Advertisement

ವಿಚಾರ ಪ್ರಚೋದಕ ದಕ್ಷಯಜ್ಞ 

06:00 AM Oct 05, 2018 | |

ಯಕ್ಷಗಾನ ಪ್ರಸಂಗ ಪ್ರದರ್ಶನವೊಂದು ಸಹೃದಯರ ಮನಸ್ಸ‌ನ್ನು ತಟ್ಟಿ, ವಿಚಾರಶೀಲರಾಗಿಸಿ, ಯಕ್ಷಗಾನದ ಮೇಲ್ಮೆ„ಯನ್ನು ಪ್ರತಿಪಾದಿಸಬಹುದು ಎಂಬುದಕ್ಕೆ ದೃಷ್ಟಾಂತವಾಗಿ ಇತ್ತೀಚೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಪಿನಕುದ್ರು ಇಲ್ಲಿ ಯಕ್ಷಸಿಂಚನ ಟ್ರಸ್ಟ್‌ ಬೆಂಗಳೂರು ಇವರು ನಡೆಸಿಕೊಟ್ಟ “ದಕ್ಷಯಜ್ಞ’ ಪ್ರಸಂಗ ಪ್ರದರ್ಶನ ಸಾಕ್ಷಿಯಾಯ್ತು. 

Advertisement

ಕೆ. ಜೆ. ಗಣೇಶ್‌, ಕೆ.ಜೆ.ಕೃಷ್ಣ, ಕೆ.ಜೆ. ಸುಧೀಂದ್ರ ಇವರ ದಕ್ಷ ಹಿಮ್ಮೇಳ ಪ್ರದರ್ಶನದ ಯಶಸ್ಸಿಗೆ ಕಸುಬುಗಾರಿಕೆಯನ್ನು ಒದಗಿಸಿ ವಿಜೃಂಭಿಸಿತು. ದೇವೇಂದ್ರನ (ಆದಿತ್ಯ ಉಡುಪ) ಪ್ರವೇಶದೊಡನೆ ಆರಂಭವಾದ ಪ್ರಸಂಗ ಉತ್ತಮ ಚಾಲನೆಯಿಂದ ಕೂಡಿತ್ತು. ಜ್ಞಾನಸತ್ರಯಾಗದ ಅಧ್ಯಕ್ಷತೆಗಾಗಿ ಈಶ್ವರನನ್ನು ವಿನಂತಿಸಲು ಹೊರಟಾಗ ಸಂಪ್ರದಾಯದ ಹೆಜ್ಜೆ, ನೃತ್ಯಗಳು ಮೂಡಿ ಬಂತು. ಈಶ್ವರನಾಗಿ (ಶಶಿರಾಜ್‌ ಸೋಮಯಾಜಿ) ಪ್ರವೇಶ ನೃತ್ಯದ ಜತೆಗೆ ತಾಂಡವ ನೃತ್ಯವನ್ನು ನಡೆಸಿ, ರಂಗದ ನಡೆ, ಬದ್ಧತೆಯನ್ನು ನಡೆಸಿಕೊಟ್ಟರು. ಸೊಗಸಾದ ಮಾತಿನಿಂದ ಈಶ್ವರನ ಪಾತ್ರದ ಎತ್ತರ-ಬಿತ್ತರವನ್ನು ಸಾಧಿಸಿದರು. ಜ್ಞಾನ ಸತ್ರಯಾಗಕ್ಕೆ ಪ್ರವೇಶವಾದ ಕಿರೀಟಧಾರಿ, ಗಡ್ಡಕಟ್ಟಿದ ದಕ್ಷ (ರವಿ ಮಡೋಡಿ) ಅಹಂಕಾರ, ದರ್ಪ ವಿಲಾಸವನ್ನು ಪ್ರವೇಶದಿಂದಲೇ ಆಹಾವಿಸಿಕೊಳ್ಳುತ್ತಾ, ನೃತ್ಯ, ಅಭಿನಯ, ರಂಗನಡೆ, ಮಾತಿನಿಂದ ಪ್ರಬುದ್ಧ ದಕ್ಷನನ್ನೆ ಕಟ್ಟಿಕೊಟ್ಟರು. ಶಿವನನ್ನು ನಿಂದಿಸುವ, ಲೇವಡಿ ಮಾಡುವ, ಆ ಐದಾರು ಪದ್ಯಗಳನ್ನು ಗಂಭೀರ ನಡೆಯಲ್ಲಿ ನಡೆಸಿ, ಅರ್ಥಗಾರಿಕೆಯಲ್ಲಿ ವಿಶೇಷ ಹೊಳಹುಗಳಿಂದ ಪುರಾಣದ ಪಾತ್ರವನ್ನು ಮೂಡಿಸಿದ ಬಗೆ ಅಭಿನಂದನೀಯವಾದುದು.

