Advertisement
ಮನೆ ವಿನ್ಯಾಸ ಮಾಡುವಾಗ ಬೆನ್ನು ಬಿಡದಂತೆ ಕಾಡುವುದು ಮೆಟ್ಟಿಲುಗಳವಿನ್ಯಾಸ ಹಾಗೂ ಅವುಗಳಲ್ಲಿ ಯಾವ ರೀತಿಯಲ್ಲಿ ಅವಳವಡಿಸಬೇಕು ಎಂಬ ಸಂಗತಿ. ಯಾವ ಮೆಟ್ಟಿಲಾದರೇನು? ಸ್ವಲ್ಪ ಹುಷಾರಿ, ಲೆಕ್ಕಾಚಾರ ಮಾಡಬೇಕು. ಮನೆಯಲ್ಲಿರುವ ಸದಸ್ಯರ ವಯಸ್ಸು ಆ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಮನೆಯಲ್ಲಿ ವಯಸ್ಸಾದವರು ಇದ್ದರೆ, ಅವರನ್ನು ಗಮನದಲ್ಲಿಟ್ಟುಕೊಂಡು ಮೆಟ್ಟಿಲು ಇಡಬೇಕಾಗುತ್ತದೆ.
Related Articles
ಇಲಿ ಹೆಗ್ಗಣಗಳೂ ಕೂಡ ಸಾಮಾನ್ಯವಾಗಿ ಮೆಟ್ಟಿಲು ಏರುವ ಪ್ರಯಾಸ ಮಾಡದೆ ಅಕ್ಕ ಪಕ್ಕ ಓಡಾಡುವ ಸಾಧ್ಯತೆ ಹೆಚ್ಚು ಇರುತ್ತದೆ. ಹಾಗಾಗಿ, ಮನೆ ಮುಂದಿನ ಮೆಟ್ಟಿಲುಗಳು ಇರಬೇಕಾದುದು ಅನಿವಾರ್ಯ.
Advertisement
ಸಾಮಾನ್ಯವಾಗಿ ಮೂರು ಮೆಟ್ಟಿಲುಗಳನ್ನು ಇಡಲು ಮುಖ್ಯ ಕಾರಣ ಪ್ಲಿಂತ್ ಒಂದೂವರೆ ಅಡಿ ಎತ್ತರ ಇರುವುದೇ ಆದರೂ, ನಾನಾ ಕಾರಣಗಳಿಂದಾಗಿ ಒಂದು ಮೆಟ್ಟಿಲು ನೀಡಿದರೆ, ಕೆಲ ಮಟ್ಟಿಗೆ ಉಪಯುಕ್ತವಾಗುತ್ತದೆ. ಇದು ನಮಗೆ, ಅದರಲ್ಲೂ ಹೊಸದಾಗಿ ಬಂದವರಿಗೆ ಹೆಚ್ಚು ಗಮನಕ್ಕೆ ಬಾರದೆ, ಅವರು ಮುಗ್ಗರಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಅದೇ ಮೂರು ಮೆಟ್ಟಿಲಿದ್ದರೆ, ಮಾನವರ ಕಣ್ಣಿಗೆ ಹಾಗೂ ಮನಸ್ಸಿಗೆ ಮಟ್ಟಗಳಲ್ಲಿನ ವ್ಯತ್ಯಾಸ ಅಂದರೆ ಮೆಟ್ಟಿಲು ಮೇಲಿನ ಹಾಗೂ ಕೆಳಗಿನ ಮಟ್ಟ ಸ್ಪಷ್ಟವಾಗಿ ಗೋಚರವಾಗಿ ಹುಶಾರಾಗಿ ಓಡಾಡಲು ಸಾಧ್ಯವಾಗುತ್ತದೆ. ಅಧ್ಯಯನಗಳ ಪ್ರಕಾರ, ಎರಡು ಹತ್ತು ಅಂದರೆ ರೈಸರ್ ಹಾಗೂ ಒಂದು ಮೆಟ್ಟಿಲಿನ ಅಗಲ ಸೇರಿಸಿದರೆ ಇಪ್ಪತ್ತ ನಾಲ್ಕು ಇಲ್ಲವೇ ಇಪ್ಪತ್ತೈದು ಇಂಚಾಗಬೇಕು.
