Advertisement

ಮಹಾನ್‌ ನಾಯಕರ ಆದರ್ಶ ಪಾಲಿಸಿ: ಷಡಾಕ್ಷರಿ

11:04 AM Jul 09, 2019 | Suhan S |

ಭದ್ರಾವತಿ: ಮಹಾಪುರುಷರ ಆಶಯದಂತೆ ಎಲ್ಲರೂ ನಡೆದುಕೊಂಡು ಸಮಾಜದಲ್ಲಿ ಸಮಾನತೆಯ ಸೃಷ್ಟಿಗೆ ಯತ್ನಿಸಿ ಸಾಗುವುದರಿಂದ ಮಾತ್ರ ಅವರ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತವೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್‌ ಷಡಾಕ್ಷರಿ ತಿಳಿಸಿದರು.

Advertisement

ನಗರದ ನ್ಯೂಟೌನ್‌ ಲಯನ್ಸ್‌ ಕ್ಲಬ್‌ ಸಭಾಂಗಣದಲ್ಲಿ ಕರ್ನಾಟಕ ದಲಿತ ನೌಕರರ ಒಕ್ಕೂಟದ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರೊ.ಬಿ. ಕೃಷ್ಣಪ್ಪನವರ 81ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ದಸಂಸ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪನವರ ಹೋರಾಟಗಳು ಇಂದಿಗೂ ಮಾದರಿಯಾಗಿದ್ದು, ಅವರ ಆದರ್ಶಗಳು, ಚಿಂತನೆಗಳು, ಹೋರಾಟಗಳನ್ನು ಪುನಃ ಕಾರ್ಯರೂಪಕ್ಕೆ ಬರುವಂತಾಗಬೇಕು. ಜಾತೀಯತೆ ತೊಲಗಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರು 70ರ ದಶಕದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ರವರ ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಂಡು ಹುಟ್ಟುಹಾಕಿದ ದಲಿತ ಸಂಘರ್ಷ ಸಮಿತಿ ಇಂದು ಹುಟ್ಟು ಹಾಕುವ ಮೂಲಕ ದಲಿತರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ 70 ರ ದಶಕದಲ್ಲಿ ಹುಟ್ಟು ಹಾಕಿದ ದಸಂಸ ರಾಜ್ಯ ಮಟ್ಟದ ಸಂಘಟನೆಯನ್ನಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ಮಾತನಾಡಿ, ಗೌತಮ ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್‌. ಅಂಬೇಡ್ಕರ್‌. ಪ್ರೊ. ಬಿ. ಕೃಷ್ಣಪ್ಪನವರ ಸೇರಿದಂತೆ ಮಹಾನ್‌ ಆದರ್ಶ ವ್ಯಕ್ತಿಗಳಿಂದಾಗಿ ಎಲ್ಲರೂ ಇಂದು ನೆಮ್ಮದಿಯಾಗಿ ಬದುಕಲು ಸಾಧ್ಯ ಎಂದರು.

Advertisement

ಈ ಹಿಂದೆ ಅವರ ಪ್ರತಿಮೆಯನ್ನು ನಗರದಲ್ಲಿ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಆ ಕಾರ್ಯ ಕೈಗೂಡಲಿಲ್ಲ. ಮುಂದಿನ ದಿನಗಳಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಕುವೆಂಪು ವಿವಿ ಕುಲಪತಿ ಎಸ್‌.ಎಸ್‌.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಸಿ.ಜಯಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಶಶಿರೇಖಾ, ಡಾ. ಸ್ವಾಮಿ, ಮುನೀರ್‌ ಅಹಮ್ಮದ್‌, ರಂಗಸ್ವಾಮಿ, ರಂಗಪ್ಪ ಇವರಿಗೆ ಪ್ರೊ. ಬಿ. ಕೃಷ್ಣಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಕುಮಾರ ಕೌಶಿಕ್‌ ಪುಳೇರ, ಸೇವೆಯಿಂದ ನಿವೃತ್ತಿ ಹೊಂದಿದ ನೀಲಪ್ಪ ಭೂತಣ್ಣನವರ ಹಾಗೂ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಒಕ್ಕೂಟದ ತಾಲೂಕು ಶಾಖೆ ಅಧ್ಯಕ್ಷೆ ಎಸ್‌. ಉಮಾ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ಸೋಮಶೇಖರ್‌, ಕುವೆಂಪು ವಿವಿ ಹಣಕಾಸು ಅಧಿಕಾರಿ ಹಿರೇಮಣಿ ನಾಯ್ಕ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎನ್‌. ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್‌, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಚಿನ್ನಯ್ಯ, ಒಕ್ಕೂಟದ ಮುಖಂಡರಾದ ಎಂ. ಈಶ್ವರಪ್ಪ, ರಂಗನಾಥ್‌, ಕೆ.ಬಿ ಜುಂಜ್ಯಾನಾಯ್ಕ, ಲೋಕೇಶ್‌ ಮಾಳೇನಹಳ್ಳಿ, ಬಸವಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next