Advertisement

ಲಾಕ್‌ ತೆರವಿನ ಬಳಿಕ ಚೇತರಿಕೆಯತ್ತ ಹೊಟೇಲ್‌ ಉದ್ಯಮ

11:53 PM Oct 13, 2021 | Team Udayavani |

ಮಂಗಳೂರು: ದೇಶ-ವಿದೇಶದಲ್ಲಿ ಹೊಟೇಲ್‌ ಅಂದ ತತ್‌ಕ್ಷಣ ನೆನಪಾಗುವುದು ಉಡುಪಿ-ದಕ್ಷಿಣ ಕನ್ನಡ. ಅಷ್ಟರ ಮಟ್ಟಿಗೆ ಕರಾವಳಿಯ ಹೆಸರು ಜನಜನಿತ. ಶುಚಿ ರುಚಿಯಾದ ತಿಂಡಿ-ತಿನಿಸುಗಳ ಮೂಲಕವೇ ಜನರ ಮನ ತಣಿಸಿವೆ ಕರಾವಳಿಯ ನೂರಾರು ಹೊಟೇಲ್‌ಗ‌ಳು. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಎದುರಾದ ಕೋವಿಡ್ ಲಾಕ್‌ಡೌನ್‌ನ ಹೊಡೆತಕ್ಕೆ ಸಿಲುಕಿ ಇಲ್ಲಿನ ಹೊಟೇಲ್‌ಗ‌ಳು ಕೂಡ ನಲುಗಿ ಹೋಗಿದ್ದು, ಸದ್ಯ ಕೊಂಚ ಚೇತರಿಕೆಯ ಹಾದಿಗೆ ಬರಲಾರಂಭಿಸಿವೆ.

Advertisement

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸುಮಾರು 1,000ಕ್ಕೂ ಅಧಿಕ ಸಸ್ಯಾಹಾರಿ ಹೊಟೇಲ್‌ಗ‌ಳಿವೆ. ಅಲ್ಲದೆ ಎರಡೂ ಜಿಲ್ಲೆ ಗಳಲ್ಲಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಒಳಗೊಂಡಂತೆ ಮಾಂಸಾಹಾರಿ ಹೊಟೇಲ್‌ಗ‌ಳು ಸಾವಿರದಷ್ಟಿವೆ. ಆದರೆ ಕೊರೊನಾ ಮೊದಲ ಹಾಗೂ 2ನೇ ಅಲೆ ಹಿನ್ನೆಲೆಯಲ್ಲಿ ಎದುರಾಗಿದ್ದ ಲಾಕ್‌ಡೌನ್‌ನಿಂದಾಗಿ ಹೊಟೇಲ್‌ ಉದ್ಯಮ ಸಂಕಷ್ಟ ಹಾಗೂ ಹಲವು ಸವಾಲುಗಳನ್ನು ಎದುರಿಸಬೇಕಾಗಿ ಬಂತು.

ಲಾಕ್‌ಡೌನ್‌ ಸಮಯದಲ್ಲಿ ಹೊಟೇಲ್‌ಗ‌ಳಿಗೆ ಬಹುದೊಡ್ಡ ಏಟು ಬಿದ್ದು ಚೇತರಿಕೆಗೆ ತ್ರಾಸಪಡು ವಂತಾಗಿತ್ತು. ಮಾಲಕರಿಗೆ ಆರ್ಥಿಕ ಹೊಡೆತವಾದರೆ, ಕಾರ್ಮಿಕರಿಗೆ ಬದುಕು ಕಟ್ಟಿಕೊಳ್ಳುವ ಕಷ್ಟ ಎದುರಾಗಿತ್ತು. ಅಂತೂ ಈಗ ಕೊಂಚ ಸುಧಾರಿಸುತ್ತಿದೆ; ಮುಂದೆ ಎಲ್ಲವೂ ಸರಿಯಾಗಬಹುದು ಎಂಬುದು ಹೊಟೇಲ್‌ ಉದ್ಯಮದಲ್ಲಿರುವ ಆಶಾದಾಯಕ ಸಂಗತಿ.

ಹೊಟೇಲ್‌ ಉದ್ಯಮ ಆರ್ಥಿಕ ಸಂಕಷ್ಟದಿಂದ ನಿಧಾನವಾಗಿ ಪಾರಾಗು ತ್ತಿರುವ ಬೆನ್ನಿಗೆ ಕ್ಯಾಂಟೀನ್‌ಗಳು, ಸಣ್ಣ ಪುಟ್ಟ ದರ್ಶಿನಿ, ಉಪಾಹಾರ ಗೃಹಗಳು ಬಾಗಿಲು ತೆರೆದು ಕೊಂಡಿವೆ. ಸಣ್ಣಪುಟ್ಟ ಹೊಟೇಲ್‌ಗ‌ಳ ಕತೆ ಮುಗಿದೇ ಹೋಯಿತು ಎಂದು ಚಿಂತಾಕ್ರಾಂತ ರಾಗಿದ್ದ ಹೊಟೇಲ್‌, ಗೂಡಂಗಡಿ ವರ್ತಕರು ಈಗ ಒಬ್ಬೊಬ್ಬರಾಗಿ ಬಾಗಿಲು ತೆರೆಯುತ್ತಿದ್ದಾರೆ. ಖಾಯಂ ಗ್ರಾಹಕರಿಗೆ ತಿಂಡಿ, ಊಟ ನೀಡುತ್ತಿದ್ದು ಅವರ ಬದುಕಿನಲ್ಲಿ ಭರವಸೆಯ ಬೆಳಕು ಕಾಣಿಸಿದೆ.

