Advertisement

ಕಾಮಣ್ಣನ ಹಬ್ಬ; ವೈಭವ ಮರೆಯಾಗಿದೆ, ಆತಂಕ ಜೊತೆಯಾಗಿದೆ

09:12 AM Mar 05, 2020 | mahesh |

ಬಹುಶಃ ಈಗಿನ ಕಾಲದವರಿಗೆ ಕಾಮಣ್ಣನ ಹಬ್ಬ ಎಂದರೆ ಏನೆಂದು ತಿಳಿದಿರಲಿಕ್ಕಿಲ್ಲ. ನಮ್ಮ ಕಾಲದಲ್ಲಿ ಅದಕ್ಕೆ ಬಹಳ ಮಹತ್ವವಿತ್ತು. ಹುಡುಗರಂತೂ ಆ ಹಬ್ಬಕ್ಕಾಗಿ ಆತುರದಿಂದ ಕಾಯುತ್ತಿದ್ದರು!

Advertisement

ಹಬ್ಬದ ದಿನ ಗುಂಪುಗುಂಪಾಗಿ ಮನೆಮನೆಗೂ ಹೋಗಿ- “ಈ ರಾತ್ರಿ ಕಾಮಣ್ಣನನ್ನು ಸುಡಬೇಕು, ಕಟ್ಟಿಗೆ ಕೊಡಿ’ ಎಂದು ಕೇಳುತ್ತಿದ್ದರು. ಅದು ಪದ್ಧತಿ, “ಇಲ್ಲ’ ಎನ್ನುವ ಹಾಗಿಲ್ಲ. ಮನೆಯವರು ಬೈದುಕೊಂಡೇ ಕೊಡುತ್ತಿದ್ದರು. ಒಂದೆರಡು ಕಟ್ಟಿಗೆ ತುಂಡು ಕೊಟ್ಟು ಸಾಗಹಾಕಲು ನೋಡಿದರೆ ಒಪ್ಪುತ್ತಾರೆಯೇ ಆ ಫ‌ಟಿಂಗರು? “ಕಾಮಣ್ಣ ಕಟ್ಟಿಗೆ, ಭೀಮಣ್ಣ ಭರಣಿ’ ಎಂದು ರಾಗವಾಗಿ ಕೂಗಿಕೊಂಡು, ಮೆತ್ತಗೆ ಹಿಂದುಗಡೆ ನುಸುಳಿ, ಅಲ್ಲಿದ್ದ ಸೌದೆಗಳೊಂದಿಗೆ ಪರಾರಿ!

ಹುಡುಗರು ಇಂಥ ವರ್ತನೆಯಿಂದ ಸಿಟ್ಟಾದ ಆ ಜನರೂ ರಾತ್ರಿ ಕಾಮದಹನಕ್ಕೆ ಹಾಜರ್‌! ಅದಲ್ಲವೇ ತಮಾಶೆ? ಎಲ್ಲರೂ ದನಿಗೂಡಿಸುತ್ತಿದ್ದರು-“ಕಾಮಣ್ಣ ಕಟ್ಟಿಗೆ, ಭೀಮಣ್ಣ ಭರಣಿ’ ಎಂದು. ಆಕಾಶದವರೆಗೂ ಏರುತ್ತಿದ್ದ ಬೆಂಕಿಯು ಕಟ್ಟಿಗೆಗಳ ನಡುವೆ ನಿಲ್ಲಿಸಿದ್ದ ಕಾಮದೇವನನ್ನು ನುಂಗುತ್ತಿದ್ದರೆ, ಹುಡುಗರು ಚಪ್ಪಾಳೆ ತಟ್ಟುತ್ತಾ, ಹಾಡುತ್ತಾ, ಅದರ ಸುತ್ತ ಕುಣಿದದ್ದೂ ಕುಣಿದದ್ದೇ! ಒಂದೊಂದು ಸಲ, ರಾವಣನನ್ನೂ ಮಾಡಿ, ಅಗ್ನಿದೇವನಿಗೆ ಅರ್ಪಿಸಿಬಿಡುತ್ತಿದ್ದರು! ಬೆಳಗಿನ ಆಕ್ರೋಶವನ್ನು ಮರೆತು, ಹಿರಿಯರೂ ಸಂಭ್ರಮಿಸುತ್ತಿದ್ದರು.