ಅಂದರೆ, ಎರಡು ಹತ್ತುವ ಎತ್ತರ ಆರು ಆರು ಇಂಚು, ಮೆಟ್ಟಲಿನ ಅಗಲ ಹನ್ನೆರಡು ಇಂಚು ಇದ್ದರೆ ಆಗ ಒಟ್ಟು ಇಪ್ಪತ್ನಾಲ್ಕು ಇಂಚು ಆಗುವುದರಿಂದ ಈ ಅನುಪಾತ ಹತ್ತಿ ಇಳಿಯಲು ಅನುಕೂಲಕರವಾಗಿರುತ್ತದೆ. ಮನೆಗಳಲ್ಲಿ ಸ್ಥಳ ಉಳಿಸಲು ಒಂದು ಮೆಟ್ಟಿಲಿನ ಎತ್ತರ ಸಾಮಾನ್ಯವಾಗಿ ಏಳು ಇಂಚು ಇಟ್ಟು ಅಗಲವನ್ನು ಹತ್ತು ಇಂಚು ಇಡಲಾಗುತ್ತದೆ. ಇಲ್ಲಿಯೂ ಕೂಡ ಎರಡು ಎತ್ತರ ಹಾಗೂ ಒಂದು ಅಗಲ ಸೇರಿಸಿದರೆ ಇಪ್ಪತ್ತ ನಾಲ್ಕು ಇಂಚು ಆಗುತ್ತದೆ!
ಮಹಡಿ ಮೆಟ್ಟಿಲು ವಿನ್ಯಾಸ:ಕೆಳಗಿನ ಮನೆ ಹಾಗೂ ಮೇಲಿನ ಮನೆಯನ್ನು ಪ್ರತ್ಯೇಕವಾಗಿ ವಿನ್ಯಾಸ ಮಾಡಿದ್ದರೆ, ಎರಡು ಸಂಸಾರ ಇರುವಂತೆ ಅನುಕೂಲ ಬೇಕಿದ್ದರೆ ಆಗ ಮೆಟ್ಟಿಲು ರಸ್ತೆಯ ಕಡೆಗೆ ಇರಬೇಕಾಗುತ್ತದೆ. ಕೆಳಗಿನ ಮನೆಯವರ ಏಕಾಂತ ಹೆಚ್ಚು ಹಾನಿಗೊಳಗಾಗದೆ, ಮೇಲಿನ ಮನೆಯವರು ಬಂದು ಹೋಗಲು ಅನುಕೂಲಕರವಾಗಿರುತ್ತದೆ.
ಕೆಲವೊಮ್ಮೆ ಮನೆಯವರೇ ಮೇಲೆ ಹಾಗೂ ಕೆಳಗೆ ಎರಡೂ ಮನೆಯನ್ನು ಇಟ್ಟುಕೊಳ್ಳಬೇಕೆಂದಿದ್ದು, ಮುಂದೆಂದಾದರೂ ಬಾಡಿಗೆಗೆ ಕೊಡಬೇಕೆಂದಿದ್ದರೆ ನಾವು ಈಗಲೇ ಎರಡೂ ಕಡೆಗೂ ಮೆಟ್ಟಿಲಿಗೆ ಪ್ರವೇಶ ಇರುವಂತೆ ನೋಡಿಕೊಳ್ಳಬೇಕು. ಅಂದರೆ ರಸ್ತೆ ಬದಿಯಿಂದ ಒಂದು ಹಾಗೂ ಮನೆಯ ಒಳಗಿನಿಂದ ಒಂದು ಬಾಗಿಲು ಇರುವಂತೆ ವಿನ್ಯಾಸ ಮಾಡಬೇಕಾಗುತ್ತದೆ.
