ಆ ದಿನದ ಬೆಳಗು ಬಹು ಬೇಗನೇ ಆಗುತ್ತಿತ್ತು. “ಅಮ್ಮಾ, ತಿಂಡಿ ಕೊಡು, ಬೇಗ ಶಾಲೆಗೆ ಹೋಗಬೇಕಿಂದು’ ಎಂಬ ಅವಸರ. “ಇನ್ನೂ ಗಂಟೆಯಾಗಿಲ್ಲ’ ಎಂದು ಅಮ್ಮ ನಿಧಾನ ಮಾಡಿದರೆ ಖಾಲಿ ಹೊಟ್ಟೆಯಲ್ಲೇ ಶಾಲೆಗೆ ನಡೆದುಬಿಡುವಂಥ ಧಾವಂತವಿತ್ತು ಆ ದಿನ. ದಿನಕ್ಕೊಂದು ಬೆಂಚಿನವರು ಕ್ಲಾಸ್ ರೂಮ್ ಗುಡಿಸಬೇಕಿತ್ತು. ಅದರಲ್ಲೇನಿದೆ? ಹೋಗುವುದು ಕಸಬರಿಕೆ ತೆಗೆದುಕೊಂಡು ಗುಡಿಸುವುದು ಎಂದರಾಯಿತೆ? ಹಾಗಿರಲಿಲ್ಲ ಅದು. ಆ ಗುಡಿಸುವಿಕೆಯ ಆರಂಭ ಮನೆಯಿಂದ ಹೊರಡುವಾಗಲೇ ಆಗುತ್ತಿತ್ತು. ನಡೆಯುವ ದಾರಿಯ ಇಕ್ಕೆಲಗಳಲ್ಲೂ ಅಗಲವಾಗಿ ಚಾಮರದಂತೆ ಹರಡಿದ ಒಂದು ಹಸಿರು ಗಿಡವನ್ನು ಕಿತ್ತುಕೊಳ್ಳಬೇಕಿತ್ತು. ಅದು ಮುಷ್ಟಿ ತುಂಬುತ್ತಲೇ ಅದಕ್ಕೊಂದು ಗಂಟು ಹಾಕಿ ವಿಜಯಪತಾಕೆಯಂತೆ ಕೈಯಲ್ಲಿ ಹಿಡಿದು ನಡೆದು ಶಾಲೆ ಸೇರುತ್ತಿದ್ದೆವು. ಪ್ರತಿ ಬೆಂಚು-ಡೆಸ್ಕಾಗಳ ಕೆಳಭಾಗ ಗುಡಿಸಬೇಕಿತ್ತು. ಆದರಲ್ಲಿ ಕಸ ಸಿಕ್ಕಬಾರದು. ಒಂದು ವೇಳೆ ಕಸ ಸಿಕ್ಕಿದರೆ ಅದು ಯಾವ ಬೆಂಚಿನವರದ್ದು ಎಂದು ಉಪಾಧ್ಯಾಯರಿಗೆ ದೂರು ಸಲ್ಲಿಸುತ್ತಿದ್ದೆವು. ಆ ಕಸವನ್ನು ಯಾರು ಬಿಸಾಡಿದ್ದಾರೋ ಅವರೇ ಕೈಯಾರೆ ತೆಗೆದು ಬಿಸುಡಬೇಕಿತ್ತು. ಯಾರೋ ಗುಡಿಸುತ್ತಾರೆ ಎಂದು ನಾವು ಕಸ ಹಾಕಬಾರದು ಎಂದು ಕಲಿತದ್ದೇ ಆಗ.
ಆಕೆಯೊಬ್ಬಳಿದ್ದಳು. ಕೃಶಜೀವ. ಬಾಗಿದ ಸೊಂಟ. ಆಕೆ ಪಕ್ಕದಲ್ಲೇ ಇರುವ ಉಳ್ಳವರ ಮನೆಗೆ ಕಸಗುಡಿಸುವ ಕೆಲಸಕ್ಕೆಂದು ಹೋಗುತ್ತಿದ್ದಳು. ಇವಳಿಗೆ ಅಂಗಳದ ಕಸ ಗುಡಿಸುವ ಕೆಲಸ. ಅಂಗಳದ ಸುತ್ತಲಿನ ದೈತ್ಯ ಗಾತ್ರದ ಮರಗಳು ಬೀಳಿಸುವ ಹಳದಿ ಎಲೆಗಳು ಗಾಳಿಗೆ ಹಾರಿ ಅಂಗಳ ಸೇರಿ ಕಸವೆಂದು ಹೆಸರು ಹೊರುತ್ತಿದ್ದವು. ಕಸವೆಂದಾದ ಮೇಲೆ ಗುಡಿಸಬೇಕು ತಾನೇ. ಆಕೆ ಗುಡಿಸಿ ಗುಡಿಸಿ ಹೊರ ಹಾಕುತ್ತಿದ್ದಳು. ತನ್ನ ಸೊಂಟ ಬಗ್ಗಿರುವುದೇ ಕಸ ಗುಡಿಸಲು ಅನುಕೂಲ ಎಂದು ಆಕೆ ಅಂದುಕೊಂಡಿದ್ದಳು. ಪ್ರತಿಸಲ ಗುಡಿಸುವಾಗಲೂ ಸುತ್ತಮುತ್ತಿನ ಮರಗಳನ್ನು ನೋಡಿ ಏನೋ ಅಸ್ಪಷ್ಟವಾಗಿ ಗೊಣಗುತ್ತಿದ್ದಳು. ಮನೆಯ ಯಜಮಾನಿ ಪ್ರತಿನಿತ್ಯವೂ ಈಕೆ ಮರಗಳಿಗೆ ಶಾಪ ಹಾಕುತ್ತಾಳೆ ಎಂದುಕೊಂಡಿದ್ದಳು.
