ಮೂಲ್ಕಿ: ಇಂದಿನ ಪೀಳಿಗೆಯಲ್ಲಿ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಕಡಿಮೆ ಇದೆ.ವಿವಿಧ ಯೋಜನೆಗಳ ಮೂಲಕ ಆಸಕ್ತಿ ವೃದ್ಧಿಸುವ ಕೆಲಸ ಆಗಬೇಕಾಗಿದೆ ಎಂದು ಸಾಹಿತಿ ಸಂಶೋದಕಿ ಡಾ|ಇಂದಿರಾ ಹೆಗ್ಡೆ ಹೇಳಿದರು.
ಅವರು ಮೂಲ್ಕಿ ಬಂಟರ ಸಂಘದ ಸಭಾ ಭವನದಲ್ಲಿ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಮತ್ತು ಕರ್ನಾಟಕ ರಾಜ್ಯ ಇತಿಹಾಸ ಅಕಾಡೆಮಿ ಬೆಂಗಳೂರು ಮತ್ತು ಬಂಟರ ಸಂಘ ಮೂಲ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಬಪ್ಪನಾಡು ಮತ್ತು ಅಗೋಳಿ ಮಂಜಣ್ಣ ಇತಿಹಾಸ ಶೋಧ ಎಂಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಗೋಳಿ ಮಂಜಣ್ಣ ಒಬ್ಬ ಅಸಾಮಾನ್ಯ ವ್ಯಕ್ತಿತ್ವದ ಸಾಹಸಿಗ ಎಂಬುವುದಕ್ಕೆ ಎರ್ಮಾಳು, ಮೂಲ್ಕಿ ಅರಸರ ಬಳಿ ಮತ್ತು ಬಪ್ಪನಾಡು ದೇವಸ್ಥಾನದ ಪರಿಸರದಲ್ಲಿ ಕಣ್ಣಿಗೆ ಕಾಣುವ ದಾಖಲೆಗಳು ಬಹಳಷ್ಟು ಇವೆ. ಇದರಲ್ಲಿ ಆತ ಎರ್ಮಾಳಿಂದ ತಂದಿರುವ ದಂಬೆ ಕಲ್ಲು ಈಗಲೂ ಮುಖ್ಯವಾಗಿದೆ. ಮುಂದಿನ ಜನಾಂಗ ಇತಿಹಾಸದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಅಗೋಳಿ ಮಂಜಣ್ಣ ಮೂಲ್ಕಿ ಸೀಮೆಗೆ ಒಬ್ಬ ಕಾರಣಿಕ ಶಕ್ತಿಯಾಗಿ ಗುರುತಿಸಿಕೊಂಡ ವ್ಯಕ್ತಿ. ಈ ಬಗ್ಗೆ ಸಂಶೋಧನೆ ಮತ್ತು ದಾಖಲೆಗಳು ತಯಾರಾಗಬೇಕು ಮಾಗಣೆಯ ಕಾಂತಾಬಾರೆಯರ ಮಾದರಿಯಲ್ಲಿ ಅಗೋಳಿ ಮಂಜಣ್ಣನಿಗೂ ಪ್ರಚಾರ ಸಿಗುವ ಯೋಜನೆಗಳು ನಮಗಾಗಿ ಆಗಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ಬಪ್ಪನಾಡು ದೇವಸ್ಥಾನದ ಧ್ವಜಸ್ತಂಭದ ದಂಬೆ ಕಲ್ಲು ಅಗೋಳಿ ಮಂಜಣ್ಣ ತಂದಿರುವ ದಾಖಲೆ ಇದೆ . ಧ್ವಜಸ್ತಂಭಕ್ಕೆ ಬೆಳ್ಳಿ ಹೊದಿಕೆ ಮಾಡುವಾಗ ದಂಬೆ ಕಲ್ಲಿಗೆ ಬೆಳ್ಳಿ ಹೊದಿಕೆ ಮಾಡುವ ಪ್ರಸ್ತಾವನೆಯನ್ನು ಕಲ್ಲು ದಾಖಲೆಯಾಗಿ ಕಾಣಬೇಕು ಎಂದು ಉದ್ದೇಶದಿಂದ ಆಡಳಿತದಿಂದ ಹೊದಿಕೆ ಮಾಡಲಾಗಿಲ್ಲ ಎಂದು ತಿಳಿಸಿದರು.
ಶಿಕ್ಷಣ ಕೇತ್ರದಲ್ಲಿ ಸಾಧನೆಗೈದ ಅಕ್ಷತಾ ಚೇಳಾರ್ ಮತ್ತು ಸುಪ್ರೀತ್ ಎರ್ಮಾಳ್ ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಸಮಾಜ ಸೇವಕ ದಿವಾಕರ ಸಾಮಾನಿ, ಡಾ| ಬಿ. ಜಗದೀಶ್ ಶೆಟ್ಟಿ, ಇತಿಹಾಸ ತಜ್ಞ ನಿತ್ಯಾನಂದ ಶೆಟ್ಟಿ ಮುಂತಾದವರು ಅತಿಥಿಗಳಾಗಿದ್ದರು. ಸಾಹಿತಿ ಜ್ಯೋತಿ ಚೇಳಾಯಾರು ಸ್ವಾಗತಿಸಿದರು. ಮಲ್ಲಿಕಾ ಶೆಟ್ಟಿ ನಿರೂಪಿಸಿದರು.