ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿ ಸ್ಥಳ ಸೇವಾ ಸಂಕಲ್ಪ ತೊಡುವ ಸ್ಥಳವಾಗುತ್ತಿದೆ. ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಪುನೀತ್ ಅವರ ಸಮಾಜ ಸೇವಾ ಕಾರ್ಯಗಳಿಂದ “ಸ್ಫೂರ್ತಿ’ ಪಡೆದೂ ತಾವೂ ಅದೇ ರೀತಿ ಸಮಾಜಕ್ಕೆ ನೆರವಾಗಬೇಕು ಎಂಬ ಸಂಕಲ್ಪ ತೊಟ್ಟು ಬರುತ್ತಿದ್ದಾರೆ. ಪುನೀತ್ ಅವರ ನಿಧನದ ನಂತರ ಅವರ ಸೇವಾ ಕಾರ್ಯಗಳ ಬಗ್ಗೆ ತಿಳಿದ ಅಭಿಮಾನಿಗಳು, ಜನಸಾಮಾನ್ಯರು, ಚಿತ್ರರಂಗ ದವರು, ಉದ್ದಿಮೆಗಳು, ರಾಜಕಾರಣಿಗಳು ಹೀಗೆ ಎಲ್ಲ ವಲಯದವರೂ ಸಮಾಜಕ್ಕೆ ತಮ್ಮಿಂದಾದ ಸೇವೆ ಮಾಡುವ ಮನಸ್ಸು ಮಾಡುತ್ತಿದ್ದಾರೆ.
ನೇತ್ರದಾನ, ಅನಾಥ ಮಕ್ಕಳಿಗೆ ನೆರವು ಹೀಗೆ ಪುನೀತ್ ಅವರ ಸೇವೆ ಲಕ್ಷಾಂತರ ಮಂದಿಗೆ ಸ್ಪೂರ್ತಿದಾಯಕವಾಗಿದೆ. ಬಡವರ ಬಗೆಗಿನ ಮಿಡಿಯುವ ಪುನೀತ್ ಗುಣಗಳು ಅವರು ಇಹಲೋಕ ತ್ಯಜಿಸಿದರೂ ಅವರನ್ನು ಜೀವಂತವಾಗಿಟ್ಟಿವೆ. ಅಲ್ಲದೆ ಅಪ್ಪು ಅವರ ದಾನ ಹಾಗೂ ಸೇವೆ ಹಲವರಿಗೆ ಹಲವು ರೀತಿಯಲ್ಲಿ ಪ್ರೇರಣೆ ನೀಡಿವೆ. ಅಪ್ಪು ಸಾವಿನ ನಂತರ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದವರ ಜೀವನದಲ್ಲಿ ಬದಲಾವಣೆಯಾಗಿದೆ.
ಇದನ್ನೂ ಓದಿ:- ಭಜರಂಗಿಗೆ ಬಲ ತುಂಬಿದ ಶಿವಣ್ಣ
ಅಪ್ಪು ಅವರು ಮರಣದ ನಂತರ ಕಣ್ಣುದಾನ ಮಾಡಿದ್ದರು. ಅದು ಕೂಡ ಹಲವರಿಗೆ ಪ್ರೇರಣೆ ಆಗಿದೆ. ಅಧಿಕ ಸಂಖ್ಯೆಯಲ್ಲಿ ಜನರು ಕಣ್ಣುದಾನ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರು ಇಲ್ಲದವರಿಗೆ ಆಸೆರೆಯಾಗುವ ಹಾದಿ ತುಳಿದಿದ್ದಾರೆ. ಹೀಗಾಗಿ ಅಪ್ಪು ಅವರು ಸಾವನ್ನಪ್ಪಿದ್ದರೂ ಸಾವಿನ ನಂತರ ಅವರ ಉಪಕಾರ ಗುಣ ಹಲವರಲ್ಲಿ ಹಲವು ರೀತಿಯ ಬದಲಾವಣೆ ತಂದಿದೆ.
