Advertisement

ಮನೆ ಎಂಬ ಬಾಹುಬಲಿ

06:00 AM Sep 24, 2018 | |

ನಮಗೆಲ್ಲ ತಿಳಿದಿರುವಂತೆ, ಪಿರಮಿಡ್‌ ಅತಿ ಸದೃಢ ಆಕಾರಗಳಲ್ಲಿ ಒಂದು. ಮೆಟ್ಟಿಲಿನ ಹಲಗೆ ಒಂದು ಕಡೆ ನೆಲದಲ್ಲಿ ಹಾಗೂ ಮತ್ತೂಂದು ಗೋಡೆಯ ಮೇಲೆ ಇರುವುದರಿಂದ, ಮಧ್ಯೆ ಒಂದು ತ್ರಿಕೋನ ಪ್ರದೇಶ ನಿರ್ಮಾಣ ಆಗುತ್ತದೆ. ಇದು ಕುಸಿದು ಬೀಳುವ ಸಾಧ್ಯತೆ ತೀರ ಕಡಿಮೆ. ಹಾಗಾಗಿ, ತುರ್ತು ಪರಿಸ್ಥಿತಿಯಲ್ಲಿ, ಇಲ್ಲಿ ಆಶ್ರಯ ಪಡೆಯಬಹುದು. 

Advertisement

“ತೊಲೆ ಕೆಳಗೆ ಮಲಗಬಾರದು’ ಎಂದು ಹಿರಿಯರು ಹೇಳುತ್ತಿದ್ದರು. ಈಗಲೂ ಹೇಳುತ್ತಿದ್ದಾರೆ.   ಅತಿ ಭಾರ ಹೊರುವ ಭಾಗದ ಕೆಳಗೆ ಮಲಗಲು ಮಾನಸಿಕವಾಗಿ ಸ್ವಲ್ಪ ಕಸಿವಿಸಿ ಆಗುತ್ತಿದ್ದಿರಬಹುದು.  ಜೊತೆಗೆ ಅದೇನಾದರೂ ಕೆಳಗೆ ಬಿದ್ದರೆ? ಎಂಬ ಆತಂಕ ಮನೆಮಾಡಿರುವುದೂ ಈ ರೀತಿಯ ಮಾತಿಗೆ ಮೂಲವಾಗಿರಬಹುದು. ಗಟ್ಟಿಮುಟ್ಟಾಗಿರ ಬೇಕು, ನೂರುಕಾಲ ಉಳಿಯಬೇಕು ಎಂಬ ಲೆಕ್ಕಾಚಾರದೊಂದಿಗೇ ಎಲ್ಲರೂ ಮನೆ ಕಟ್ಟಿರುತ್ತಾರೆ.

ಈಗ ನಾವು ಕಟ್ಟುವ ಆರ್‌ ಸಿ ಸಿ ಬೀಮುಗಳು ಅತಿಯಾಗಿಯೇ ಸದೃಢವಾಗಿದ್ದು, ಕೆಳಗೆ ಬೀಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಆ ಕಾಲದಲ್ಲಿ ತೊಲೆಗಳು ಬಹುತೇಕ ಮರ ಇಲ್ಲವೇ ಕಲ್ಲಿನದವಾಗಿರುತ್ತಿದ್ದವು. ಮರಕ್ಕೆ ಗೆದ್ದಲು ತಿನ್ನುವ ಭಯವಿತ್ತು. ಕಾಣುವ ಭಾಗ ಭಾರ ಹೊರುವ ಸಾಮರ್ಥಯ ಹೊಂದಿದ್ದರೂ ಮಣ್ಣಿನ ಗೋಡೆಯ ಮೇಲೆ ಅದು ಇರುತ್ತಿದ್ದದ್ದರಿಂದ, ಒಳಗೊಳಗೇ ತಿಂದುಹೋಗಿದ್ದರೆ?