ದಾಕ್ಷಾಯಿಣಿಯಾಗಿ (ಮನೋಜ್‌ ಭಟ್‌, ಸಾಲಿಗ್ರಾಮ) ಪಾತ್ರ ಪೋಷಣೆಯಲ್ಲಿ ಕಂಡು ಬಂದ ಸಾಮರ್ಥ್ಯ ಅನುಸರಣೀಯವಾಗಿತ್ತು. ಶಿವನನ್ನು ಒತ್ತಾಯಿಸುವ ಸಂದರ್ಭ ತವರು ಮನೆಯ ಮೋಹ, ಗಂಡನ ಮಾತನ್ನು ಮೀರಲಾರದ ಸತಿಯ ತುಮುಲ, ದ್ವಂದ್ವಗಳನ್ನು ಚೆನ್ನಾಗಿ ಪ್ರಕಟಿಸಿ ಪ್ರೇಕ್ಷಕರೆ ದಾಕ್ಷಾಯಿಣಿ ಪರವಾಗಿ ನಿಲ್ಲುವಂತೆ ಸಹಜವಾದ ಅಭಿನಯ ನಡೆಸಿದರು. 

ವೃದ್ಧ ಬ್ರಾಹ್ಮಣರಾಗಿ (ಶ್ರೀಕೃಷ್ಣ ಶಾಸ್ತ್ರಿ, ಮುದೂರು) ರಂಗದ ನಡೆಯಲ್ಲಿ ಕುಣಿದು ಪ್ರಸಂಗದ ನಡೆಗೆ ಪೂರಕರಾದರು. ಕೊನೆಯ ಸನ್ನಿವೇಶದಲ್ಲಿ ದಕ್ಷ, ದಾಕ್ಷಾಯಿಣಿಯರ ಅಭಿನಯ, ಮಾತು, ರಂಗನಡೆ ಮತ್ತು ಹಿಮ್ಮೇಳದ ಪ್ರಭಾವಪೂರ್ಣವಾದ ಭಾವ ತೀವ್ರತೆಗಳಿಂದ ಉನ್ನತ ಮಟ್ಟದ ರಂಗ ಸಾಕಾರವಾಯ್ತು. ತಂಡದ ಪೂರ್ಣ ಪ್ರಯತ್ನ ಕಲಾರಾಧನೆಯೇ ಆಗಿ, ಕವಿ ಯಾವ ಆಶಯ ಚಿಂತಿಸಿ ಪ್ರಸಂಗ ರಚಿಸಿದ್ದಾನೆಯೋ ಅದಕ್ಕಿಂತಲೂ ತುಂಬಾ ಎತ್ತರದಲ್ಲಿ ಅದನ್ನು ಪ್ರತಿಪಾದಿಸಿ, ಪಾತ್ರಧಾರಿಯು ವೈಯಕ್ತಿಕ ಪ್ರತಿಭೆ ಮುಖ್ಯವಲ್ಲ, ಎಲ್ಲರ ಒಟ್ಟು ಪ್ರಯತ್ನ ಮುಖ್ಯ ಎಂದು ಅರ್ಥಪೂರ್ಣವಾಗಿ ಬಿಂಬಿಸಿದಂತಾಯ್ತು.

ಎರಡು ದೀವಟಿಗೆಯ ಮೂಲಕ ಪ್ರವೇಶ ಮಾಡಿದ ರುದ್ರನಾದ ವೀರಭದ್ರ (ಶಶಾಂಕ್‌ ಎಮ್‌. ಕಾಶಿ) ಬಣ್ಣದ ತಟ್ಟಿಯಲ್ಲಿಯೇ ಕಾಣಿಸಿಕೊಂಡು ಬಣ್ಣದ ವೇಷದ ಸೊಬಗನ್ನು ಮೆರೆಸಿದರು. ದಕ್ಷ ವಧೆಯಾದ ಬಳಿಕ ಮತ್ತೆ ಶಿವನು ಕಾಣಿಸಿಕೊಂಡು, ದಕ್ಷನನ್ನು ಮರು ಬದುಕಿಸಿ, ಆತನಿಗೆ ಆಡಿನ ತಲೆ ಜೋಡಿಸಿ, ಯಾಗ ಪೂರ್ಣಗೊಳಿಸಿ, ಉಪಸಂಹಾರದ ಮಾತುಗಳನ್ನಾಡಿ, ಕೋಪ, ರಾಗ, ದ್ವೇಷ, ಮತ್ಸರ, ಹಗೆತನಗಳು ನಾಶವನ್ನೂ, ಆಪತ್ತನ್ನೂ ತರುವುದರಿಂದ ಮುಂದೆ ಹಾಗಾಗಕೂಡದು ಎಂಬ ಸಂದೇಶವನ್ನು ಸಾರಿದರು.    

Advertisement

ಮನೋಹರ ಎಸ್‌. ಕುಂದರ್‌ 

Advertisement

Udayavani is now on Telegram. Click here to join our channel and stay updated with the latest news.

Next