ಕಡಬ : ಗುಂಡ್ಯ ಹೊಳೆಗೆ ಕಡಬ ಹೊಸಮಠದಲ್ಲಿ ನೂತನ ಸರ್ವಋತು ಸೇತುವೆ ನಿರ್ಮಾಣಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡಿದೆ. ಹಲವು ದಶಕಗಳಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನೆರೆ ನೇರಿನಿಂದ ಮುಳುಗಿ ರಸ್ತೆ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ ಹೊಸಮಠದ ಹಳೆಯ ಮುಳುಗು ಸೇತುವೆ ಮೇಲಿನ ಸಂಚಾರ ಮುಂದೆ ನೆನಪು ಮಾತ್ರ.
ನೂತನ ಸೇತುವೆಯ ನಿರ್ಮಾಣ ದಿಂದಾಗಿ ಈ ವರ್ಷದಿಂದ ಹೊಸಮಠ ಸೇತುವೆಯ ಮುಳುಗಡೆಯ ಭೀತಿ ದೂರವಾಗಿದೆ. ಹಲವು ದುರಂತಗಳ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿಯೂ ಸೇತುವೆಯ ಎರಡೂ ತುದಿಗಳಲ್ಲಿ ಏರ್ಪಡಿಸಲಾಗುತ್ತಿದ್ದ ಪೊಲೀಸ್ ಕಾವಲು ಈ ವರ್ಷದಿಂದ ರದ್ದಾಗಿದೆ.
ಯಾತ್ರಾಸ್ಥಳ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಮೂಲಕ ಸುಲಭ ಸಂಪರ್ಕ ಕಲ್ಪಿಸುವ ಹಳೆಯ ಮುಳುಗು ಸೇತುವೆ ಮೈಸೂರು ರಾಜ್ಯ ಆಡಳಿತಾವಧಿಯಲ್ಲಿ 1955ರಲ್ಲಿ ನಿರ್ಮಾಣವಾಗಿತ್ತು. ಅಂದಿ ನಿಂದಲೂ ಮಳೆಗಾಲದಲ್ಲಿ ನೆರೆನೀರಿಗೆ ಮುಳುಗಿ ಅನೇಕ ದುರಂತಗಳಿಗೆ ಸಾಕ್ಷಿಯಾಗಿರುವ ಈ ಸೇತುವೆ ಮುಂದಿನ ದಿನಗಳಲ್ಲಿ ಕೇವಲ ನೆನಪಾಗಿ ಉಳಿ ಯಲಿದೆ. ನೂತನ ಸೇತುವೆ ನಿರ್ಮಿ ಸಲು 7 ವರ್ಷಗಳ ಹಿಂದೆ ರಾಜ್ಯ ಸರ ಕಾರ 7.5 ಕೋಟಿ ರೂ. ಅನುದಾನ ಒದ ಗಿಸಿತ್ತು. ಬಳಿಕ ಹಲವು ಎಡರು-ತೊಡರು ಗಳ ನಡುವೆ 4 ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಹಳೆಯ ಸೇತುವೆಯಿಂದ ಸುಮಾರು 4 ಮೀ. ಎತ್ತರದಲ್ಲಿ 125 ಮೀ. ಉದ್ದ, 12 ಮೀ. ಅಗಲದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ. ಹಳೆ ಸೇತುವೆಯನ್ನು ಹಾಗೆಯೇ ಉಳಿಸಿಕೊಂಡು ಸಂಚಾರಕ್ಕೆ ತೊಂದರೆಯಾಗದ ರೀತಿ ಹೊಸ ಸೇತುವೆ ನಿರ್ಮಾಣವಾಗಿದೆ. ಸಂಪರ್ಕ ರಸ್ತೆಯ ಪಕ್ಕದ ತಡೆಗೋಡೆ ಇತ್ಯಾದಿ ಹೆಚ್ಚುವರಿ ಸೇರಿ ಸೇತುವೆಯ ಒಟ್ಟು ನಿರ್ಮಾಣ ವೆಚ್ಚ 9.19 ಕೋಟಿ ರೂ.ಗಳಿಗೆ ಏರಿದೆ.
– ನಾಗರಾಜ್ ಎನ್.ಕೆ.