ಯಾವಾಗ ಬೀಳುತ್ತದೋ ಎಂದು ಹೇಳಲು ಆಗುತ್ತಿರಲಿಲ್ಲ. ಇನ್ನು ಕಲ್ಲಿನ ತೊಲೆಗಳ ವಿಚಾರಕ್ಕೆ ಬಂದರೆ, ಅವು ನೇರ ಭಾರ -ಕಂಪ್ರಷನ್‌ ಪ್ರಷರ್‌ ಹೊರುವಲ್ಲಿ ಏನೂ ಸಂಶಯವಿರದಿದ್ದರೂ ಅಡ್ಡಡ್ಡ ಕೂರಿಸಿದಾಗ,ಅವುಗಳ ಕೆಳಪದರ ಎಳೆತಕ್ಕೆ ಅಂದರೆ ಟೆನ್‌ಷನ್‌ ಪ್ರಷರ್‌ಗೆ ಒಳಗಾದರೆ, ಕಲ್ಲಿನಲ್ಲಿ ಒಂದೆರಡು ಪದರ “ಕಾಗೇ ಬಂಗಾರ’ ದಂತೆ ಮಿಂಚುವ ಕರಿ ಪುಡಿ ಬಂದು ದುರ್ಬಲ ಆಗಿದ್ದರೂ, ಇಂಥ ಕಲ್ಲುಗಳು ಹೆಚ್ಚು ಭಾರವನ್ನು  ಹೊರುತ್ತಿರಲಿಲ್ಲ.

ಹಾಗಾಗಿ, ಕೆಲವೊಮ್ಮೆ ದಿಢೀರ್‌ ಎಂದು ಕಲ್ಲಿನ ತೊಲೆಗಳು ಕುಸಿದು ಬೀಳುತ್ತಿದ್ದದ್ದೂ ಉಂಟು. ಹಾಗಾಗಿ ಕಾಲಾಂತರದಲ್ಲಿ ಜನರಿಗೆ ತೊಲೆಗಳು ಅಂದರೆ ಅದರಲ್ಲೂ ಮಲಗಿದ್ದಾಗ, ಯಾವುದೇ ಎಚ್ಚರಿಕೆಯ ಸದ್ದು ನೀಡದೆ ಕುಸಿದರೆ? ಎಂಬ ಭಯ ಸಹಜವಾಗೇ ಇತ್ತು.

Advertisement

ಮನೆಯ ಬಲಭೀಮ ಭಾಗಗಳು ಯಾವುವು?: ಪ್ರವಾಹಕ್ಕಾಗಲಿ, ಭೂಕಂಪ ಆದಾಗ ಆಗಲಿ ಮನೆಗಳು ಬಿದ್ದು ಹೋದಾಗ ನಾವು ಕೆಲವೊಂದು ಅಂಶಗಳನ್ನು ಗಮನಿಸ ಬೇಕು. ಹಲವು ಸಂದರ್ಭಗಳಲ್ಲಿ ಮನೆಯೊಂದರ ಸೂರು ನೆಲಕಚ್ಚಿದ್ದರೂ ಮನೆಯ ಕೆಲವೊಂದು ಭಾಗ ಹಾಗೆಯೇ ಉಳಿದಿರುತ್ತದೆ. ಇಂಥ ವಿಕೋಪದ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಂಡವರು ಮನೆಯ ಧ್ವಂಸವಾಗದ ಭಾಗಗಳಲ್ಲೇ ಇದ್ದು ಜೀವ ಉಳಿಸಿಕೊಂಡಿರುತ್ತಾರೆ. ನಮ್ಮಲ್ಲಿ ಪ್ರಕೃತಿ ವಿಕೋಪಗಳು ಆಗುವುದು ಹತ್ತಾರು ವರ್ಷಗಳಿಗೆ ಒಮ್ಮೆ.

ತೀರಾ ಧ್ವಂಸಕಾರಿಯಾದದ್ದು ಶತಮಾನಕ್ಕೆ ಒಮ್ಮೆ ಆಗಬಹುದಷ್ಟೆ. ಹೀಗಾಗಿ, ಕೆಲವರ್ಷಗಳ ನಂತರ ಅವುಗಳ ಬಗ್ಗೆ ಮರತೇ ಹೋಗಿರುತ್ತೇವೆ. ಇಪ್ಪತ್ತನೇ ಶತಮಾನದಲ್ಲಿ ಇಂಗ್ಲೆಂಡ್‌, ಜರ್ಮನಿ, ಜಪಾನ್‌ ಇತ್ಯಾದಿ ದೇಶಗಳು ಕಾದಾಡಿಕೊಂಡು, ಒಬ್ಬರ ನಗರವನ್ನು ಮತ್ತೂಬ್ಬರು ಬಾಂಬ್‌ ಹಾಕಿ ಧ್ವಂಸ ಮಾಡಿಕೊಳ್ಳುತ್ತಿದ್ದಾಗ ಸಾಕಷ್ಟು ಅಧ್ಯಯನಗಳು ನಡೆದಿವೆ. ಇದರ ಪ್ರಕಾರ, ಬಾಂಬ್‌ ದಾಳಿ ಆದಾಗ, ಮನೆ ಛಿದ್ರ ಆಗುವುದು ಖಚಿತ ಎನ್ನುವಾಗ ಎಲ್ಲಿದ್ದರೆ ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ? ಎಂಬುದನ್ನು ತಿಳಿಸುತ್ತದೆ. 

