Advertisement

ಜನರ ಮೆಚ್ಚುಗೆಗೆ ಪಾತ್ರವಾಗಿದೆ ಗೃಹರಕ್ಷಕರ ಸೇವೆ

06:21 PM Nov 25, 2021 | Team Udayavani |

ಹಾವೇರಿ: ಸಮಾಜದಲ್ಲಿ ಶಾಂತಿ ಸ್ಥಾಪನೆ, ಕಾನೂನು ರಕ್ಷಣೆ, ನಾಗರಿಕರ ನೆಮ್ಮದಿಯ ಹಿನ್ನೆಲೆಯಲ್ಲಿ ಗೃಹರಕ್ಷಕರ ಸೇವೆ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠರು ಹಾಗೂ ಹೆಚ್ಚುವರಿ ಪೊಲೀಸ್‌ ಅಧಿಧೀಕ್ಷಕರಾದ ವಿಜಯಕುಮಾರ ಸಂತೋಷ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗೃಹರಕ್ಷಕರ ವೃತ್ತಿಪರ ಹಾಗೂ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಸ್ತಿನ ಶಿಪಾಯಿಯಂತೆ ಕರ್ತವ್ಯಗಳನ್ನು ನಿರ್ವಹಿಸಬೇಕು. ಇದರಿಂದ ಎಲ್ಲ ಗೃಹರಕ್ಷಕರಿಗೆ ಇನ್ನೂ ಹೆಚ್ಚಿನ ಕರ್ತವ್ಯಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಿ. ಆರ್‌.ಹಾವನೂರ ಅವರು, ಸಮಾಜದಲ್ಲಿ ಯಾವುದೇ ಪ್ರತಿಫಲ ಅಪೇಕ್ಷಿಸದೇ ನಿಸ್ವಾರ್ಥ ಸೇವೆ ನಿರ್ವಹಿಸುತ್ತಿರುವ ಗೃಹರಕ್ಷಕದಳದ ಕಾರ್ಯ ಶ್ಲಾಘನೀಯ
ಎಂದು ಬಣ್ಣಿಸಿದರು.

ಗೃಹರಕ್ಷಕದಳ ಇಲಾಖೆ 1962ರಲ್ಲಿ ಉದಯವಾಗಿ ಇಂದಿನವರೆಗೂ ಪೊಲೀಸ್‌ ಇಲಾಖೆಯೊಂದಿಗೆ ಸೇರಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೋವಿಡ್‌-19ರ ಸಮಯದಲ್ಲಿ ಗೃಹರಕ್ಷಕರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಕಾರಾಗೃಹ, ಜಿಲ್ಲಾ ಆಡಳಿತ ಭವನ, ಪ್ರಾದೇಶಿಕ ಸಾರಿಗೆ ಕಚೇರಿ, ಮರಳು ಗಣಿಗಾರಿಕೆ ಮತ್ತು ನ್ಯಾಯಾಲಯಗಳಲ್ಲಿ ಸಹ ಗೃಹರಕ್ಷಕರು ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕ್ರೀಡಾಕೂಟ ದಲ್ಲಿ ಭಾಗವಹಿಸಿದ್ದ ಗೃಹರಕ್ಷಕರಿಗೆ ಕ್ರೀಡಾಕೂಟದ ಪ್ರಮಾಣ ವಚನ ಬೋಧಿಸಲಾಯಿತು ಹಾಗೂ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹು ಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಗೃಹರಕ್ಷಕದಳ ಬ್ಯಾಡಗಿ ಘಟಕದ ಘಟಕಾಧಿಕಾರಿ ಎಂ.ಟಿ. ನಾಯಕ್‌, ಅಕ್ಕಿಆಲೂರ ಘಟಕಾಧಿಕಾರಿ ಸಿ.ಎಸ್‌. ಬೆಲ್ಲದ, ಎಲ್ಲಾ ಘಟಕದ ಘಟಕಾಧಿಕಾರಿಗಳು ಹಾಗೂ ಗೃಹರಕ್ಷಕರು, ಗೃಹರಕ್ಷಕಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next