ಪುನೀತ್ ರಾಜ್‌ಕುಮಾರ್ ಅವರಲ್ಲಿರುವ ಈ ಮಾನ ವೀಯ ಗುಣದಿಂದಾಗಿಯೇ ಹಲವು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅವರು ಸಮಾಧಿ ಸ್ಥಳಕ್ಕೆ ಬಂದು ಹಲವು ರೀತಿಯ ಸಂಕಲ್ಪ ತೊಡುತ್ತಿದ್ದಾರೆ. ಪುನೀತ್ ಇಹಲೋಕ ತ್ಯಜಿಸಿ ಹದಿನೇಳು ದಿನ ಕಳೆದರೂ ಲಕ್ಷಾಂತರ ಮಂದಿ ನಿತ್ಯವೂ ಕಂಠೀರವ ಸ್ಟುಡಿಯೋ ಆವರಣಕ್ಕೆ ಬರುವುದು ನಿಂತಿಲ್ಲ. ದೂರದೂರುಗಳಿಂದ ಅಭಿಮಾನದೊಂದಿಗೆ ಬರುತ್ತಲೇ ಇದ್ದಾರೆ.
ಅಸಹಾಯಕರ ಸಂಕಷ್ಟಗಳಿಗೆ ಮಿಡಿಯುವ ಗುಣ ಅಪ್ಪು ಅವರದಾಗಿತ್ತು. ಬಡವರು ಇಲ್ಲದವರು ಎಂದರೆ ನಟ ಪುನೀತ್ ರಾಜ್‌ಕುಮಾರ್ ಅವರ ಹೃದಯ ಮರುಗುತ್ತಿತ್ತು. ನೆರವು ಕೋರಿ ಬಂದವರಿಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡಿ ಪ್ರಚಾರದಿಂದ ದೂರ ಉಳಿದಿದ್ದ ಮಾನವೀಯ ಗುಣ ಅವರದ್ದಾಗಿತ್ತು. ಹೀಗಾಗಿ ನಾಡಿನ ಅದೇಷ್ಟೋ ಮಂದಿ ಅಪ್ಪು ಅವರನ್ನು ಈಗಲೂ ಸ್ಮರಿಸುತ್ತಿದ್ದಾರೆ.
ಅನಾಥಮಕ್ಕಳಿಗೆ, ವೃದ್ಧಾಶ್ರಮಗಳಿಗೆ ಆಸರೆ ಆಗಿದ್ದ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ಸಹಾಯ ಧನ ನೀಡುವ ಮೂಲಕ ಹಲವು ಮಂದಿಯ ಬದುಕಿನಲ್ಲಿ ಬೆಳಕು ಮೂಡಿಸಿದ್ದ ಪುನೀತ್ ಕಿರಿಯ ವಯಸ್ಸಿನಲ್ಲೆ ಹಿರಿಯರಲ್ಲೆದೆ ನಾಡು ಮೆಚ್ಚುಗೆ ಕೆಲಸ ಮಾಡಿದ್ದಾರೆ. ಪ್ರಚಾರ ಬಯಸದೆ ಯಾರಿಗೂ ತಿಳಿಯದ ರೀತಿಯಲ್ಲಿ ಸಾವಿರೂರು ಮಂದಿಗೆ ಆಸರೆಯಾಗಿದ್ದರು. ಬದುಕು ಬೇಡ ಎಂದು ಕೊಂಡಿದ್ದವರಿಗೆ ಹೊಸಬದುಕಿನ ದಾರಿ ತೋರಿದ ವೃದ್ಧಾಶ್ರಮದ ಹಿರಿಯ ಚೇತನಗಳಿಗೆ ಉಸಿರಾಗಿದ್ದರು. ಬಲಗೈಯಲ್ಲಿ ಕೊಟ್ಟದ್ದ ಎಡಗೈಗೆ ಗೊತ್ತಾಗಬಾರದು ಎಂಬ ರೀತಿಯಲ್ಲೆ ಅಪ್ಪು ತಮ್ಮ ಉಪಕಾರ ಗುಣವನ್ನು ಮುಚ್ಚಿಟ್ಟಿದ್ದರು.