ಬಾಗಿಲುಗಳು ಎರಡೂ ಕಡೆ ಇರಬೇಕಾದ ಕಾರಣ, ಮೆಟ್ಟಿಲು ಶುರು ಆಗುವ ಸ್ಥಳದಲ್ಲಿ ಒಂದಷ್ಟು ಸ್ಥಳ ಅಂದರೆ, ಕಡೆ ಪಕ್ಷ ಮೂರು ಅಡಿಗಳಷ್ಟಾದರೂ ಸ್ಪೇಸ್ ಬಿಡಬೇಕು. ನಮ್ಮ ಅನುಕೂಲಕ್ಕೆ ಹಾಗೂ ಬೈಲಾ ಪ್ರಕಾರ ಹದಿನಾಲ್ಕಕ್ಕಿಂತ ಕಡಿಮೆ ಸಂಖ್ಯೆಯ ಮೆಟ್ಟಿಲುಗಳನ್ನು ಹತ್ತಿದ ನಂತರ ಒಂದು ಲ್ಯಾಂಡಿಂಗ್ ನೀಡುವುದು ಕಡ್ಡಾಯ. ಇದು ನಮ್ಮ ಅನುಕೂಲಕ್ಕಾಗಿದ್ದು, ಮೆಟ್ಟಿಲು ಹತ್ತುವಾಗ ಸುಧಾರಿಸಿಕೊಳ್ಳಲು ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ ಕ್ರಮ.
ಕಾಲು ಜಾರಿದರೂ ಕೂಡ ಇಡೀ ಒಂದು ಮಹಡಿ ಬಿದ್ದು ಹೆಚ್ಚು ಗಾ¿å ಆಗುವುದನ್ನು ತಪ್ಪಿಸುವುದರ ಜೊತೆಗೆ ಒಂದೇ ಬಾರಿಗೆ ಹದಿನೆಂಟು ಮೆಟ್ಟಿಲುಗಳ ಇಳಿಜಾರನ್ನು ನೋಡಿ ಗಾಬರಿಗೊಳ್ಳುವುದನ್ನೂ “ನಿಲ್ಲುವ-ನಿಲ್ದಾಣ’ ಸ್ಥಳ ತಪ್ಪಿಸುತ್ತದೆ. ಸಾಮಾನ್ಯವಾಗಿ ಲ್ಯಾಂಡಿಂಗ್ ಮಧ್ಯೆ ಎಂದರೆ ಸುಮಾರು ಒಂಬತ್ತು ಮೆಟ್ಟಿಲುಗಳ ನಂತರ ಇಡುವುದು ವಾಡಿಕೆ. ನಿಮಗೆ ಮೆಟ್ಟಿಲಿನ ಕೆಳಗಿನ ಸ್ಥಳವನ್ನು ಉಪಯೋಗಿಸುವ ಉದ್ದೇಶವಿದ್ದರೆ, ಹದಿಮೂರು, ಹದಿನಾಲ್ಕು ಮೆಟ್ಟಿಲುಗಳ ನಂತರ ಲ್ಯಾಂಡಿಂಗ್ ನೀಡಬಹುದು.
ಮೆಟ್ಟಿಲು ಲೆಕ್ಕಾಚಾರ: ಮಹಡಿ ಹತ್ತುಅಡಿ ಎತ್ತರ ಇದ್ದರೆ, ಅಂದರೆ-ನೆಲಮಹಡಿಯಿಂದ ಮೊದಲ ಮಹಡಿಗೆ ನೂರ ಇಪ್ಪತ್ತು ಇಂಚಿದ್ದರೆ, ಏಳು ಇಂಚು ಎತ್ತರದ ಮೆಟ್ಟಿಲಿಡಬೇಕು ಎಂದು ನಿರ್ಧರಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಹದಿನೇಳು ಮೆಟ್ಟಲಿಗೆ ನೂರ ಹತ್ತೂಂಬತ್ತು ಇಂಚು ಆಗಿ, ಒಂದು ಇಂಚು ಕಡಿಮೆ ಬರುತ್ತದೆ. ಈ ಒಂದು ಇಂಚನ್ನು ನಾವು ಎಲ್ಲ ಮೆಟ್ಟಿಲಿಗೂ ಸರಿಸಮನಾಗಿ ಹಂಚಿದರೆ, ಹೆಚ್ಚಿನ ವ್ಯತ್ಯಾಸ ಏನೂ ತಿಳಿಯುವುದಿಲ್ಲ.
