ಬೆಂಗಳೂರು: ಒಂದೇ ತಿಂಗಳಲ್ಲಿ ಎಂಟು ಮನೆಗಳಲ್ಲಿ ದರೋಡೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಕುಖ್ಯಾತ ಮನೆಕಳ್ಳ ಮಂಜುನಾಥ ಅಲಿಯಾಸ್ ಕಲ್ಕೆರೆ ಮಂಜ (33) ನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಜನ ಬಂಧನದಿಂದ ಶಿರಸಿ ನಗರ ಠಾಣೆಯ ಒಂದು, ತಿಪಟೂರು ನಗರ ಠಾಣೆಯ ನಾಲ್ಕು, ವಿದ್ಯಾರಣ್ಯಪುರ ಠಾಣೆಯ ಎರಡು, ತುಮಕೂರಿನ ಜಯನಗರ ಠಾಣೆಯ ಒಂದು ಮನೆಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಮನೆಕಳ್ಳತನ ಪ್ರಕರಣಗಳಲ್ಲಿ ನಗರ ಪೊಲೀಸರು ಗುರುತಿಸಿರುವ ಮೋಸ್ಟ್ ವಾಂಟೆಂಡ್ ಆರೋಪಿಯಾಗಿರುವ ಮಂಜ, ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. 2008ರಲ್ಲಿ ರಾಮಮೂರ್ತಿನಗರ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಬಳಿಕ, 2017ರ ನವೆಂಬರ್‌ನಲ್ಲಿ ಭಾರತಿನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮಂಜ, ಮತ್ತೆ ಮನೆಕಳವು ಮುಂದುವರಿಸಿದ್ದ. ಅಕ್ಟೋಬರ್ ತಿಂಗಳಲ್ಲಿ ಶಿರಸಿ, ತುಮಕೂರು, ಬೆಂಗಳೂರಿನಲ್ಲಿ ಆತ ನಡೆಸಿರುವ 8 ಪ್ರಕರಣಗಳು ಇದೀಗ ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕಾರಲ್ಲಿ ಸುತ್ತಾಟ, ಐಶಾರಾಮಿ ಜೀವನ: ಉತ್ತರಹಳ್ಳಿ ನಿವಾಸಿ ಮಂಜ ಹಲವು ವರ್ಷಗಳಿಂದ ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದಾನೆ. ಐಶಾರಾಮಿ ಜೀವನ ಶೈಲಿಗೆ ಒಗ್ಗಿಕೊಂಡಿರುವ ಈತ ಹಗಲು ಕಾರಿನಲ್ಲಿ ನಗರ, ಇನ್ನಿತರೆ ಭಾಗಗಳಲ್ಲಿ ಸುತ್ತಾಡಿ, ಬೀಗ ಹಾಕಿದ ಒಂಟಿ ಮನೆಗಳನ್ನು ಗುರುತಿಸಿ, ರಾತ್ರಿ ಕಳವು ಮಾಡುತ್ತಿದ್ದ.
ಕದ್ದ ಆಭರಣಗಳನ್ನು ಮಾರಿದ ಹಣದಲ್ಲಿ ಅಂತಾರಾಜ್ಯ ಪ್ರವಾಸ, ಐಶಾರಾಮಿ ಜೀವನ ನಡೆಸುತ್ತಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ರಾಜ್ಯ ಮಾತ್ರವಲ್ಲದೆ ಪೂನ, ಚೆನೈ ಸೇರಿದಂತೆ ಹಲವು ಭಾಗಗಳಲ್ಲೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.