು ಹೊಡೆಯಲು ಶಕ್ತಿ ಕಳೆದುಕೊಂಡಾಗ ಅವುಗಳ ಹೆಗಲು, ಮೈ ತೊಳೆದು, ಪೂಜೆ ಮಾಡಿ ಊರಿನಲ್ಲಿ ಬಿಡುತ್ತಾರೆ. ಈ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲ್ಲಿಯ ಜನ ಏನೂ ಕೆಲಸಕ್ಕೆ ಬಾರದ ಆ ಎತ್ತು (ಪ್ರಕಾಶ ಹುಕ್ಕೇರಿ) ಪೂಜೆ ಮಾಡಿ ಬಿಟ್ಟಿದ್ದಾರೆ. ಕಾಂಗ್ರೆಸ್‌ಗೆ ಬೇರೆ ಅಭ್ಯರ್ಥಿ ಸಿಗದಿದ್ದಕ್ಕೆ ಈ ಎತ್ತು ತಂದು ನಿಲ್ಲಿಸಿದ್ದಾರೆ. ಆ ಮುದಿ ಎತ್ತಿಗೆ 33 ಹೆಜ್ಜೆ ಅಷ್ಟೇ ಅಲ್ಲ, 10 ಹೆಜ್ಜೆಯೂ ನಡೆಯಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ಮಾತನಾ ಡಲೂ ಬರುವುದಿಲ್ಲ, ನಡೆಯಲೂ ಬರುವುದಿಲ್ಲ ಅಂಥ ವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಮಾತನ್ನು ನಾನು ಏಕೆ ಹೇಳುತ್ತಿದ್ದೇನೆ ಎಂಬುದು ಅರ್ಥ ಆಗಿರಬಹುದು ಅಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರನ್ನು ಟೀಕಿಸಿದರು.
ರಾಜ್ಯಸಭೆ ಮತ್ತು ವಿಧಾನ ಪರಿಷತ್‌ಗೆ ಘನತೆ, ಗೌರವ ಇದ್ದು, ಅದೊಂದು ಚಿಂತಕರ ಚಾವಡಿ. 12 ವರ್ಷಗಳ ಅವಧಿಯಲ್ಲಿ ಪರಿಷತ್‌ನಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ ಏಕೈಕ ಸದಸ್ಯ ಅರುಣ ಶಹಾಪುರ. ಜತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ನಿರಾಣಿ ಮತ್ತೆ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲಿ. ನಿರಾಣಿಗೆ ಮತ್ತೂಮ್ಮೆ ಅವಕಾಶ ನೀಡಬೇಕು ಎಂದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ ಮಾತನಾಡಿ, ಪ್ರಾಮಾಣಿಕವಾಗಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ ಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ ಮಾತನಾಡಿ, ಶಿಕ್ಷಕರ ಪರವಾಗಿ ಧ್ವನಿ ಎತ್ತುವ ಮೂಲಕ ಅಭಿವೃದ್ಧಿ ಮಾಡಿದ ಏಕೈಕ ರಾಜಕಾರಣಿ ಬಿ.ಎಸ್. ಯಡಿಯೂರಪ್ಪ. ಯಡಿಯೂರಪ್ಪ ಗುಡುಗಿದರೆ ನಡುಗುವುದು ವಿಧಾನಸೌಧ ಎಂಬ ಮಾತಿದೆ. ಈ ಬಾರಿಯೂ ಮತ್ತೂಮ್ಮೆ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು. ಪ್ರತಿಸ್ಪರ್ಧಿ ಪ್ರಕಾಶ ಹುಕ್ಕೇರಿ 33 ಹೆಜ್ಜೆ ಹಾಕಲಿ ನೋಡೋಣ ಎಂದು ವ್ಯಂಗ್ಯವಾಡಿದರು.
ಬೆಳಗಾವಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ಸಚಿವರಾದ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಅಂಗಡಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಾಸಕ ಅನಿಲ್ ಬೆನಕೆ ಇತರರಿದ್ದರು.