Advertisement

ಈರುಳ್ಳಿ ಬೆಳೆಗಾರರ ಊರು ಖಜೂರಿ

11:25 AM Feb 14, 2022 | Team Udayavani |

ಆಳಂದ: ತಾಲೂಕಿನ ಖಜೂರಿ ಗ್ರಾಮದ ಸುತ್ತಲಿನ ಹೊಲಗಳಲ್ಲಿ ಈರಳ್ಳಿ (ಉಳ್ಳಾಗಡ್ಡಿ) ಬೆಳೆಯದ್ದೇ ಪಾರುಪತ್ಯ ಹೆಚ್ಚಿದ್ದು, ಈ ಬೆಳೆಯ ಮೇಲೆ ರೈತರು ಹಿಡಿತ ಸಾಧಿಸಿ, ಆರ್ಥಿಕ ಚೇತರಿಕೆ ಕಂಡುಕೊಂಡಿದ್ದಾರೆ. ಹೀಗಾಗಿ ಈ ಗ್ರಾಮ ‘ಈರುಳ್ಳಿ ಬೆಳೆಗಾರರ ಊರು’ ಎಂದೇ ಖ್ಯಾತಿ ಪಡೆಯುತ್ತಿದೆ.

Advertisement

ಮುಂಗಾರಿನಲ್ಲಿ ಸಂಪೂರ್ಣ ಬೆಳೆ ನಷ್ಟ ಅನುಭವಿಸಿದ್ದರ ನಡುವೆ ಮತ್ತೆ ನಾಟಿಮಾಡಿದ ಫಸಲಿಗೆ ಬೆಳೆ ಕೈಗೆಟುಕಿ ಆರ್ಥಿಕ ಪರಿಸ್ಥಿತಿ ಸರಿದೂಗಿಸಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾದರೂ ರೈತ ಮಹಿಳೆಯರು, ಪುರುಷರು ಸೇರಿ ಈರುಳ್ಳಿ ಸಸಿ ಉತ್ಪಾದನೆ, ಬೀಜದ ಆಯ್ಕೆ, ನಾಟಿಯಿಂದ ಕೊಯ್ಲಿನವರೆಗೆ ತಾಂತ್ರಿಕ ಅನುಭವ ಹೊಂದಿದ್ದರಿಂದ ಗುಣಮಟ್ಟದ ಈರಳ್ಳಿ ಬೆಳೆ ಬೆಳೆದು ವಾಣಿಜ್ಯ ನಗರಗಳ ಮಾರುಕಟ್ಟೆಯಲ್ಲೂ ಗಮನ ಸೆಳೆದಿದ್ದಾರೆ.

ಇಲ್ಲಿನ ಈರುಳ್ಳಿ ಉತ್ಪಾದನೆ ಮಾಹಿತಿ ಪಡೆಯಲು ಸುತ್ತಲಿನ ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಹೊಲದಲ್ಲಿನ ಈರುಳ್ಳಿ ನಾಟಿಗೂ ಈ ಗ್ರಾಮದ ಪರಿಣಿತ ರೈತ ಕಾರ್ಮಿಕ ಮಹಿಳೆಯರನ್ನೇ ಕರೆದುಕೊಂಡು ಹೋಗಿ, ಲಾಭ ಮಾಡಿಕೊಳ್ಳುತ್ತಿದ್ದಾರೆ.

ಹೇಗೆ ಸಿಕ್ಕಿತು ಪ್ರೇರಣೆ?

ಖಜೂರಿಯಲ್ಲಿ 1992-93ರ ಆರಂಭದಲ್ಲಿ ಗ್ರಾಮದ ದಿ| ಯಶ್ವಂತ ಬಂಗರಗೆ, ನರಸಿಂಗ ನಗರೆ ಮತ್ತಿತರರು ಬೆರಳೆಣಿಕೆಷ್ಟೇ ರೈತರು ಆರಂಭಿಸಿದ ಈರಳ್ಳಿ ಬೆಳೆ ಉತ್ಪಾದನೆ ದಿನಕಳೆದಂತೆ ಗ್ರಾಮದಲ್ಲಿ ಶೇ. 50ರಷ್ಟು ಹೆಚ್ಚಿದೆ. ಮೂರು ತಿಂಗಳ ಬೆಳೆ ಇದಾಗಿದ್ದು, ಸೆಪ್ಟೆಂಬರ್‌ ತಿಂಗಳಲ್ಲಿ ಸಸಿ ನಾಟಿ ಮಾಡಿ ಡಿಸೆಂಬರ್‌ ಕೊನೆ ವಾರದಲ್ಲಿ ಫಸಲು ಕೈಸೇರುತ್ತದೆ. ಈ ಫಸಲನ್ನು ಹೈದ್ರಾಬಾದ್‌, ಕಲಬುರಗಿ, ಸೊಲ್ಲಾಪುರ, ಬೆಂಗಳೂರು ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಮುಂಗಾರು, ಹಿಂಗಾರು, ಬೇಸಿಗೆ ಹೀಗೆ ವರ್ಷದ ಮೂರು ಹಂಗಾಮಿಗೆ ಬೆಳೆ ತೆಗೆಯುತ್ತಾರೆ.

