Advertisement

ರಾಜಸ್ಥಾನ: ಆರು ಮಕ್ಕಳ ಬಾಲ್ಯ ವಿವಾಹ ತಪ್ಪಿಸಿದ ಹಾಲೆಂಡ್ ನ ಯುವತಿ

12:00 PM Oct 19, 2019 | Hari Prasad |

ಜೈಪುರ: ರಾಜಸ್ಥಾನದ ಥಾರ್ ಮರಭೂಮಿಗೆ ಹೊಂದಿಕೊಂಡಂತಿರುವ ಪುಷ್ಕರ್ ಎಂಬ ಊರಿನಲ್ಲಿ ತಮ್ಮ ಹೆತ್ತವರ ಮರ್ಜಿಯಿಂದಾಗಿ ಮದುವೆ ಅಂದರೇನೆಂದೇ ತಿಳಿಯದ ಆರು ಹೆಣ್ಣುಮಕ್ಕಳ ವಿವಾಹಕ್ಕೆ ಮುಹೂರ್ತ ಸಿದ್ಧವಾಗಿತ್ತು.  ಆದರೆ ಇನ್ನೇನು ಈ ಮದುವೆ ನಡೆದು ವಧು-ವರರ ರೂಪದಲ್ಲಿದ್ದ ಆ ಪುಟಾಣಿಗಳ ಕುತ್ತಿಗೆಗೆ ಹಾರ ಬೀಳಬೇಕು ಎಂಬಷ್ಟರಲ್ಲಿ ಅಲ್ಲಿಗೆ ಬಂದ ಹೆಣ್ಣುಮಗಳೊಬ್ಬಳು ಈ ಕಾನೂನುಬಾಹಿರ ಬಾಲ್ಯವಿವಾಹನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಹೀಗೆ ಆರು ಮಕ್ಕಳ ಭವಿಷ್ಯವನ್ನು ಉಳಿಸಿದ ಹೆಣ್ಣುಮಗಳು ನಮ್ಮ ದೇಶದವಳಲ್ಲ ಬದಲಾಗಿ ದೂರದ ಹಾಲೆಂಡ್‌ ನವಳೆಂಬುದೇ ವಿಶೇಷ.

Advertisement

ಏನಾಯ್ತು ಅಲ್ಲಿ?
ಹಾಲೆಂಡ್‌ ದೇಶದ ಪ್ರಜೆಯಾಗಿರುವ  ಜೈರಾ ಸೋನ ಚಿನ್‌ ಎಂಬವರು ಏಷ್ಯಾದ ಹಲವು ರಾಷ್ಟಗಳಲ್ಲಿ ತನ್ನ ಶೈಕ್ಷಣಿಕ ಅಧ್ಯಯನವನ್ನು ನಡೆಸುತ್ತಿದ್ದರು. ಇದಕ್ಕಾಗಿ ಭಾರತದಲ್ಲಿ ಅವರು ಆರಿಸಿಕೊಂಡಿದ್ದು ರಾಜಸ್ಥಾನವನ್ನು.

ಅಧ್ಯಯನದ ಉದ್ದೇಶಕ್ಕಾಗಿ ಜೈರಾ ಅವರು 2016ರಲ್ಲಿ ಮೊದಲ ಬಾರಿಗೆ ರಾಜಸ್ಥಾನಕ್ಕೆ ಆಗಮಿಸಿದ್ದರು. ಆ ವರ್ಷದಲ್ಲಿ ಒಟ್ಟು 16 ಬಾರಿ ರಾಜಸ್ಥಾನಕ್ಕೆ ಆಗಮಿಸಿದ್ದ ಜೈರಾ ಅವರು ಈ ಸಂದರ್ಭದಲ್ಲಿ ಇಲ್ಲಿನ ನ್ಯಾಟ್‌ ಸಮುದಾಯಕ್ಕೆ ಸೇರಿದ ಸುಮಾರು 40 ಮಕ್ಕಳು ಶಾಲೆಗೆ ತೆರಳದೇ ಮನೆಯಲ್ಲೇ ಇರುವುದನ್ನು ಜೈರಾ ಅವರು ಗಮನಿಸಿದ್ದಾರೆ.

ಬಳಿಕ ಅವರ ಶಿಕ್ಷಣ ವೆಚ್ಚಗಳನ್ನು ಸ್ವತಃ ಭರಿಸಿ ಈ ಶಾಲಾ ವಂಚಿತ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವಂತೆ ಮಾಡಿದ್ದರು. ಬಳಿಕ ತನ್ನ ಕೆಲಸ ಮುಗಿಸಿದ ಜೈರಾ ತನ್ನ ದೇಶಕ್ಕೆ ಹಿಂದಿರುಗಿದ್ದರು. ಶಿಕ್ಷಣದಿಂದ ವಂಚಿತ ವಿದ್ಯಾರ್ಥಿಗಳು ಹಾಗೂ ಅಶಕ್ತ ಮಕ್ಕಳ ಪರವಾಗಿ ಅಪಾರ ಕಾಳಜಿಯನ್ನು ಹೊಂದಿದ್ದ ಜೈರಾ ತನ್ನ ಅಧ್ಯಯನವನ್ನು ಒಂದು ಅಭಿಯಾನದ ರೂಪದಲ್ಲೇ ನಡೆಸುತ್ತಿದ್ದರು.

