ಪುಂಜಾಲಕಟ್ಟೆ: ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದ ಉಪ್ಪಿರದ ಕೂಲಿ ಕಾರ್ಮಿಕರಾದ ಮೋನಮ್ಮ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸಂಪೂರ್ಣ ಭಸ್ಮವಾದ ಘಟನೆ ಶುಕ್ರವಾರ ಸಂಭವಿಸಿದೆ.
ಮೋನಮ್ಮ ಅವರ ಪತಿ ತೀರಿಕೊಂಡಿದ್ದು ಉಪ್ಪಿರದಲ್ಲಿ ಶೀಟ್ ಅಳವಡಿಸಿದ ಚಿಕ್ಕ ಗುಡಿಸಲಿನಲ್ಲಿ ಇಬ್ಬರು ಹೆಣ್ಣು ಮಕ್ಕಳ ಜತೆ ವಾಸವಾಗಿದ್ದರು. ಶುಕ್ರವಾರ ಸಂಜೆ ಸ್ಥಳೀಯ ಪೂಂಜ ದೇವಸ್ಥಾನದಲ್ಲಿ ನಡೆಯುತ್ತಿದ್ದ ವಾರ್ಷಿಕ ಜಾತ್ರೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸ್ಥಳೀಯರು ಗಮನಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಅದಾಗಲೇ ಬಟ್ಟೆ ಬರೆ, ದವಸ ಧಾನ್ಯ, ಪಾತ್ರೆ, ಹೊಲಿಗೆ ಯಂತ್ರ, ಸ್ವಲ್ಪ ಹಣ ಎಲ್ಲವೂ ಸುಟ್ಟು ಕರಕಲಾಗಿವೆ.
ಮೋನಮ್ಮ ಬಡ ಕುಟುಂಬದ ಮಹಿಳೆಯಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಇಬ್ಬರು ಪುತ್ರಿಯರಲ್ಲಿ ಓರ್ವಳು ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಇನ್ನೊಬ್ಬಳು ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ. ಕಾಲೇಜು ವಿದ್ಯಾರ್ಥಿನಿಯ ಪರೀಕ್ಷೆಯ ಪ್ರವೇಶ ಪತ್ರ ಕೂಡ ಬೆಂಕಿಗೆ ಭಸ್ಮವಾಗಿದೆ ಎಂದು ತಿಳಿಸಿದ್ದಾರೆ.
ಉಟ್ಟ ಬಟ್ಟೆಯಷ್ಟೇ ಬಾಕಿ: ಘಟನೆಯಿಂದ ಮೋನಮ್ಮ ಅವರ ಕುಟುಂಬ ಕಂಗಲಾಗಿದೆ. ಉಟ್ಟ ಬಟ್ಟೆಯಟ್ಟೇ ಉಳಿದಿದ್ದು, ತಾತ್ಕಾಲಿಕವಾಗಿ ಸಮೀಪದ ಮನೆಯೊಂದರಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಸದಸ್ಯರಾದ ಯೋಗೀಶ್ ಆಚಾರ್ಯ, ಶೋಭಾ, ಪಿಡಿಒ ಪದ್ಮಾ ನಾಯ್ಕ, ಗ್ರಾಮಕರಣಿಕ ಪ್ರಕಾಶ್ ಅವರು ಭೇಟಿ ನೀಡಿದ್ದಾರೆ.