ಮೂಲೆಗಳು ಯಾವಾಗಲೂ ಭದ್ರವಾಗಿರುತ್ತವೆ: “ಆತ ಮೂಲೆ ಕಲ್ಲಿನಂತಿದ್ದ’ ಎಂದು ಮನೆಗೆ ಆಧಾರದಂತಿದ್ದ ವ್ಯಕ್ತಿಯ ಕುರಿತು ಹೇಳುವುದನ್ನು ನಾವೆಲ್ಲ ಹೇಳಿರುತ್ತೇವೆ. ಅಂದರೆ, ಆತ ಬಹುಮುಖ್ಯ ಹಾಗೂ ಗಟ್ಟಿಗ ಎಂಬುದು ಇಲ್ಲಿ ಸಾಮಾನ್ಯವಾಗಿ ಇರುವ ಅರ್ಥ. ಯಾವುದೇ ಕಟ್ಟಡದಲ್ಲಿ, ಎಷ್ಟೇ ಸುದೃಢವಾಗಿದ್ದರೂ, ಅದರ ಇತರೆ ಭಾಗಗಳಿಗೆ ಹೋಲಿಸಿದರೆ, ಆ ಕಟ್ಟಡದ ಮೂಲೆಯೇ ಹೆಚ್ಚು ಗಟ್ಟಿಮುಟ್ಟಾಗಿರುತ್ತದೆ.

ಆದುದರಿಂದ, ಪ್ರಕೃತಿ ವಿಕೋಪ ಇಲ್ಲವೇ ಇತರೆ ತುರ್ತು ಪರಿಸ್ಥಿತಿಯಲ್ಲಿ, ಮೂಲೆಗಳಲ್ಲಿ ಆಶ್ರಯ ಪಡೆಯುವುದು ಉತ್ತಮ. ನಿಮ್ಮ ಮನೆಯ ವಿನ್ಯಾಸ ಮಾಡುವಾಗ, ಹಾಲ್‌ ಲಿವಿಂಗ್‌ ರೂಮ್‌ನ ಗೋಡೆ ತೀರ ಉದ್ದ ಎಂದೆನಿಸಿದರೆ, ಅದರಲ್ಲಿ ಒಂದಷ್ಟು ಮೂಲೆಗಳನ್ನು ಮೂಡಿಸಿಬಿಡಿ! ಕಾಗದ ಕೂಡ, ಒಂದೆರಡು ಮೂಲೆ – ಮಡಚು ಇದ್ದರೆ ಗಟ್ಟಿಮುಟ್ಟಾಗುತ್ತದೆ. ಇಂದು ಬಹುತೇಕ ಪದಾರ್ಥಗಳನ್ನು ಕಾಗದದ “ಗುಂಡು ಮಡಚು’- ಕಾರುಗೇಟೆಡ್‌ ಬಾಕ್ಸ್‌ ಡಬ್ಬಿಗಳಲ್ಲೇ ಇರಿಸಿ ಸುಭದ್ರವಾಗಿ ಸಾಗಿಸುವುದು!