ಬಾಲ್ಯವಿವಾಹದ ಕುರಿತಾಗಿ ಗೆಳೆಯರಿಂದ ಸಿಕ್ಕಿತು ಮಾಹಿತಿ
2016ರಲ್ಲಿ ರಾಜಸ್ಥಾನಕ್ಕೆ ಸರಣಿ ಭೇಟಿ ನೀಡಿದ್ದ ಜೈರಾ ಅವರಿಗೆ ಪುಷ್ಟಕರ್‌ ನಲ್ಲಿ ಒಂದಷ್ಟು ಗೆಳೆಯರ ಪರಿಚಯವಾಗಿತ್ತು. ಹಾಲೆಂಡ್‌ ನ‌ಲ್ಲಿದ್ದರೂ ಪುಷ್ಕರ್ ಊರಿನ ನಂಟನ್ನು ಜೈರಾ ಬಿಟ್ಟಿರಲಿಲ್ಲ. ಹೀಗಿರುವಾಗ ಕಳೆದ ವಾರ ಜೈರಾ ಅವರಿಗೆ ಬಂದ ಒಂದು ಕರೆ ಪುಷ್ಕರ್ ನಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಮಾಹಿತಿಯನ್ನು ನೀಡಿದೆ. ವಿಷಯ ತಿಳಿದ ತಕ್ಷಣವೇ ಕಾರ್ಯಪ್ರವೃತ್ತವಾದ ಜೈರಾ ಅವರು ರಾಜಸ್ಥಾನಕ್ಕೆ ಬಂದು ಈ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆಯನ್ನು ಸ್ಥಳೀಯ ಪೊಲೀಸರ ಸಹಾಯದಿಂದ ತಡೆದಿದ್ದಾರೆ.

Advertisement

ಊರವರಿಗೆ ಹೆದರಿ ಸ್ಥಳೀಯರು ಪ್ರತಿಭಟಿಸಿರಲಿಲ್ಲ
ತಮ್ಮ ಊರಿನಲ್ಲಿ ಬಾಲ್ಯವಿವಾಹ ನಡೆಯುವುದು ಜೈರಾ ಅವರ ಸ್ನೇಹಿತರಿಗೆ ಮೊದಲೇ ಗೊತ್ತಿದ್ದರೂ, ನೇರವಾಗಿ ನಾವೇ ಪ್ರತಿಭಟಿಸಿದರೆ ನಾಳೆ ಊರ ಮುಖಂಡರ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ ನೇರವಾಗಿ ಜೈರಾ ಅವರಿಗೆ ಮಾಹಿತಿ ನೀಡಿದ್ದರು.

ಜೈರಾ ಕಣ್ಣಿಗೆ ನ್ಯಾಟ್‌ ಸಮುದಾಯ ಕಣ್ಣಿಗೆ ಬಿದ್ದ ಕಥೆ
2016ರಲ್ಲಿ ಪ್ರಥಮವಾಗಿ ರಾಜಸ್ಥಾನಕ್ಕೆ ಜೈರಾ ಅವರು, ತಮ್ಮ ಅಮ್ಮನ ಜತೆ ಬಂದಿದ್ದರು. ಈ ವೇಳೆ ಪುಟ್ಟ ಇಬ್ಬರು ಬಾಲಕರು ಭಿಕ್ಷಾಟನೆ ಮಾಡುತ್ತಿರುವುದು ಅವರ ಕಣ್ಣಿಗೆ ಬಿದ್ದಿದೆ. ಇದನ್ನು ಗಮನಿಸಿದ ಜೈರಾ ಮತ್ತು ಅವರ ಅಮ್ಮ ಆ ಮಕ್ಕಳ ಮನೆಗೆ ತೆರಳಿ ಅವರ ವಿಚಾರವನ್ನು ತಿಳಿದುಕೊಂಡಿದ್ದರು. ಆ ಮನೆಯಲ್ಲಿ ವಿದ್ಯುತ್ ಬಿಡಿ, ಕುಡಿಯಲು ಶುದ್ಧವಾದ ನೀರೂ ಸಹ ಇರಲಿಲ್ಲ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜೈರಾ ಮುಂದಿನ ಬಾರಿ ಭಾರತಕ್ಕೆ ಮರಳುವಾಗ ಈ ಸಮುದಾಯದ ಅಧ್ಯಯನ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದರು.

ರಾಜಸ್ಥಾನದ ನ್ಯಾಟ್‌ ಸಮುದಾಯದ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ ಜೈರಾ ಅವರಿಗೆ ಆ ಸಮುದಾಯದ ಮೂಲ ಸಮಸ್ಯೆಗಳು ಒಂದೊಂದಾಗಿ ತಿಳಿಯುತ್ತಾ ಹೋಯಿತು. ಇದೇ ಸಂದರ್ಭದಲ್ಲಿ ಅವರಿಗೆ ಈ ಸಮುದಾಯದ 40 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವ ವಿಚಾರವೂ ಗಮನಕ್ಕೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next