Advertisement

ಆದರ್ಶ ಬದುಕೇ ಕ್ರಿಸ್ತರ ಸಂದೇಶ ಸಾರುವ ಸಾಧನೆ

01:15 PM Oct 22, 2017 | Team Udayavani |

ಬೆಳ್ತಂಗಡಿ, ಅ. 21: ಯೇಸುಕ್ರಿಸ್ತರ ಸಂದೇಶವನ್ನು ಸಾರುವವರು ಮೊದಲು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು. ತಾನು ಅನುಭವಿಸಿದ ಕ್ರಿಸ್ತನನ್ನು ತನ್ನ ಬದುಕಿನ ಮೂಲಕ ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು, ಆದರ್ಶ ಬದುಕೇ ಕ್ರಿಸ್ತರ ಸಂದೇಶ
ಸಾರುವ ಸಾಧನವಾಗಬೇಕು ಹೊರತು ಪುಸ್ತಕದ ಭಾಷಣಗಳಲ್ಲ ಎಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಕುರಿಯನ್‌ ಜೋಸೆಫ್‌ ಹೇಳಿದರು.

Advertisement

ಅವರು ಶನಿವಾರ ಬೆಳ್ತಂಗಡಿಯ ಸಂತ ಲಾರೆನ್ಸ್‌ ಪ್ರಧಾನ ದೇವಾಲಯದ ಆವರಣದಲ್ಲಿ ನಡೆದ ಕಿರಿಯ ಕುಸುಮ ಮಿಷನ್‌ ಲೀಗ್‌ನ (ಸಿಎಂಎಲ್‌) 70ನೇ ವರ್ಷಾಚರಣೆಯ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಮುಖ್ಯ ಭಾಷಣಕಾರ ರಾಗಿ ಮಾತನಾಡಿದರು. 

ಪ್ರೀತಿಯ ಸಂದೇಶ ತಾನು ತನ್ನ ವ್ಯಕ್ತಿತ್ವವನ್ನು ಸಿಎಂಎಲ್‌ ಮೂಲಕವೇ ರೂಪಿಸಿಕೊಂಡವ ಎಂದ ಅವರು, ಈ ಸಂಘಟನೆ ಸೇವೆ, ತ್ಯಾಗ, ಪ್ರೀತಿ, ಸಹನೆಯ ಸಂದೇಶವನ್ನು ನೀಡುತ್ತಾ ತನ್ನ ಸದಸ್ಯರಲ್ಲಿ ಈ ಗುಣಗಳನ್ನು ಬೆಳೆಸುವ ಮೂಲಕ ಜಗತ್ತಿಗೆ ಸೇವೆ ಮಾಡುವ ಕಾರ್ಯವನ್ನು ಮಾಡುತ್ತಿದೆ. ಸೇವೆ ಹಾಗೂ ತ್ಯಾಗಪೂರ್ಣವಾದ ಜೀವನದ ಮೂಲಕ ಮಿಷನರಿಗಳು ಜಗತ್ತಿನಲ್ಲಿ ಯೇಸುಕ್ರಿಸ್ತರ ಪ್ರೀತಿಯ ಸಂದೇಶವನ್ನು ಸಾರುತ್ತಿವೆ ಸೇವೆ ಮಾಡುವುದು ಎಂದಿಗೂ ಮತಾಂತರಕ್ಕಾಗಿ ಅಲ್ಲ ಅದು ಗುರಿಯೂ ಅಲ್ಲ, ಉತ್ತಮ ಜೀವನ ನಡೆಸುವ ಮೂಲಕ ಇತರರಿಗೆ ಕ್ರಿಸ್ತರ ಸಂದೇಶವನ್ನು ನೀಡುವವನೇ ನೈಜ ಅರ್ಥದಲ್ಲಿ ಕ್ರೈಸ್ತನಾಗುತ್ತಾನೆ ಎಂದರು.

ತಲಶ್ಮೇರಿ ಮಹಾ ಧರ್ಮಪ್ರಾಂತದ ಆರ್ಚ್‌ ಬಿಷಪ್‌ ರೈ| ರೆ| ಜಾರ್ಜ್‌ ಞರಳಕ್ಕಾಟ್‌ ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಬಿಷಪ್‌ ರೈ| ರೆ| ಲಾರೆನ್ಸ್‌ ಮುಕ್ಕುಯಿ, ಸಂಘಟನೆಯ ಹಿರಿಯ ಸದಸ್ಯರನ್ನು ಸಮ್ಮಾನಿಸಿದರು.  

ಭದ್ರಾವತಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಜೋಸೆಫ್‌ ಅರುಮಚ್ಚಾಡತ್‌, ಮಂಡ್ಯ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ|ಆ್ಯಂಟನಿ ಕರಿಯಿಲ್‌, ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಗೀವರ್ಗೀಸ್‌ ಮಾರ್‌ಮಕ್ಕಾರಿಯೋಸ್‌ ಶುಭ ಹಾರೈಸಿದರು. 

Advertisement

ಸಿಎಂಎಲ್‌ನ ರಾಷ್ಟ್ರೀಯ ಅಧ್ಯಕ್ಷ ಬಿನೋಯಿ ಪಳ್ಳಿಪರಂಬಿಲ್‌ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಮುಖಂಡರಾದ ಡೇವಿಸ್‌ ವಾಲೂರಾನ್‌, ಫಾ| ಹ್ಯಾರಿ ಡಿ’ಸೋಜಾ, ರೋಯಿ ಮ್ಯಾಥ್ಯೂ, ಜ್ಞಾನಪ್ರಕಾಶ್‌, ಜೋರ್ಜ್‌ಕಾರಕ್ಕಲ್‌, ಫಾ| ಆ್ಯಂಟನಿ ಪುದಿಯ ಪರಂಬಿಲ್‌, ಸುಜಿ ಥಾಮಸ್‌, ಮೀರಾ ಜಾರ್ಜ್‌ ಉಪಸ್ಥಿತರಿದ್ದರು. 

ರಾಜ್ಯ ಸಿಎಂಎಲ್‌ ನಿರ್ದೇಶಕ ಫಾ| ಜೋಸೆಫ್‌ ಮಟ್ಟಂ ಸ್ವಾಗತಿಸಿ, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಸುಜಿ ಥಾಮಸ್‌ ವರದಿ ವಾಚಿಸಿದರು. ಟೈಟಸ್‌ ಮಂಪರಂಬಿಲ್‌ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಬೆಳ್ತಂಗಡಿ ಅಂಬೇಡ್ಕರ್‌ ಭವನದಿಂದ 3,000ಕ್ಕೂ ಅಧಿಕ ಮಂದಿ ಭದ್ರಾವತಿ, ಮಂಡ್ಯ, ತಲಶ್ಮೇರಿ ಹಾಗೂ ಕೊಡಗು, ದ.ಕ., ಉಡುಪಿ ಪ್ರಾಂತದ ಸಿಎಂಎಲ್‌ ಸದಸ್ಯರಿಂದ ಭವ್ಯ ರ್ಯಾಲಿ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next