“ನಮ್ಮನ್ಯಾಕೆ ಅಣ್ಣತಮ್ಮಂದಿರ ಜೊತೆ ಕಳಿಸೊಲ್ಲ? ನಾವು ಬರೀ ಹೋಳಿಗೆ ಮಾಡೋದಿಕ್ಕೆ ಮಾತ್ರ ಲಾಯಕ್ಕಾ?’ ಎಂದು ಬುಸುಗುಡುತ್ತಿದ್ದ, ಹೆಣ್ಣುಮಕ್ಕಳು ಹಿರಿಯರ ಮೇಲೆ ಪ್ರತೀಕಾರ ಎನ್ನುವಂತೆ ಗುಟ್ಟಾಗಿ ಆದಷ್ಟು ಕಟ್ಟಿಗೆಗಳನ್ನು ಸಾಗಿಸಿಬಿಡುತ್ತಿದ್ದರು!

ಈ ಕಾಮಣ್ಣ ದಹನದ ಹಿಂದೆ ಇರುವ ಕಥೆ ಇಷ್ಟೇ-ಪರಶಿವ ಅದೊಮ್ಮೆ ಉಗ್ರ ತಪಸ್ಸನ್ನು ಕೈಗೊಂಡಿದ್ದ. ಅದಕ್ಕೆ ಭಂಗ ತರಲು ನಿರ್ಧರಿಸಿದ ದೇವತೆಗಳು, ಮನ್ಮಥನ ಮೊರೆ ಹೋದರು. ಮನ್ಮಥನು, ಅಪ್ಸರೆಯರ ಸಹಾಯದಿಂದ ಶಿವನ ತಪಸ್ಸನ್ನೇನೋ ಭಂಗ ಮಾಡಿದ. ಆದರೆ, ಶಿವನ ಮೂರನೇ ಕಣ್ಣಿನ ಜ್ವಾಲೆಗೆ ಬೂದಿಯಾದ! ಆಗ ಮನ್ಮಥನ ಪತ್ನಿ ರತಿ ಬಹಳವಾಗಿ ಬೇಡಿಕೊಳ್ಳಲು, “ನಿನ್ನ ಪತಿ ಜೀವಿಸಲಿ. ಆದರೆ, ನಿನಗೆ ಮಾತ್ರ ಅವನು ಕಾಣುವಂತಾಗಲಿ’ ಎಂದು ಶಿವ ವರ ಕೊಟ್ಟ. ಅದಕ್ಕೇ ಮನ್ಮಥನಿಗೆ ಅನಂಗ (ಆಕೃತಿ ಇಲ್ಲದವನು) ಎಂಬ ಹೆಸರು ಬಂತು.

Advertisement

ಕಾಮನೆಗಳ ಪ್ರತೀಕವಾದ ಮನ್ಮಥ ಇಂದಿಗೂ ಎಲ್ಲರನ್ನೂ ತನ್ನ ಆಕರ್ಷಣಾ ಶಕ್ತಿಯಿಂದ ಆವರಿಸುತ್ತಾನೆ. ಆದರೆ, ನಾವು ಮನೋಬಲದಿಂದ ಆ ಕಾಮನೆಗಳೆಲ್ಲವನ್ನೂ ಭಸ್ಮಮಾಡಬೇಕೆಂಬುದೇ ಆ ದಿನದ ಸಂಕೇತ. ಅದುವೇ ಕಾಮಣ್ಣನ ಹಬ್ಬ/ ಹೋಳಿ ಹಬ್ಬದ ಹಿಂದಿನ ಕತೆ.

ಆದರೆ, ಈಗ ಹಬ್ಬದ ಹಿಂದಿನ ಮಹತ್ವವನ್ನು ಅರಿತು, ಅರ್ಥಪೂರ್ಣವಾಗಿ ಆಚರಿಸುವವರೇ ಇಲ್ಲ. ಒಬ್ಬರಿಗೊಬ್ಬರು ಬಣ್ಣ ಎರಚಿ, ಸಿಹಿತಿಂಡಿ ಹಂಚಿ ಖುಷಿ ಪಡುವ ಹಬ್ಬದ ಮೂಲ ಆಚರಣೆ ಮರೆಯಾಗಿ, ಆ ದಿನ ಹೊರಗೆ ಹೋಗುವುದೇ ಕಷ್ಟ ಎಂಬಂತಾಗಿದೆ. ಬಣ್ಣ ತುಂಬಿದ ಪಿಚಕಾರಿ ಹಿಡಿದು, ಕಂಡಕಂಡವರ ಮೇಲೆಲ್ಲಾ ಬಣ್ಣವೆರಚಿ, ನೀರು ಪೋಲು ಮಾಡಿ, ತಲೆ ಮೇಲೆ ಮೊಟ್ಟೆ ಒಡೆಯುವುದೇ ಹಬ್ಬ ಎಂಬಂತಾಗಿರುವುದು ವಿಷಾದನೀಯ.

-ನುಗ್ಗೆಹಳ್ಳಿಪಂಕಜ

Advertisement

Udayavani is now on Telegram. Click here to join our channel and stay updated with the latest news.

Next