ಮನೆಗಳಲ್ಲಿ ಬಾಗಿಲು ಬಡಿದು ಅರ್ಧ ಇಟ್ಟಿಗೆ ಪಾಟೇಷನ್‌ ಗೋಡೆಗಳಲ್ಲಿ ಬಿರುಕು ಬಿಡುವುದು ಸಾಮಾನ್ಯ. ಇದನ್ನು ತಡೆಯಬೇಕೆಂದರೆ ನಾವು ಈ ಗೋಡೆಯನ್ನು ಒಂದು ಸುತ್ತು ಮಡಚಿ, ಫ್ರೆಮ್‌ ಚೌಕಟ್ಟು ಕೂರಿಸಲು ಸಹ ಅನುಕೂಲ ಆಗುವಂತೆ ಒಂಬತ್ತು ಇಂಚಿಗೆ ತಿರುಗಿಸಿದರೆ, ಎಷ್ಟೇ ಜೋರಾಗಿ ಬಡಿದರೂ ಬಾಗಿಲು ಏನೂ ಆಗುವುದಿಲ್ಲ.

ಬೀಮ್‌ ಭಯ ಬಿಡಿ: ಆರ್‌ಸಿಸಿ ಮನೆಗಳಲ್ಲಿನ ಬೀಮುಗಳು ಅತಿ ಸುದೃಢವಾಗಿದ್ದು, ಅವಕ್ಕೆ ಗೆದ್ದಿಲು ಹೊಡೆಯುವುದಾಗಲೀ, ಕಾಗೇ ಬಂಗಾರ ಪದರದಿಂದ ದುರ್ಬಲ ಆಗುವುದಾಗಲೀ ಆಗಲು ಸಾಧ್ಯವಿಲ್ಲ. ಹಾಗಾಗಿ ಬೀಮ್‌ನ ಬಗ್ಗೆ ಅನಗತ್ಯ ಆತಂಕ ಬೇಡ. ಇತ್ತೀಚಿನ ದಿನಗಳಲ್ಲಿ “ಡಮ್ಮಿ ಬೀಮ್‌’ ಅಂದರೆ, ಭಾರ ಹೊರದ, ಕೇವಲ ಒಳಾಂಗಣಕ್ಕೆ ಮೆರಗು ನೀಡಲು ಎಂದೇ ಕೃತಕ ಬೀಮುಗಳನ್ನು ನಾನಾ ವಿನ್ಯಾಸದಲ್ಲಿ ಮಾಡುವುದು ಜನಪ್ರಿಯವಾಗಿದೆ.

ಹಾಗಾಗಿ, ಈ ಕಲಾತ್ಮಕ ಎಂದು ಬಿಂಬಿಸಲಾಗುವ ಬೀಮುಗಳ ಮೇಲೆ ಭಾರ ಹೆಚ್ಚಾಗಿ ಬೀಳುವ ಸಾಧ್ಯತೆ ಇಲ್ಲ! ಈ ಡಮ್ಮಿ ಬೀಮುಗಳನ್ನು ಸಾಮಾನ್ಯವಾಗಿ ಮರ ಇಲ್ಲವೇ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿ ಒ ಪಿ) ನಿಂದ ಮಾಡಲಾಗಿದ್ದು, ಇವು ಹೆಚ್ಚು ಭಾರವೂ ಇರುವುದಿಲ್ಲ.

ಮೆಟ್ಟಿಲು ಕೆಳಗೆ ಸುಭದ್ರ: ಮನೆಯ ಮತ್ತೂಂದು ಸದೃಢ ಭಾಗ ಮೆಟ್ಟಿಲಿನ ಕೆಳಗಿನ ಸ್ಥಳ ಆಗಿರುತ್ತದೆ. ನಮಗೆಲ್ಲ ತಿಳಿದಿರುವಂತೆ, ಪಿರಮಿಡ್‌ ಅತಿ ಸದೃಢ ಆಕಾರಗಳಲ್ಲಿ ಒಂದು. ಮೆಟ್ಟಿಲಿನ ಹಲಗೆ ಒಂದು ಕಡೆ ನೆಲದಲ್ಲಿ ಹಾಗೂ ಮತ್ತೂಂದು ಗೋಡೆಯ ಮೇಲೆ ಇರುವುದರಿಂದ, ಮಧ್ಯೆ ಒಂದು ತ್ರಿಕೋನ ಪ್ರದೇಶ ನಿರ್ಮಾಣ ಆಗುತ್ತದೆ. ಇದು ಕುಸಿದು ಬೀಳುವ ಸಾಧ್ಯತೆ ತೀರ ಕಡಿಮೆ.

