ವೃದ್ಧ ಗೃಹಸ್ಥನೊಬ್ಬ ಹತ್ತು ತಲೆಮಾರಿನವರೆಗೂ ಆಗಿ ಮಿಗುವಷ್ಟು ಆಸ್ತಿಯನ್ನು ಸಂಪಾದಿಸಿದ್ದ. ಒಂದು ದಿನ ಅವನಿಗೆ- “ಅಯ್ಯೋ, ಇಷ್ಟು ದಿನ ನನ್ನವರಿಗಾಗಿ ಕಷ್ಟಪಟ್ಟು ಆಸ್ತಿಯನ್ನೇನೋ ಗಳಿಸಿದೆ. ಆದರೆ ನನ್ನ ಪರಲೋಕಕ್ಕೆ ಯಾವ ಪುಣ್ಯಸಂಪಾದನೆ ಯನ್ನೂ ಮಾಡದೇ ವ್ಯರ್ಥಮಾಡಿಕೊಂಡೆ ನಲ್ಲ’ ಎನಿಸಿತು. ಅವತ್ತು ರಾತ್ರಿ ಮಲಗುವಾಗ ತನ್ನ ಮಗನನ್ನು ಕರೆದು- ಜಾತಸ್ಯ ಮರಣಂ ಧ್ರುವಂ ಎನ್ನುತ್ತಾರೆ.
ಹುಟ್ಟಿದವರಿಗೆ ಮರಣ ನಿಶ್ಚಯ. ಮುಂದಿನ ಜನ್ಮದಲ್ಲಿ ನಾನು ಹಂದಿಯಾಗಿ ಹುಟ್ಟಿ ನಿನ್ನೆದುರು ಬರುತ್ತೇನೆ. ನೀನು ಏನೂ ಸಂಕೋಚಪಟ್ಟುಕೊಳ್ಳದೇ ನನ್ನನ್ನು ಕೊಂದು ಬಿಡು. ಅದರ ನಂತರ ನನಗೆ ಪುನಃ ಮನುಷ್ಯ ಜನ್ಮ ಬರುತ್ತದೆ. ಆಗ ಸಾಧನೆ ಮಾಡಿ ಭಗವಂತನನ್ನು ಸೇರುತ್ತೇನೆ’ ಎಂದು ಹೇಳಿದ. ಅದೇ ರಾತ್ರಿ ವೃದ್ಧ ಚಿರನಿದ್ರೆಗೆ ಜಾರಿದ. ಹೀಗೇ ವರುಷಗಳು ಉರುಳಿದವು. ಒಮ್ಮೆ ಆ ಗೃಹಸ್ಥನ ಮಗನ ಮನೆಯ ಹಿತ್ತಲಲ್ಲಿ ಹಂದಿಗಳ ಹಿಂಡು ಪರಿವಾರ ಸಮೇತ ಕಂಡು ಬಂತು.
ಕೂಡಲೇ ಗೃಹಸ್ಥನ ಮಗನಿಗೆ ತಂದೆಯ ಮಾತು ಜ್ಞಾಪಕಕ್ಕೆ ಬಂತು. ತನ್ನ ಬಂದೂಕಿನಿಂದ ಗುಂಡುಹಾರಿಸಲು ಉದ್ಯುಕ್ತ ನಾದ. ಆಗ ಹಂದಿಯು- “ನಿಲ್ಲು, ನನ್ನನ್ನು ಕೊಲ್ಲಬೇಡ. ನಾನು ನಿನಗೆ ಹಿಂದೇನೋ ಹೇಳಿರಬಹುದು. ಆದರೆ ಈಗ ಈ ಹಂದಿ ಜನ್ಮದಲ್ಲಿ ನನ್ನ ಹೆಂಡತಿ ಮಕ್ಕಳೊಡನೆ ಅತ್ಯಂತ ಸಂತೋಷವಾಗಿ ದ್ದೇನೆ’ ಎಂದಿತು. ಆದರೆ ಗೃಹಸ್ಥನ ಮಗನು, ತನ್ನ ತಂದೆಯು ಪ್ರಾಜ್ಞನಾಗಿ ಮಾನವ ಜನ್ಮದಲ್ಲಿ ಹೇಳಿದ ಆಜ್ಞೆಯೇ ಅನುಕರಣೀಯ ಎಂದು ಯೋಚಿಸಿ, ಆ ಹಂದಿಯನ್ನು ವಧಿಸಿದ. ಉಳಿದೆಲ್ಲವೂ ಆ ಗೃಹಸ್ಥನು ಬಯಸಿ ದಂತೆಯೇ ಆಯಿತು. ಮಾನವ ದೇಹ ಸೃಷ್ಟಿಯ ಅತ್ಯದ್ಭುತ ವಾದ ಯಂತ್ರ.
ಈ ದೇಹದಲ್ಲಿ ಮಾತ್ರ ಪರ ಮಾ ತ್ಮನನ್ನು ಸಾಕ್ಷಾತ್ಕರಿಸಿಕೊಂಡು ಪುರುಷಾರ್ಥಮಯವಾದ ಬಾಳಾಟವನ್ನು ಮಾಡು ವುದಕ್ಕೆ ಸಾಧ್ಯ. ಚತುರ್ದಶ ಭುವನಗಳನ್ನು ಕೊಟ್ಟರೂ, ಅವು ಈ ಮಾನವ ದೇಹಕ್ಕೆ ಸಮಾನವಲ್ಲ ಎಂಬ ಶ್ರೀರಂಗ ಮಹಾಗುರು ಗಳ ಮಾತು ಇಲ್ಲಿ ಸ್ಮರ ಣೀಯ. ಮಹತ್ತಾದ ಪುಣ್ಯವೆಂಬ ಹಣವನ್ನು ಕೊಟ್ಟು ಈ ಮಾನವ ದೇಹವನ್ನು ಪಡೆದಿದ್ದೀಯ. ಈ ನೌಕೆ ಮುರಿಯುವ ಮುನ್ನವೇ ಮೋಕ್ಷದ ದಡ ಸೇರಿಕೋ ಎಂಬ ಋಷಿವಾಣಿಯೂ, ಇದನ್ನೇ ಸಾರುತ್ತದೆ.
* ರತ್ನಾಸುರೇಶ, ಸಂಸ್ಕೃತಿ ಚಿಂತಕಿ