Advertisement

900 ಈರುಳ್ಳಿ ರೈತರು

ಗ್ರಾಮದಲ್ಲಿ 1600 ಮನೆಗಳು ಇದ್ದು, ಇದರಲ್ಲಿ 900 ರೈತರು ಅರ್ಧ ಎಕರೆಯಿಂದ ನಾಲ್ಕು ಎಕರೆ ವರೆಗೆ ಈರಳ್ಳಿ ಬೆಳೆ ಬೆಳೆಯುತ್ತಿದ್ದಾರೆ. ಎಕರೆಗೆ ಮಾರುಕಟ್ಟೆ ಬೆಲೆ ಆಧರಿಸಿ ಸಸಿ, ಕೂಲಿಯಾಳು ಖರ್ಚು ಸೇರಿ ಒಟ್ಟು 45ರಿಂದ 50 ಸಾವಿರ ರೂ. ಖರ್ಚು ಬರುತ್ತದೆ.

ಗ್ರಾಮದಲ್ಲಿ 450 ಹೆಕ್ಟೇರ್‌ ಬೆಳೆ

ತಾಲೂಕಿನ ಈರಳ್ಳಿ ಹಿಂಗಾರು ಬೆಳೆ ಒಟ್ಟು 1500 ಹೆಕ್ಟೇರ್‌. ಖಜೂರಿ ವಯಲದಲ್ಲಿ 900 ಹೆಕ್ಟೇರ್‌ ಪ್ರದೇಶವಿದೆ. ಈ ಪೈಕಿ 450 ಹೆಕ್ಟೇರ್‌ ಈರುಳ್ಳಿ ಬೆಳೆಯನ್ನು ಖಜೂರಿ ಗ್ರಾಮವೊಂದರಲ್ಲೇ ಬೆಳೆಯಲಾಗುತ್ತಿದೆ. ವಲಯದ ತಡೋಳಾ ಗ್ರಾಮ 300 ಹೆಕ್ಟೇರ್‌, ಖಂಡಾಳ, ಜಮಗಾ ಕೆ., ರುದ್ರವಾಡಿ, ಜಮಗಾ ಆರ್‌. ಸೇರಿದಂತೆ ಇನ್ನಿತರ ಕಡೆಗಳಲ್ಲಿ 900 ಹೆಕ್ಟೇರ್‌ ಪ್ರದೇಶವಿದೆ. ಮಾದಹಿಪ್ಪರಗಾ ವಲಯದಲ್ಲಿ ಅಂಬೆವಾಡ, ಸಕ್ಕರಗಾ, ಕಿಣ್ಣಿ ಅಬ್ಟಾಸ, ಕಾಮನಳ್ಳಿ, ಸರಸಂಬಾ, ಸಾವಳೇಶ್ವರ ವಲಯದಲ್ಲಿ 250ರಿಂದ 300 ಹೆಕ್ಟೇರ್‌, ಆಳಂದ ವಲಯದ ಚಿಂಚೋಳಿ ಬಿ., ಪಡಸಾವಳಿ, ಚಿಂಚೋಳಿ ಕೆ.ಯಲ್ಲಿ ಒಟ್ಟು 100 ಹೆಕ್ಟೇರ್‌ ಇದೆ. ನಿಂಬರಗಾ, ನರೋಣಾ ಸೇರಿ 100 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗಿದೆ. ಪ್ರಚಲಿತ ತಳಿಗಳಲ್ಲಿ ಪಂಚಗಂಗಾ, ನಾಸಿಕ್‌ ರೇಡ್‌ ಹೀಗೆ ಸಾಂಪ್ರದಾಯಿಕ ತಳಿ ಹಾಗೂ ಹೊಸದಾಗಿ ಸೂಫರ್‌ಪ್ಲೇರ್‌, ಅರ್ಕಾಕಲ್ಯಾಣ ತಳಿಯ ಈರಳ್ಳಿ ಬೆಳೆಯಲಾಗುತ್ತಿದೆ. ಸರಾಸರಿ ಎಕರೆಗೆ 200 ಬ್ಯಾಗ್‌ (10 ಟನ್‌) ಉತ್ಪಾದನೆಗೆ ಮಾರುಕಟ್ಟೆ ದರ ಕಳೆದ ಡಿಸೆಂಬರ್‌ನಿಂದ ಇದುವರೆಗೂ ಸಾಧಾರಣ ಗಡ್ಡೆಗಳಿಗೆ ಕ್ವಿಂಟಲ್‌ವೊಂದಕ್ಕೆ ಎರಡು ಸಾವಿರ ರೂ.ದಿಂದ ಉತ್ತಮ ಗುಣಮಟ್ಟಕ್ಕೆ 3 ಸಾವಿರ ರೂ. ವರೆಗೂ ದೊರೆಯುತ್ತಿದೆ. ಹೀಗೆ ಪ್ರತಿ ಎಕರೆಗೆ 10ರಿಂದ 11 ಟನ್‌ ಉತ್ಪಾದನೆಯಾಗಿ ಗರಿಷ್ಠ 50 ಸಾವಿರ ರೂ. ಖರ್ಚಾದರೂ 1.50ರಿಂದ 2 ಲಕ್ಷ ರೂ. ವರೆಗೆ ಉಳಿಸಿಕೊಳ್ಳುತ್ತಿದ್ದಾರೆ.