ಹಾಗಾಗಿ, ತುರ್ತು ಪರಿಸ್ಥಿತಿಯಲ್ಲಿ, ಇಲ್ಲಿ ಆಶ್ರಯ ಪಡೆಯಬಹುದು. ಇನ್ನು ನಿಮ್ಮ ಮನೆಯ ಇಡೀ ವಿನ್ಯಾಸ ತ್ರಿಕೋನದಂತೆಯೇ ಇದ್ದರೆ? ಅದು ಮತ್ತಷ್ಟು ಸದೃಢ ಆಗಿರುತ್ತದೆ ಅಲ್ಲವೆ? ಇದಕ್ಕಾಗಿ ಇಂಗ್ಲಿಷ್‌ ಅಕ್ಷರ “ಎ’ ಆಕಾರದ ಫ್ರೆಮ್‌ ಮಾಡುವುದು ಕೂಡ ಕೆಲ ಪ್ರದೇಶಗಳಲ್ಲಿ ಜನಪ್ರಿಯ ಆಗಿದೆ. ಮಾಮೂಲಿ ಚೌಕಾಕಾರದ ಕಾಲಂ ಬೀಮ್‌ ವಿನ್ಯಾಸಕ್ಕೆ ಹೋಲಿಸಿದರೆ, ಈ  ಎ  ಫ್ರೆàಮ್‌ ಮನೆಗಳು ಹೆಚ್ಚು ಗಟ್ಟಿಮುಟ್ಟಾಗಿರುತ್ತದೆ.

ಸಾಮಾನ್ಯವಾಗಿ ಎಲ್ಲಿ ಅತಿ ಹೆಚ್ಚು ಹಿಮಪಾತ ಆಗುತ್ತದೋ ಅಲ್ಲಿ ಎ ಫ್ರೆàಮ್‌ ಮನೆಗಳ ಬಳಕೆ ಹೆಚ್ಚಿರುತ್ತದೆ. ಮಾಮೂಲಿ ಮಟ್ಟಸವಾದ ಸೂರು ಇಲ್ಲವೇ ಸ್ವಲ್ಪ ಮಾತ್ರ ಇಳಿಜಾರು ನೀಡಿದ ಸೂರುಗಳು ಹಿಮಪಾತದಿಂದ ಶೇಖರವಾಗುವ ಗಡ್ಡೆಗಳ ಭಾರದಿಂದ ಕುಸಿಯಬಹುದು ಎಂದು ಈ ಮಾದರಿಯ ಫ್ರೆàಮ್‌ ಗಳನ್ನು ಬಳಸಲಾಗುತ್ತದೆ. 

ನಮ್ಮಲ್ಲಿ ಭೂಕುಸಿತದ ಭಯ ಇರುವೆಡೆ, ಎ ಫ್ರೆಮ್‌ ಮನೆ ಕಟ್ಟಿಕೊಂಡರೆ, ಗುಡ್ಡದಿಂದ ಕುಸಿಯುವ ಮಣ್ಣು, ಸೂರಿಗೆ ಬಿದ್ದರೂ, ಕೆಳಗೆ ಜಾರಿಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ಮಟ್ಟಸದ ಸೂರಾದರೆ, ಅದರ ಮೇಲೆ ಶೇಖರವಾಗುವ ಮಣ್ಣೇ ಮನೆ ಕುಸಿಯಲು ಮುಖ್ಯ ಕಾರಣವಾಗುತ್ತದೆ. ಮನೆಯ ಬಲಾಬಲಗಳನ್ನು ಅರಿತರೆ ನಮ್ಮ ಅನಗತ್ಯ ಭಯಗಳ ನಿವಾರಣೆ ಆಗುವುದರ ಜೊತೆಗೆ ಬಲವೃದ್ಧಿಸುವ ವಿನ್ಯಾಸ ಹೊಂದಿರುವ ಮನೆಗಳನ್ನು ನಾವು ಕಟ್ಟಿಕೊಳ್ಳಬಹುದು.

* ಆರ್ಕಿಟೆಕ್ಟ್ ಕೆ.ಜಯರಾಮ್‌

ಹೆಚ್ಚಿನ ಮಾತಿಗೆ ಫೋನ್‌: 98441 32826

Advertisement

Udayavani is now on Telegram. Click here to join our channel and stay updated with the latest news.

Next