ಒಂದು ಪಕ್ಷ ಸ್ಥಳಾವಕಾಶ ಇದ್ದರೆ ಒಂದು ಹೆಚ್ಚುವರಿ ಮೆಟ್ಟಿಲು ಸೇರಿಸುವುದು ಇನ್ನೂ ಉತ್ತಮ. ಹದಿನೆಂಟು ಮೆಟ್ಟಿಲು ಇಡಲು ನಿರ್ಧರಿಸಿದರೆ, ರೈಸರ್ ಆರೂಮುಕ್ಕಾಲು ಇಂಚು ಇಟ್ಟು, ಕೊನೆಯ ಇಲ್ಲವೇ ಮೊದಲ ಮೆಟ್ಟಿಲನ್ನು ಐದೂ ಕಾಲು ಇಂಚು ಇಟ್ಟರೆ ಲೆಕ್ಕಾಚಾರ ಸರಿಹೋಗುತ್ತದೆ. ಸಾಮಾನ್ಯವಾಗಿ ಎಲ್ಲ ಮೆಟ್ಟಿಲುಗಳೂ ಒಂದೇ ಸಮನಾಗಿ ಇರುವುದು ಅನುಕೂಲಕರ.
ಆದರೂ, ಮೊದಲ ಹಾಗೂ ಕೊನೆಯ ಮೆಟ್ಟಿಲು ಸ್ವಲ್ಪ ಚಿಕ್ಕದಿದ್ದರೆ ಕಾಲಿಗೆ ಹಾಗೆಯೇ ಬ್ಯಾಲೆನ್ಸ್ ತಪ್ಪದೆ- ನಮ್ಮ ಕಣ್ಣು ಮೆಟ್ಟಿಲಿನ ಎತ್ತರವನ್ನು ತೂಗಿ ನೋಡಿ ಇಳಿಯಲು ಹಾಗೂ ಹತ್ತಲು ಅನುಕೂಲಕರವಾಗಿರುತ್ತದೆ. ಮೆಟ್ಟಿಲು ಮಣೆ (ಸ್ಟೇರ್‌ಕೇಸ್) ಅಗಲ ಸಾಮಾನ್ಯವಾಗಿ ಮೂರು ಅಡಿ ಇರುತ್ತದೆ. ಮನೆಗಳಿಗೆ ಕಡೇಪಕ್ಷ ಎರಡೂವರೆ ಅಡಿಯಾದರೂ ಇಡಬೇಕಾಗುತ್ತದೆ. ದೊಡ್ಡ ನಿವೇಶನ ಇದ್ದರೆ, ನಾಲ್ಕು ಅಡಿ ಅಗಲ ಇದ್ದರೆ ಹೆಚ್ಚು ಅನುಕೂಲಕರ.
ಮೂರು ಅಡಿಗಿಂತ ಕಡಿಮೆ ಅಗಲವಿದ್ದರೆ, ಒಂದೇ ಕಾಲದಲ್ಲಿ ಇಬ್ಬರು ಎದುರುಬದಿರು ಹತ್ತಿ ಇಳಿಯಲು ಕಷ್ಟವಾಗಬಹುದು. ಹಾಗೆಯೇ ಚೇರು, ಮೇಜು ಮುಂತಾದ ಫನೀìಚರ್ ಕೊಂಡೊಯ್ಯಲೂ ಕೂಡ ತೊಂದರೆ ಆಗಬಹುದು. ಸಾಮಾನ್ಯವಾಗಿ ಎರಡು ಮೆಟ್ಟಿಲು ಮಣೆಅಗಲ ಅಂದರೆ ಲ್ಯಾಂಡಿಂಗ್ ನಂತರ ತಿರುಗಿ ವಾಪಸ್ ಬರುವ ಅಗಲವೂ ಸೇರಿದರೆ ಸ್ಟೇರ್‌ಕೇಸ್ ಆರು ಅಡಿ ಅಗಲವೂ ಹದಿಮೂರು ಅಡಿ ಉದ್ದವೂ ಇರುತ್ತದೆ.
ಹೆಚ್ಚಿನ ಮಾತಿಗೆ ಫೋನ್: 98441 32826
* ಆರ್ಕಿಟೆಕ್ಟ್ ಕೆ ಜಯರಾಮ್