ಮುಂಗಾರಿನಲ್ಲಿ ಮಳೆ ಅಧಿಕ ಪ್ರಮಾಣದಲ್ಲಿ ಸುರಿದ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆಯಲ್ಲಿ ಸಾಕಷ್ಟು ನಷ್ಟ ಉಂಟಾಗಿತ್ತು. ಇದರ ನಡುವೆ ಹಿಂಗಾರಿ ಫಸಲಿನಲ್ಲಿ ಆರ್ಥಿಕ ಲಾಭ ಹೊಂದಲಾಗಿದೆ. ಒಟ್ಟು ನಾಲ್ಕು ಸಾವಿರ ಮಂದಿ ಈರುಳ್ಳಿ ಬೆಳೆಯುವ ರೈತರಿದ್ದಾರೆ. ಬಹುತೇಕ ಜಿಲ್ಲೆಯಲ್ಲೇ ಖಜೂರಿ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲಿದ್ದಾರೆ. -ಶಂಕರಗೌಡ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಆಳಂದ

ಎಕರೆಯಲ್ಲಿ 195 ಮಡಿಗಳಾಗಿ ವಿಭಾಗಿಸುತ್ತಾರೆ. ಉತ್ತಮ ಇಳುವರಿ ಬಂದರೆ 50 ಕೆ.ಜಿ.ಯ ಪ್ಯಾಕೇಟ್‌ಗಳನ್ನು ಮಾಡುತ್ತಾರೆ. ಎಕರೆಗೆ ಸರಾಸರಿ 10 ಟನ್‌ ಈರಳ್ಳಿ ಉತ್ಪಾದನೆ ಆಗುತ್ತಿದೆ. ಸದ್ಯ 2,300ರಿಂದ 2,400ರ ವರೆಗೆ ಪ್ಯಾಕೇಟ್‌ ಗಳು ಮಾರಾಟವಾಗಿದೆ. ಟನ್‌ಗೆ 22 ಸಾವಿರ, 10ಟನ್‌ ಈರುಳ್ಳಿಗೆ ಎರಡು ಲಕ್ಷ ರೂ. ಬರುತ್ತಿದೆ. ಇದರಲ್ಲಿ 45 ಸಾವಿರ ರೂ. ಖರ್ಚು ತೆಗೆದರೆ, 1 ಲಕ್ಷ 55 ಸಾವಿರ ರೂ. ಉಳಿಯುತ್ತಿದೆ. -ವೈಜನಾಥ ತಡಕಲ್‌, ಈರುಳ್ಳಿ ಬೆಳೆಗಾರ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next