Advertisement

ಬಡವರ ಆಶಾಕಿರಣ ದೇವರಾಜ ಅರಸು

10:13 AM Aug 21, 2017 | |

ಕಲಬುರಗಿ: ಸಾಮಾಜಿಕ ಸಮಾನತೆ ಹಿತದೃಷ್ಟಿಯಿಂದ ಕಡುಬಡವರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿ ಬಡವರ
ಬದುಕಿನಲ್ಲಿ ಹೊಸ ಆಶಾಕಿರಣ ಮತ್ತು ಹೊಸ ಬದುಕಿನ ಆಶಾಕಿರಣ ಮೂಡಿಸಿದವರು ದಿ| ಡಿ.ದೇವರಾಜ ಅರಸು ಅವರು ಎಂದು ಪಾಲಿಕೆ ಮೇಯರ್‌ ಶರಣಕುಮಾರ ಮೋದಿ ಹೇಳಿದರು. ನಗರದ ಡಾ| ಎಸ್‌.ಎಂ. ಪಂಡಿತ್‌ ರಂಗಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಪರಿವರ್ತನೆ ಹರಿಕಾರ ಡಿ. ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯ ಒದಗಿಸಲು ಬಗರ ಹುಕುಂ ಸಾಗುವಳಿಕೆ ಪದ್ಧತಿ ಜಾರಿಗೆ ತಂದಿದ್ದು ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಣಯವಾಗಿದೆ. ಇದರಿಂದ ದೀನ ದಲಿತರು, ಬಡವರು ಮತ್ತು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಡಿ. ದೇವರಾಜ ಅರಸು ಅವರು ಬಡವರ ಪರವಾಗಿದ್ದರು. ಬಡತನ ರೇಖೆಗಿಂತ ಕೆಳಗಿನವರಿಗೆ ಮುಖ್ಯವಾಹಿನಿಗೆ ತಂದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸದೃಢಗೊಳಿಸುವ ಗುರಿ ಹೊಂದಿದ ಅವರು ಈ ರಾಜ್ಯದ, ಈ ದೇಶದ ಹಿಂದುಳಿದ ವರ್ಗಗಳ, ದಲಿತರ, ಬಡವರ ಮನಸ್ಸಿನಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿದ್ದಾರೆ. ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಮಾಡಿ ತೋರಿಸಿದ “ಮೌನಕ್ರಾಂತಿಯ ಹರಿಕಾರ’ ಅವರಾಗಿದ್ದಾರೆ ಎಂದು ಹೇಳಿದರು. ನ್ಯಾಯವಾದಿ ಮಹಾಂತೇಶ ಕೌಲಗಿ ಅವರು ಡಿ. ದೇವರಾಜ ಅರಸು ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿ, ದಿ. ಡಿ. ದೇವರಾಜ ಅರಸು ಅವರು ಡಾ| ಬಿ.ಆರ್‌. ಅಂಬೇಡ್ಕರ್‌, ಮಹಾತ್ಮಾ ಗಾಂಧಿ  ಸೇರಿದಂತೆ ಮತ್ತಿತರರ ಸಿದ್ಧಾಂತ ಮೈಗೂಡಿಸಿಕೊಂಡಿದ್ದರು. ವಿದ್ಯೆ ಕಲಿತು ಸಾಕಷ್ಟು ಜ್ಞಾನ ಪಡೆದ ಅವರು ಯಾವುದೇ ನೌಕರಿಗೆ ಹೋಗದೇ ತಮ್ಮ ಸ್ವಂತ ಗ್ರಾಮಕ್ಕೆ ಬಂದು ಕೃಷಿ ಕಾರ್ಯ ಕೈಗೊಂಡು ತಮ್ಮ ಗ್ರಾಮಕ್ಕೆ ಮಾದರಿಯಾಗುವ ಹಾಗೆ ಕೆಲಸ ಮಾಡಿದರು. ಬಡವರ ಸಮಸ್ಯೆಯನ್ನು ಮನೆಯಲ್ಲಿ ಕುಳಿತುಕೊಂಡು ಕೇಳಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದರು. ಮುಂದೆ ಒಂದು ದಿನ ಅವರು ಜನನಾಯಕರಾಗಿ ಹೊರಹೊಮ್ಮಿದರು ಎಂದು ಹೇಳಿದರು. ದಿ. ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದವರ ಧ್ವನಿಯಾಗಿದ್ದರು. ಹಿಂದುಳಿದ ವರ್ಗಗಳ ಜನರಿಗೆ ಏನಾದರೂ ಮಾಡಬೇಕು. ಎಲ್ಲರಿಗೂ ಸಮಬಾಳು ಸಮಪಾಲು ನೀಡುವುದು ಅವರ ಆಶಯವಾಗಿತ್ತು. ಅರಸುರವರು ಭೂ ಕಂದಾಯ ಅಧಿನಿಯಮವನ್ನು ಸಹ ಜಾರಿಗೆ ತಂದರು.ಊಳುವವನೇ ಭೂ ಒಡೆಯ ಎಂದು ಘೋಷಣೆ ಮಾಡಿ, ಭೂಮಿಯನ್ನು ಬಡವರಿಗೆ ಹಂಚಿ ಸಾಮಾಜಿಕ ನ್ಯಾಯ ಒದಗಿಸಿದರಲ್ಲದೇ ಸೂರು ಇಲ್ಲದವರಿಗೆ ಸೂರು ಒದಗಿಸಿದರು. ವೃದ್ದಾಪ್ಯ ವೇತನ, ಅಂಗವಿಕಲರ ವೇತನ ಮತ್ತು ಹಿಂದುಳಿದ ವರ್ಗಗಳ ನಿರ್ದೇಶನಾಲಯ ಸಹ ಜಾರಿಗೆ ತಂದರು ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಕುಡಾ ಅಧ್ಯಕ್ಷ ಮಹ್ಮದ್‌ ಅಸಗರ್‌ ಚುಲಬುಲ್‌, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಮಹಾಂತೇಶ ಎಸ್‌. ಕೌಲಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸುಭಾಷ ಗೌಳಿ, ವೆಂಕಟೇಶ ಯಾದವ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಜಿಲ್ಲೆಯ ಕೆ.ಎ.ಎಸ್‌.,ಐ.ಎಸ್‌.ಎಸ್‌. ಪರೀಕ್ಷೆಯಲ್ಲಿ ಪಾಸಾದ ಹಿಂದುಳಿದ ವರ್ಗದ ಸಮುದಾಯ ವಿದ್ಯಾರ್ಥಿಗಳಿಗೆ, 2016-17ನೇ ಸಾಲಿನಲ್ಲಿ ಎಸ್‌.ಎಸ್‌. ಎಲ್‌.ಸಿ. ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಹಿಂದುಳಿದ ವರ್ಗಗಳ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ್‌ ಪಾಷಾ ಕಾರಟಗಿ ಸಭೆಗೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಶಿವಾನಂದ ಅಣಜಗಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಹಿಂದುಳಿದ ವರ್ಗದ ಶಂಕರ ಸಂಗಾವಿ, ರಮೇಶ ನಾಟಿಕರ್‌, ಶಿವಾನಂದ ಅಣಜಗಿ ಮತ್ತು ವೆಂಕಟೇಶ ಯಾದವ ಅವರನ್ನು ಸನ್ಮಾನಿಸಲಾಯಿತು. ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ದಿನಾಚರಣೆ ಅಂಗವಾಗಿ ಬೆಳಿಗ್ಗೆ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಡಾ| ಎಸ್‌.ಎಂ.ಪಂಡಿತ ರಂಗಮಂದಿರದವರೆಗೆ ಡಿ.ದೇವರಾಜ ಅರಸು ಅವರ ಭಾವಚಿತ್ರದ ಹಾಗೂ ಕಲಾ ತಂಡಗಳ ಭವ್ಯ ಮೆರವಣಿಗೆ ಜರುಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next