ಹೊಸದಿಲ್ಲಿ/ಮುಂಬಯಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗೆ 15 ದಿನ ಮಾತ್ರ ಬಾಕಿ ಉಳಿದಿವೆ. ಸದ್ಯ ದಸರೆ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳ ವಿವಿಧ ಪಕ್ಷಗಳ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಅ. 9ರ ಬಳಿಕ ಅದು ಬಿರುಸಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ರಾಷ್ಟ್ರೀಯ ವಿಚಾರಗಳನ್ನೇ ಬಿಜೆಪಿ ಪ್ರಧಾನವಾಗಿ ಪ್ರಸ್ತಾವ ಮಾಡುವ ಇರಾದೆಯಲ್ಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ಮೋದಿ ಸರಕಾರ ಕೈಗೊಂಡಿರುವ ಭ್ರಷ್ಟಾಚಾರ ವಿರೋಧಿ ಕ್ರಮಗಳು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಚಾರ ಪ್ರಸ್ತಾವ ಮಾಡಲು ಉತ್ಸುಕವಾಗಿದೆ.
ಪ್ರಧಾನಿ ಮೋದಿ ಮಹಾರಾಷ್ಟ್ರದಲ್ಲಿ ಹತ್ತು, ಹರ್ಯಾಣದಲ್ಲಿ ನಾಲ್ಕರಿಂದ ಐದು ರ್ಯಾಲಿಗಳು, ಪ್ರಧಾನಿ ಹಮ್ಮಿಕೊಳ್ಳಲಿರುವ ಎರಡರಷ್ಟು ಚುನಾವಣ ಕಾರ್ಯಕ್ರಮಗಳಲ್ಲಿ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ. ಸದ್ಯ ಈ ಕಾರ್ಯಕ್ರಮಗಳ ಸಂಖ್ಯೆಗಳು ಪೂರ್ವ ನಿರ್ಧರಿತವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಚಾರದ ಅಗತ್ಯಕ್ಕೆ ತಕ್ಕಂತೆ ಬದಲಾಗುವ ಸಾಧ್ಯತೆ ಇದೆ ಎಂದು ಪಕ್ಷದ ಹಿರಿಯ ನಾಯಕ ರವಿವಾರ ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ.
370ನೇ ವಿಧಿ ರದ್ದು ಮಾಡಿರುವುದಕ್ಕೆ ದೇಶದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿಕೊಂಡಿದೆ. ವಿಪಕ್ಷಗಳ ಹಲವು ನಾಯಕರು ಭಾಗಿಯಾಗಿರುವ ದೊಡ್ಡ ಮಟ್ಟದ ಭ್ರಷ್ಟಾಚಾರ ಹಗರಣಗಳಲ್ಲಿ ಕ್ರಮ ಕೈಗೊಂಡಿರುವುದೂ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿಕೊಂಡಿದ್ದರೆ, ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಅದನ್ನು ರಾಜಕೀಯ ಪ್ರತೀಕಾರ ಎಂದು ಬಣ್ಣಿಸಿವೆ.
ದೇಶದ ಘನತೆ ವೃದ್ಧಿ: ಪ್ರಧಾನಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ ವೃದ್ಧಿಯಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ಅವರು, ಆ ಪಕ್ಷಕ್ಕೆ ನೆಹರೂ ಕುಟುಂಬದ ಹೊರತಾಗಿ ಯೋಚನೆ ಮಾಡಲೂ ಸಾಧ್ಯವಿಲ್ಲ. ನಾವು ಭಾರತ್ ಮಾತಾ ಕಿ ಜೈ ಎಂದು ಹೇಳಿದರೆ, ಅವರ ಪಕ್ಷದ ನಾಯಕರು ಸೋನಿಯಾ ಮಾತಾ ಕಿ ಜೈ ಎಂದು ಘೋಷಣೆ ಹಾಕುತ್ತಾರೆ’ ಎಂದು ಲೇವಡಿ ಮಾಡಿದ್ದಾರೆ. ಇದೇ ವೇಳೆ ಬಿಜೆಪಿಯ ಹಿರಿಯ ನಾಯಕ ಅನಿಲ್ ಜೈನ್ ಮಾತನಾಡಿ ಕೇಂದ್ರ ಸರಕಾರದ ಸಾಧನೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಆಧರಿಸಿ ಪಕ್ಷ ಮತ ಯಾಚಿಸಲಿದೆ ಎಂದು ಹೇಳಿದ್ದಾರೆ.