ಬೆಂಗಳೂರು: ಈ ಹಿಂದೆ ಕೆಲವರು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದರು. ಆದರೆ ಈಗ ಪಕ್ಷಾಂತರಕ್ಕೆ ನಿರೇರೆಯುತ್ತಾ ವಿರೋಧ ಪಕ್ಷ ಮುಕ್ತ ಭಾರತ ಮಾಡಲು ಹೊರಟಿದ್ದಾರೆ. ಅವರಿಗೆ ಈ ದೇಶದಲ್ಲಿ ಪ್ರಬಲ ವಿರೋಧ ಪಕ್ಷ ಬೇಕಾಗಿಲ್ಲ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಬಿಜೆಪಿ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.
ಅಖೀಲ ಭಾರತ ವಕೀಲರ ಸಂಘ, ಶುಕ್ರವಾರ ಅಲೂಮ್ನಿ ಯುವಿಇಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಶಾಸಕರ ರಾಜೀನಾಮೆ ಹಕ್ಕು ಮತ್ತು ಪಕ್ಷಾಂತರ ನಿಷೇಧ ಕಾಯ್ದೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಪಕ್ಷಾಂತರ ಕಾಯಿಲೆ ಗೋವಾ, ಕರ್ನಾಟಕದ ನಂತರ ಇದೀಗ ಸೂಕ್ಷ್ಮರಾಜ್ಯ ಎನಿಸಿಕೊಂಡಿರುವ ಸಿಕ್ಕಿಂಗೂ ವ್ಯಾಪಿಸಿದೆ ಎಂದರು.
ಒಂದು ಸರ್ಕಾರ ಉರುಳಿಸಿ ಮತ್ತೂಂದು ಸರ್ಕಾರ ರಚಿಸಲು ಅನುಕೂಲ ಮಾಡಿಕೊಟ್ಟವರು ಸಚಿವ ಮತ್ತು ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಆಸೆಯಿಂದಲೇ ಪಕ್ಷಾಂತರಗೊಂಡಿದ್ದಾರೆ. ಬಿಜೆಪಿ ಕೂಡ ಇದು ಅಪರೇಷನ್ ಕಮಲ ಅಲ್ಲ ಎಂದು ನಾಟಕವಾಡುತ್ತಿದ್ದು, ಸಂವಿಧಾನದ ಉಳಿವಿಗಾಗಿ ಜನ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಪಕ್ಷಾಂತರ ನಿಷೇಧ ಅಸಾಧ್ಯ: ಪಕ್ಷಾಂತರ ನಿಷೇಧದ ಬಗ್ಗೆ ಎಷ್ಟೇ ಕಾನೂನು ರೂಪಿಸಿದರೂ ಅದನ್ನು ತಡೆಗಟ್ಟುವುದು ಅಸಾಧ್ಯ. ದೇಶದ ಕಾನೂನಿಗೆ ಗೌರವ ಕೊಡದವರು ಕಾನೂನಿನ ಮೂಲಕವೇ ರಕ್ಷಣೆ ಪಡೆಯುತ್ತಾರೆ. ಹೀಗಾದರೆ ಕಾನೂನುಗಳು ಇದ್ದರೂ ಏನು ಪ್ರಯೋಜನವಾಗದು. ಜನರು ಪಕ್ಷಾಂತರಿಗಳಿಗೆ ಉತ್ತರ ನೀಡಬೇಕಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಈ ಹಿಂದೆ ದೇಶದಲ್ಲಿ ಘೋಷಿತ ತುರ್ತು ಪರಿಸ್ಥಿತಿಯಿತ್ತು. ಆದರೆ ಇಂದು ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರಚನೆಯಾಗಿ ಮೂರು ವಾರಗಳಾದರೂ ಇನ್ನೂ ಕೂಡ ಸಚಿವ ಸಂಪುಟ ರಚನೆಯಾಗಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಮಾತನಾಡಿ, ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಶಾಂತವೇರಿ ಗೋಪಾಲ ಗೌಡರು ಆಳುವ ಸರ್ಕಾರವನ್ನೇ ನಡುಗಿಸಿದ್ದರು. ಕೇವಲ 15 ಶಾಸಕರಿದ್ದರೂ ಎಲ್ಲರೂ ಒಂದು ತತ್ವ, ಸಿದ್ಧಾಂತಕ್ಕೆ ಅಂಟಿಕೊಂಡಿದ್ದರು. ಆದರೆ ಈಗಿನ ಪರಿಸ್ಥಿತಿ ಬೇರೆಯಾಗಿದೆ. ತತ್ವಸಿದ್ಧಾಂತಕ್ಕೆ ಎಳ್ಳು ನೀರು ಬಿಡಲಾಗಿದ್ದು, ಚುನಾವಣೆ ವ್ಯವಸ್ಥೆ ಕೂಡ ಅಡ್ಡ ದಾರಿ ಹಿಡಿದಿದೆ ಎಂದರು.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಪಕ್ಷಾಂತರ ಕಾಯಿಲೆ ರಾಷ್ಟ್ರವ್ಯಾಪಿ ಹರಡುತ್ತಿದ್ದು, ಈ ಸಂಬಂಧ ಕಠಿಣ ಕಾನೂನು ಅಗತ್ಯವಿದೆ ಎಂದರು. ಅಖೀಲ ಭಾರತ ವಕೀಲರ ಸಂಘದ ಅಧ್ಯಕ್ಷ ಹರೀಂದ್ರ, ಶಿವಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.