ಮುದ್ದೇಬಿಹಾಳ: ಚಲಿಸುತ್ತಿದ್ದ ಕಬ್ಬು ಸಾಗಾಣಿಕೆ ಟ್ರ್ಯಾಕ್ಟರ್ ನ ಎರಡನೇ ಟ್ರ್ಯಾಲಿ ಹುಕ್ ತುಂಡಾಗಿ ಎದುರಿಗೆ ಬಂದ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂದೆ ಕುಳಿತಿದ್ದ 12 ವರ್ಷದ ಬಾಲಕನಿಗೆ ಗಂಭೀರ ಗಾಯಗೊಂಡಿರುವ ಘಟನೆ ಮುದ್ದೇಬಿಹಾಳ ತಾಲೂಕು ಬಿದರಕುಂದಿ ಕ್ರಾಸನ ವಿಜಯಪುರ ಮುಖ್ಯ ರಸ್ತೆಯ ಹಳ್ಳದ ಇಳಿಜಾರಿನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ತಂದೆ ಚಲಾಯಿಸುತ್ತಿದ್ದ ಬೈಕ್ನ ಹಿಂದಿನ ಸೀಟಿನಲ್ಲಿ ಬಾಲಕ ಕುಳಿತಿದ್ದ. ಹುಕ್ ತುಂಡಾದ ಟ್ರ್ಯಾಲಿ ರಸ್ತೆಯಲ್ಲಿ ಎರ್ರಾಬಿರ್ರಿಯಾಗಿ ಸಂಚರಿಸಿದ್ದು ಈ ಅವಘಡಕ್ಕೆ ಕಾರಣವಾಗಿದೆ. ಅಪಘಾತದ ನಂತರ ಟ್ರ್ಯಾಲಿ ರಸ್ತೆ ಪಕ್ಕದ ಮರಕ್ಕೆ ಗುದ್ದಿ ಉರುಳಿ ಬಿದ್ದಿದ್ದು, ಅಪಘಾತದ ದೃಷ್ಯ ನೋಡಿ ಗಾಭರಿಗೊಂಡ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬಾಲಕ ರೂಢಗಿ ಗ್ರಾಮದವನು ಎನ್ನಲಾಗಿದ್ದು, ಮುದ್ದೇಬಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಸಮಾಜ ಕಲ್ಯಾಣ ಇಲಾಖೆಯ ದಾಖಲೆಗಳಿರುವ ಕೊಠಡಿಗೆ ಬೆಂಕಿ
ಗಂಭೀರ ಗಾಯಗೊಂಡ ಬಾಲಕನನ್ನು ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.