ಇದನ್ನೂ ಓದಿ:ರಾಜನಾಥ ಸಿಂಗ್ ಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು: ಓವೈಸಿ

Advertisement

ಗ್ರಾಹಕರ ಕೊರತೆ!
ಲಾಕ್‌ಡೌನ್‌ ಕಾಲದಲ್ಲಿ ಬಹುತೇಕ ಮಂದಿ ಮನೆಯಲ್ಲಿಯೇ ತಿಂಡಿ ತಿನಿಸು ಮಾಡುತ್ತಿದ್ದ ಕಾರಣ ಆ ಬಳಿಕವೂ ಹೊಟೇಲ್‌ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿದಂತಿಲ್ಲ. ಜತೆಗೆ ಪ್ರತೀ ಹೊಟೇಲ್‌ಗೆ ಇದ್ದ ಗ್ರಾಹಕರ ಸಂಖ್ಯೆ ಕೂಡ ಕೊರೊನಾ ಆತಂಕದ ನೆಪದಿಂದ ಈ ಮೊದಲಿಗಿಂತ ಕಡಿಮೆಯಾಗಿದೆ. ಲಾಡ್ಜ್ಗಳು ಪೂರ್ಣ ಪ್ರಮಾಣದಲ್ಲಿ ಇನ್ನಷ್ಟೇ ತೆರೆಯಬೇಕಿವೆ. ಪ್ರವಾಸೋದ್ಯಮ ನಿರೀಕ್ಷೆಯಷ್ಟು ಚೇತರಿಕೆ ಆಗದಿರುವ ಕಾರಣ/ಮಳೆ ನೆಪ ಹೇಳಿ ಉಳಿದ ಗ್ರಾಹಕರು ಅಷ್ಟಾಗಿ ಇಲ್ಲ ಎನ್ನುತ್ತಾರೆ ಹೊಟೇಲ್‌ ಮಾಲಕರು. ದ.ಕ. ವೈನ್‌ ಮರ್ಚೆಂಟ್‌ ಅಸೋಸಿಯೇಶನ್‌ ಅಧ್ಯಕ್ಷ ಗಣೇಶ್‌ ಶೆಟ್ಟಿ ಪ್ರಕಾರ, “ಲಾಕ್‌ಡೌನ್‌ ಬಳಿಕ ಉದ್ಯಮ ಆಶಾಭಾವದ ಹೆಜ್ಜೆ ಇಟ್ಟಿದೆ. ಮುಂದೆ ಲಾಕ್‌ಡೌನ್‌ ಆಗದಿದ್ದರೆ ಚೇತರಿಕೆಯ ಬಹು ನಿರೀಕ್ಷೆಯಿದೆ’ ಎನ್ನುತ್ತಾರೆ.

ಕ್ಯಾಟರಿಂಗ್‌ ಸಂಕಟ!
ಕ್ಯಾಟರಿಂಗ್‌ ಮಾಲಕ ರಾಜೇಶ್‌ ಶೆಟ್ಟಿ ಜಪ್ಪು ಅವರ ಪ್ರಕಾರ, “ಹೊಟೇಲ್‌ಗ‌ಳ ಜತೆಗೆ ಕ್ಯಾಟರಿಂಗ್‌ ಉದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಜನರ ಮಿತಿ ಇರುವ ಕಾರಣದಿಂದ ಕ್ಯಾಟರಿಂಗ್‌ ವಲಯ ಇನ್ನೂ ಪೂರ್ಣಮಟ್ಟದಲ್ಲಿ ತೊಡಗಿಸಿಕೊಂಡಿಲ್ಲ. ಮುಂದೆ ಆಶಾಭಾವ ಇದೆ’ ಎನ್ನುತ್ತಾರೆ.

ಸವಿ ಹೆಚ್ಚಿಸಿದೆ ಐಸ್‌ಕ್ರೀಂ !
ಮಂಗಳೂರು ಅಂದಾಕ್ಷಣ ನೆನಪಾಗುವುದು ಐಸ್‌ಕ್ರೀಂ. ಲಾಕ್‌ಡೌನ್‌ ಹೊಡೆತ ಕೂಡ ಐಸ್‌ಕ್ರೀಂ ಅನ್ನು ನೀರಾಗಿಸಿತ್ತು. ಆದರೆ ಇದೀಗ ಐಸ್‌ಕ್ರೀಂ ಉದ್ಯಮದಲ್ಲಿಯೂ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಮಳೆಗಾಲದ ಮಧ್ಯೆಯೂ ಐಸ್‌ಕ್ರೀಂ ಸವಿಗೆ ಮನಸೋತು ಪಾರ್ಲರ್‌ಗಳತ್ತ ಹೆಜ್ಜೆ ಇಡುತ್ತಿರುವುದು ಉದ್ಯಮ ಕ್ಷೇತ್ರಕ್ಕೆ ನಿರೀಕ್ಷೆ ಮೂಡಿಸಿದೆ.

