ಆನೇಕಲ್: ಬೀದಿ ವ್ಯಾಪಾರಿಗಳಿಗೆ ಮಾಹಿತಿ ನೀಡದೇ ಏಕಾಏಕಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾದ್ದು, ಅದನ್ನೇ ನಂಬಿರುವ ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿವೆ. ಬೀದಿ ವ್ಯಾಪಾರಿಗಳಿಗೆ ಶೀಘ್ರ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ, ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಬೀದಿ ವ್ಯಾಪಾರಿಗಳು, ಸಾಮಾಜಿಕ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಡಿವೈಎಸ್‌ಪಿ ನೇತೃತ್ವದಲ್ಲಿ ಸಮನ್ವಯ ಸಭೆ: ಈ ಸಂಬಂಧ ಭಾನುವಾರ ಡಿವೈಎಸ್‌ಪಿ ನಂಜುಂಡೇಗೌಡರ ನೇತೃತ್ವದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬೀದಿ ಬದಿಯಲ್ಲಿದ್ದ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿರುವುದಕ್ಕೆ ಸಂಬಂಧಿಸಿ ಹೆಬ್ಬಗೋಡಿ ಪೊಲೀಸ ಠಾಣೆಯಲ್ಲಿ ಸಮನ್ವಯ ಸಭೆ ನಡೆಯಿತು. ಸಭೆಯಲ್ಲಿ ಬೀದಿ ವ್ಯಾಪಾರಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಬಿಐಎ ಆಡಳಿತ ಮಂಡಳಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಹೋರಾಟದ ಎಚ್ಚರಿಕೆ: ಸಾಮಾಜಿಕ ಕಾರ್ಯಕರ್ತೆ ತಿರುಪಾಳ್ಯ ನಾಗರತ್ನಮ್ಮ ಮಾತನಾಡಿ, ಬೀದಿ ವ್ಯಾಪಾರಿಗಳಿಗೆ ಮಾಹಿತಿ ನೀಡದೇ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಸಂಘವು ಏಕಾಏಕಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿರುವುದು ಖಂಡನೀಯ. ಬಿಐಎ ಸಂಸ್ಥೆಯು ಬೀದಿ ವ್ಯಾಪಾರಿಗಳಿಗೆ ಒಂದೆರಡು ತಿಂಗಳಲ್ಲಿ ನ್ಯಾಯ ಕಲ್ಪಿಸದೆ ಹೋದಲ್ಲಿ ಬಿಐಎ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಅರ್ಹರಿಗೆ ಶೀಘ್ರ ವ್ಯವಸ್ಥೆ: ಬಿಐಎ ಅಧ್ಯಕ್ಷ ಎ.ಪ್ರಸಾದ್ ಮಾತನಾಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಉತ್ತಮ ಪರಿಸರ ನಿರ್ಮಾಣ ಹಾಗೂ ಕಾರ್ಮಿಕರಿಗೆ ಗುಣಮಟ್ಟದ ಆಹಾರ ಸಿಗುವಂತೆ ಮಾಡುವುದಕ್ಕಾಗಿ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. ಆದರೆ ಬೀದಿ ವ್ಯಾಪಾರಿಗಳನ್ನು ವಕ್ಕಲೆಬ್ಬಿಸುವ ಉದ್ದೇಶವಿಲ್ಲ.
ಶೀಘ್ರದಲ್ಲೇ ಅರ್ಹ ಫಲಾನುಭವಿಗಳನ್ನು ಸಂಘದಿಂದ ಗುರುತಿಸಿ, ಅವರಿಗೆ ಬೊಮ್ಮಸಂದ್ರ ಕೈಗಾರಿಕೆ ಪ್ರದೇಶದ ಸಂಘದ ವತಿಯಿಂದ ಉಚಿತ ಮತ್ತು ನೂತನ ಸುಧಾರಿತ ಪೆಟ್ಟಿಗೆಗಳನ್ನು ನೀಡಲಾಗುವುದು. ಇದರಲ್ಲಿ ಅನುಮಾನ ಬೇಡ. ಅಲ್ಲಿಯವರೆಗೂ ಎಲ್ಲರೂ ಕಾಯಬೇಕು ಎಂದು ಹೇಳಿದರು.
ಮಾತಿನ ಚಕಮಕಿ: ಕರ್ನಾಟಕ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬೊಮ್ಮಸಂದ್ರ ನಟರಾಜ್ ಮತ್ತು ಸಾಮಾಜಿಕ ಕಾರ್ಯಕರ್ತೆ ತಿರುಪಾಳ್ಯ ನಾಗರತ್ನಮ್ಮ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಇಬ್ಬರನ್ನು ಸಮಾಧಾನ ಪಡಿಸಿದರು.
ಡಿವೈಎಸ್‌ಪಿ ನಂಜುಂಡೇಗೌಡರು, ಹೆಬ್ಬಗೋಡಿ ಪೋಲಿಸ್ ಠಾಣೆ ವೃತ್ತ ನಿರೀಕ್ಷಕ ಜಗದೀಶ್, ಡಿಎಸ್‌ಎಸ್ ಮುಖಂಡರಾದ ಗೂಳಿಮಂಗಲ ನಾಗಪ್ಪ, ಎಚ್.ಎಂ. ವೆಂಕಟೇಶ್ ಮತ್ತು ಬೀದಿ ವ್ಯಾಪಾರಿಗಳು ಹಾಜರಿದ್ದರು.