Advertisement
ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಂದು ಪ್ರಾಥಮಿಕ, ಪ್ರೌಢಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದರ ಬದಲಿಗೆ ಆದರ್ಶ ಶಿಕ್ಷಕ ಅಥವಾ ಉತ್ತಮ ಶಿಕ್ಷಕರ ಆದರ್ಶವನ್ನೇ ಜನಪ್ರಿಯ ಗೊಳಿಸುವ ಯೋಜನೆಯನ್ನು ಇಲಾಖೆ ಸಿದ್ಧಪಡಿಸಿದೆ. ಬಜೆಟ್‌ನಲ್ಲಿ ಇದು ಘೋಷಣೆಯಾಗುವ ಸಾಧ್ಯತೆಯಿದೆ. ಈ ಪರಿಕಲ್ಪನೆಗೆ ತಗಲಬಹುದಾದ ವೆಚ್ಚದ ಮಾಹಿತಿಯನ್ನು ಹಣಕಾಸು ಇಲಾಖೆಗೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಮೂಲಗಳು “ಉದಯವಾಣಿ’ಗೆ ಖಚಿತ ಪಡಿಸಿವೆ.
ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಅವರು ಬಯಸಿದ ಶಾಲೆಗೆ ವರ್ಗಾವಣೆ ಅವಕಾಶ ಒದಗಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಆದರ್ಶ ಶಿಕ್ಷಕರು ಅಳವಡಿಸಿಕೊಂಡಿರುವ ಹೊಸ ಉಪಕ್ರಮಗಳ ಬಗ್ಗೆ ಇತರ ಶಾಲಾ ಶಿಕ್ಷಕರಿಗೆ ತರಬೇತಿ ಸಂದರ್ಭದಲ್ಲಿ ಮಾಹಿತಿ ನೀಡುವ ಬಗ್ಗೆಯೂ ಯೋಚನೆ ನಡೆಯುತ್ತಿದೆ. ಶಿಕ್ಷಕರು ಬೋಧನೆಯಲ್ಲಿ ಉತ್ತಮರಾದರೆ ಸಾಲದು, ಆದರ್ಶವೂ ಇರಬೇಕು. ಆದರ್ಶ ಹೊಂದಿರುವ ಶಿಕ್ಷಕ ಶ್ರೇಷ್ಠ ಶಿಕ್ಷಕನಾಗಬಲ್ಲ ಎಂಬ ಸದುದ್ದೇಶದಿಂದ ಈ ಹೊಸ ಪರಿಕಲ್ಪನೆ ಯನ್ನು ಶಿಕ್ಷಣ ಇಲಾಖೆ ರೂಪಿಸಿ, ಕಾರ್ಯರೂಪಕ್ಕೆ ತರಲು ಸಿದ್ಧತೆ ಮಾಡಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆ ಮತ್ತು ಬೋಧನೆಯನ್ನು ಉನ್ನತ ಮಟ್ಟಕ್ಕೇರಿಸುವ ಪ್ರಯತ್ನ ಇದು ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
Related Articles
ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಬಂದಿರುವ ಶಿಕ್ಷಕರ ಸಹಿತವಾಗಿ ಮುಂದಿನ ದಿನಗಳಲ್ಲಿ ಗುರುತಿಸಲಾಗುವ ಆದರ್ಶ ಶಿಕ್ಷಕರ ನವೀನ ಕ್ರಮಗಳನ್ನು ಪುಸ್ತಕ ರೂಪದಲ್ಲಿ ಇಲಾಖೆಯಿಂದ ಹೊರತರಲಾಗುತ್ತದೆ. ಅದನ್ನು ಶಿಕ್ಷಕರಿಗೆ ತರಬೇತಿ ಸಂದರ್ಭದಲ್ಲಿ ನೀಡಲಾಗುತ್ತದೆ. ಆದರ್ಶ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿ ಮತ್ತು ಹೊಸ ಪ್ರಯತ್ನಗಳಿಗೆ ಉತ್ತೇಜನ ನೀಡಲಾಗುತ್ತದೆ.
Advertisement
ಮಾನದಂಡಗಳೇನು?– ಸರಳ ಬೋಧನಾ ವಿಧಾನದಲ್ಲಿ ಹೊಸ ಆವಿಷ್ಕಾರ
– ಮಕ್ಕಳಿಗೆ ಅರ್ಥವಾಗುವಂತೆ ವಿನೂತನವಾಗಿ ಶಿಕ್ಷಣ
– ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲಿ ಸೃಜನಶೀಲತೆ
– ಸಮಾಜದ ಒಳಗೊಳ್ಳುವಿಕೆ ಯೊಂದಿಗೆ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮ
– ಸ್ವತಃ ಆದರ್ಶ ಗುಣ ಹೊಂದಿದ್ದು, ವಿದ್ಯಾರ್ಥಿಗಳಲ್ಲೂ ಅದನ್ನು ರೂಪಿಸುವುದು
– ಶಿಕ್ಷಕನ ಆದರ್ಶದಿಂದ ಶಾಲೆ, ವಿದ್ಯಾರ್ಥಿಗಳಲ್ಲಿ ಆಗಿರುವ ಸಕಾರಾತ್ಮಕ ಪರಿವರ್ತನೆ ಆದರ್ಶ ಶಿಕ್ಷಕ ಪರಿಕಲ್ಪನೆ ಸಿದ್ಧವಾಗಿದೆ. ಆದರೆ ಕಾರ್ಯರೂಪಕ್ಕೆ ತರಲು ಹಣಕಾಸು ಇಲಾಖೆಯ ಅನುಮೋದನೆ ಅಗತ್ಯ. ಕಲಿಕಾ ಆದರ್ಶ ಮತ್ತು ವೈಯಕ್ತಿಕ ಆದರ್ಶ ಎರಡೂ ಶಿಕ್ಷಕರಿಗೆ ಅತಿ ಮುಖ್ಯ.
-ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