ಆನ್‌ಲೈನ್‌ ಆಹಾರಕ್ಕೆ ಬಹು ಬೇಡಿಕೆ!
ಲಾಕ್‌ಡೌನ್‌ ಕಾಲದಲ್ಲಿ ಮಂಗಳೂರು ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಝೊಮೆಟೊ, ಸ್ವಿಗ್ಗಿ ಸೇರಿದಂತೆ ಆನ್‌ಲೈನ್‌ ಮೂಲಕ ಆಹಾರ ಪೂರೈಕೆಗೆ ಹೆಚ್ಚು ಬೇಡಿಕೆ ಇದೆ. ಬಹುತೇಕ ಹೊಟೇಲ್‌ಗ‌ಳು ರಿಯಾಯಿತಿ ಪ್ರಕಟಿಸಿ ಆನ್‌ಲೈನ್‌ ಮೂಲಕವೇ ಗ್ರಾಹಕರ ಮನಗೆದ್ದಿವೆ. ಇದು ಲಾಕ್‌ಡೌನ್‌ ಬಳಿಕವೂ ಮುಂದುವರಿದಿದೆ. ಹಲವು ಯುವಕರಿಗೆ ಉದ್ಯೋಗವೂ ದೊರಕಿದೆ.

ಆಶಾಭಾವವಿದೆ
ಲಾಕ್‌ಡೌನ್‌ ಬಳಿಕ ಹೊಟೇಲ್‌ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಪ್ರವಾಸೋದ್ಯಮ, ಶಾಲಾ ಕಾಲೇಜು ಚಟುವಟಿಕೆ ಪೂರ್ಣ ಪ್ರಮಾಣ ದಲ್ಲಿ ಆರಂಭವಾಗದೆ ಚೇತರಿಕೆ ಕಾಣಲು ಸಾಧ್ಯವಾಗಿರಲಿಲ್ಲ. ಬೆಲೆ ಏರಿಕೆ ಕೂಡ ಸಮಸ್ಯೆ ಯಾಗಿದೆ. ಆದರೆ ಸದ್ಯ ಹೊಟೇಲ್‌ ಉದ್ಯಮ ಮತ್ತೂಮ್ಮೆ ಚೇತರಿಕೆ ಕಾಣಲಿದೆ ಎಂಬ ಆಶಾಭಾವದಲ್ಲಿದ್ದೇವೆ.
– ಕುಡ್ಪಿ ಜಗದೀಶ್‌ ಶೆಣೈ,
ಅಧ್ಯಕ್ಷರು, ದ.ಕ. ಜಿಲ್ಲಾ ಹೊಟೇಲ್‌ ಮಾಲಕರ ಸಂಘ

ಚೇತರಿಕೆಯ ನಿರೀಕ್ಷೆ
ಲಾಕ್‌ಡೌನ್‌ ಕಾರಣದಿಂದ ಹೊಟೇಲ್‌ ಉದ್ಯಮದವರು ಕಂಗಾಲಾಗಿದ್ದಾರೆ. ಹಳ್ಳಿ ಹಳ್ಳಿಯಲ್ಲಿದ್ದ ಅದೆಷ್ಟೋ ಸಣ್ಣ ಪುಟ್ಟ ಹೊಟೇಲ್‌ಗ‌ಳ ಪೈಕಿ ಬಹುತೇಕ ಬಾಗಿಲು ಹಾಕಿವೆ. ಎಲ್ಲವೂ ಸರಿಯಾಗಿ ಚೇತರಿಕೆ ಆಗಬೇಕಾದರೆ ಇನ್ನೂ 6 ತಿಂಗಳು ಬೇಕಾಗಬಹುದು. ಅಲ್ಲಿಯ ವರೆಗೆ ಮತ್ತೂಂದು ಲಾಕ್‌ಡೌನ್‌ ಭಯ ಎದುರಾಗದಿದ್ದರೆ ಚೇತರಿಕೆ ಕಾಣಬಹುದು.
– ತಲ್ಲೂರು ಶಿವರಾಮ ಶೆಟ್ಟಿ,
ಅಧ್ಯಕ್ಷರು, ಉಡುಪಿ ಜಿಲ್ಲಾ ಹೊಟೇಲ್‌ ಮಾಲಕರ ಸಂಘ

 

Advertisement

Udayavani is now on Telegram. Click here to join our channel and stay updated with the latest news.

Next