“ಕರ್ನಾಟಕ ಮಾತ್ರವಲ್ಲ, ನೆರೆಹೊರೆಯ ಚೆನ್ನೈ, ಹೈದ್ರಾಬಾದ್ ಒಳಗೊಂಡಂತೆ ಇತರೆ ರಾಜ್ಯಗಳಲ್ಲಿಯೂ ಅಪ್ಪುವಿನ ಸಮಾಜ ಕೆಲಸಗಳ ಬಗ್ಗೆ ಪ್ರೇರಣೆಗೊಂಡು, ತುಂಬಾ ಜನರು ನೇತ್ರದಾನ ಸೇರಿದಂತೆ ವಿವಿಧ ಸಮಾಜ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಗೆಳೆಯ ಪ್ರಸಾದ್ ಎಂಬುವವರು ಐದು ಸಾವಿರ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಫೌಂಡೇಶನ್ ರಚಿಸಿ, ವಿದ್ಯೆ ನೀಡಲು ಮುಂದಾಗಿದ್ದಾರೆ. ಇದಕ್ಕೆ ಪುನೀತ್ ಅವರೇ ಸ್ಫೂರ್ತಿ ಎಂದು ಹೇಳುತ್ತಾರೆ. ಈ ರೀತಿ ಅನೇಕ ಜನರು ಅವರಿಂದ ಪ್ರೇರಣೆ ಪಡೆದು, ಸಮಾಜಕ್ಕೆ ಏನಾದರೂ ಒಂದು ಕೊಡುಗೆ ಸಲ್ಲಿಸಬೇಕು ಎಂದು ನಿಂತಿರುವುದು ಸಂತಸದ ವಿಷಯವಾಗಿದೆ.”
– ಸಾಯಿ ಕುಮಾರ್, ಬಹುಭಾಷಾ ನಟ
ಸ್ಟುಡಿಯೋದತ್ತ ಹರಿದು ಬರುತ್ತಿರುವ ಜನ ಸಾಗರ
ಪುನೀತ್ ರಾಜ್ ಕುಮಾರ್ ನಿಧನಗೊಂಡು 15 ದಿನಗಳು ಕಳೆದರೂ, ಅವರ ದರ್ಶನ ಪಡೆಯುವ ಅಭಿಮಾನಿಗಳ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿಯ ಬಳಿ ಬಂದು ದರ್ಶನ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವಾರು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರಿಗೆ ಕೈಮುಗಿದು, ಹೂವಿನ ಹಾರಗಳನ್ನು ಅರ್ಪಿಸಿ, ಕೆಲವು ಸಂಕಲ್ಪಗಳನ್ನು ತೊಟ್ಟು ಹೋಗುತ್ತಿದ್ದಾರೆ.
ಕೆಲವರು ನೇತ್ರದಾನ ದಾನ ಮಾಡುವ ಸಂಕಲ್ಪ ತೊಟ್ಟರೆ ಮತ್ತೆ ಕೆಲವರು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ತೀರ್ಮಾನ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಪುನೀತ್ ಅವರ ಅಕಾಲಿಕ ಮರಣವು ರಾಜ್ಯದ ಜನತೆಯಲ್ಲಿ ಅನೇಕ ರೀತಿಯ ಧನಾತ್ಮಕ ಬದಲಾವಣೆಗಳನ್ನು ತಂದಿದೆ. ರಕ್ತದಾನ, ಬಡ ಮಕ್ಕಳಿಗೆ ಪುಸ್ತಕ ವಿತರಣೆ ಮತ್ತಿತರ ಕಾರ್ಯಗಳ ಮೂಲಕ ಸಹಾಯ ಹಸ್ತ ಚಾಚುತ್ತಿದ್ದಾರೆ.