Advertisement

ಸದನ ಜನಪರ ಚರ್ಚೆಗಳ ವೇದಿಕೆಯಾಗಲಿದೆ

12:19 AM Nov 18, 2019 | mahesh |

ಬೆಂಗಳೂರು: ಸದನವನ್ನು ಜನಪರ ಚರ್ಚೆಗಳ ವೇದಿಕೆಯನ್ನಾಗಿಸುತ್ತೇನೆ ಎಂದು ಸ್ವೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಅಖೀಲ ಭಾರತ ಹವ್ಯಕ ಮಹಾಸಭಾ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

Advertisement

ಹಲವು ವಿಚಾರಗಳಲ್ಲಿ ಕರ್ನಾಟಕ ದೇಶದ ಮನೆ ಮಾತಾಗಿದೆ. ವಚನಕಾರ ಬಸವಣ್ಣ ಅವರು ಕಟ್ಟಿದ ಅನುಭವ ಮಂಟಪ ವಿಭಿನ್ನ ಆಡಳಿತಕ್ಕೆ ಮುನ್ನುಡಿ ಬರೆಯಿತು. ಅದೇ ರೀತಿ ಕರ್ನಾಟಕ ವಿಧಾನ ಸಭೆಯನ್ನು ಅನುಭವ ಮಂಟಪ ಮಾಡುತ್ತೇನೆ ಎಂದು ತಿಳಿಸಿದರು.

ಈಗಾಗಲೇ ನಾನು ಶಿಕ್ಷಣ ಸಚಿವ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಇದೀಗ ಪಕ್ಷ ಸ್ವೀಕರ್‌ ಜವಾಬ್ದಾರಿ ನೀಡಿದೆ. ಇದು ಕೂಡ ಅತ್ಯಂತ ದೊಡ್ಡ ಜವಾಬ್ದಾರಿಯಾಗಿದ್ದು, ಸ್ಪೀಕರ್‌ ಹುದ್ದೆಗೆ ಯಾವುದೇ ರೀತಿಯ ಕಳಂಕ ಬಾರದ ಹಾಗೆ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.

ಸದನವನ್ನು ಜನಪರ ವೇದಿಕೆಯನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೇ ಸಲಹೆಗಳನ್ನು ಕೇಳಿದ್ದೇನೆ. ಸಾರ್ವಜನಿಕರು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರೆ. ಅವುಗಳಿಗೆ ಮನ್ನಣೆ ನೀಡಿ ಆಡಳಿತದಲ್ಲಿ ಅಳಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಅಖೀಲ ಭಾರತ ಹವ್ಯಕ ಮಹಾಸಭಾ, ಹವ್ಯಕರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ.

ಈಗಾಗಲೇ ಉತ್ತಮ ಕಾರ್ಯ ಕ್ರಮಗಳನ್ನು ರೂಪಿಸಿ ತಾನು ಎಲ್ಲಾ ಸಮುದಾಯಗಳ ವೇದಿಕೆಗಳಿಗಿಂತ ವಿಭಿನ್ನ ಎಂಬುದನ್ನು ತೋರ್ಪಡಿಸಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾದರಿ ಆಗುವಂತಹ ಮತ್ತಷ್ಟು ಯೋಜನೆಗಳನ್ನು ರೂಪಿಸಲಿ ಎಂದು ಆಶಿಸಿದರು.

Advertisement

ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ, ಲೆಫ್ಟಿನೆಂಟ್‌ ಜನರಲ್‌ ಡಾ.ಬಿ.ಎನ್‌.ಬಿ.ಎಂ.ಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ 25 ಹವ್ಯಕ ವೇದಿಕೆಗಳ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಲಾಯಿತು. ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ, ಉಪಾಧ್ಯಕ್ಷ ಶ್ರೀಧರ್‌ ಭಟ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸದನದ ಬಾವಿ ಮುಚ್ಚಿಬಿಡಿ!: ನಾನು ಊರಿನಲ್ಲಿದ್ದಾಗ (ಶಿರಸಿ)ಆಡಳಿತ ನಡೆಸುವ ಬಗ್ಗೆ ಕೆಲವರ ಸಲಹೆ ಕೇಳಿದ್ದೆ. ಸುಮಾರು ಎಪ್ಪತ್ತು ಜನರು ಮನೆಗೆ ಬಂದಿದ್ದರು. ಆದರಲ್ಲಿ ಒಬ್ಬ ” ಸರ್‌, ನೀವು ಸ್ಪೀಕರ್‌ ಆಗಿದ್ದೀರಿ. ಮೊದಲು ಆ ಸದನದ ಬಾವಿ ಮುಚ್ಚಿಬಿಡಿ’ ಎಂದು ಸಲಹೆ ನೀಡಿದ್ದ ಎಂದು ಹೇಳಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಆತ ಹೇಳಿದ ಮಾತಿನಲ್ಲಿ ಹಾಸ್ಯದ ಜತೆಗೆ ಅರ್ಥವೂ ಇತ್ತು. ಪದೇ ಪದೆ ವಿರೋಧ ಪಕ್ಷದವರು ಸದನದ ಬಾವಿಗಿಳಿದು ಧರಣಿ ಮಾಡುತ್ತಾರೆ. ಹಾಗಾಗಿಯೇ ಜನಪರ ಚರ್ಚೆಗಳು ನಡೆಯುವುದಿಲ್ಲ. ಆ ಕಾರಣಕ್ಕಾಗಿಯೇ ಆತ ಹಾಗೆ ಹೇಳಿದ್ದ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next