ಅದೊಂದು ದಿನ ಮನೆಯ ಯಜಮಾನಿ ನಗುತ್ತ, “”ನಿನಗೊಂದು ಶುಭ ಸುದ್ದಿ ಹೇಳುತ್ತೇನೆ ಕೇಳು, ನಾವು ಇಲ್ಲಿ ಸುತ್ತಮುತ್ತ ಇರುವ ದೊಡ್ಡಗಾತ್ರದ ಮರಗಳನ್ನೆಲ್ಲ ಕಡಿಸುತ್ತಿದ್ದೇವೆ. ನಿನಗಿನ್ನು ಅಂಗಳ ಗುಡಿಸುವಾಗ ಎಲೆಗಳ ಉಪಟಳವಿಲ್ಲ” ಎಂದಳು.
ಆ ಸುದ್ದಿ ಕೇಳಿದೊಡನೆ ನಗುವಿನಿಂದ ಅರಳಬೇಕಿದ್ದ ಅವಳ ಕಣ್ಣುಗಳು ದುಃಖದಿಂದ ಹನಿಯೊಡೆದವು. ಮನೆಯ ಯಜಮಾನಿಗೆ ಇದನ್ನು ನೋಡಿ ಅಚ್ಚರಿಯೆನಿಸಿತು. ಆಕೆಯ ನೋವಿಗೆ ಕಾರಣ ಕೇಳಿದಳು. “”ಈ ಮರಗಳು ಎಲೆಯುದುರಿಸುವುದರಿಂದಾಗಿಯೇ ನನ್ನ ದುಡಿಮೆಯ ಅಗತ್ಯ ನಿಮಗಿದೆ. ಅದಿಲ್ಲವೆಂದಲ್ಲಿ ನನಗೇನಿದೆ ಕೆಲಸ. ದಿನನಿತ್ಯ ನಾನು ಇವುಗಳೊಡನೆ ಕೇಳಿಕೊಳ್ಳುತ್ತಿದ್ದೆ. ನೀವಿರುವ ತನಕ ಮಾತ್ರ ನಾನು. ನೀವಿರುವಾಗಲೇ ನನ್ನನ್ನೂ ನಿಮ್ಮ ಹಾಗೇ ಉದುರಿಸಿಬಿಡಿ, ಆದರಿಂದು ನನ್ನ ಅನ್ನದ ಮೂಲವೇ ಮರೆಯಾಗುತ್ತಿದೆ” ಎಂದ ಆಕೆಯ ಬೆನ್ನು ಬಾಗುತ್ತ ನೆಲಮುಟ್ಟಿ ನೆಲದೊಳಗೇ ಇಳಿದು ಹೋಯಿತು.
ದೊಡ್ಡಜ್ಜಿ ಮನೆಕೆಲಸವೆಲ್ಲ ಮುಗಿಸಿ ಕತ್ತಿ ಹಿಡಿದುಕೊಂಡು ತೋಟಕ್ಕೆ ನಡೆದಳೆಂದರೆ ನಮ್ಮ ಸೈನ್ಯವೂ ಅವಳ ಹಿಂದೆಯೇ. ಆಗಷ್ಟೇ ಬಿದ್ದ ತೆಂಗಿನ ಮಡಲನ್ನು ಹಿಡಿದು ಕತ್ತಿಯಲ್ಲಿ ಒಮ್ಮೆಗೆ ಎಳೆದಳೆಂದರೆ ಅದರ ಗರಿಗಳೆಲ್ಲ ಕೆಳಗೆ. ಬಿದ್ದ ಅಷ್ಟೂ ಗರಿಗಳನ್ನು ಕಟ್ಟು ಕಟ್ಟಿ ಮನೆಗೆ ತಂದು ಸ್ವಲ್ಪ ಹೊತ್ತು ನೀರು ಹನಿಸಿ ನೆರಳಲ್ಲಿ ಇಟ್ಟುಬಿಡುತ್ತಿದ್ದಳು. ಸಂಜೆಯಾದಾಗ ಅಂಗಳದ ಮೂಲೆಯಲ್ಲಿರುವ ಮಣ್ಣಿನ ದಿಬ್ಬದಲ್ಲಿ ಕಾಲು ಚಾಚಿ ಕುಳಿತು, “”ನೋಡುವಾ, ಆ ಮಡಲಿನ ಕಟ್ಟು ತನ್ನಿ ಮಕ್ಕಳೇ” ಎನ್ನುತ್ತಿದ್ದಳು. ಅಜ್ಜಿ ತರುವಾಗ ಹಗುರವಾಗಿದ್ದ ಗರಿಗಳೀಗ ಒದ್ದೆಯಾಗಿ ತೂಕ ಪಡೆದುಕೊಂಡಿರುತ್ತಿದ್ದವು. ಹಾಗೆಂದು ಅವುಗಳನ್ನು ನೆಲದಲ್ಲಿ ಎಳೆದುಕೊಂಡು ಬಂದರೆ ಅಜ್ಜಿಯ ಕೆಂಡದಂಥ ಕೋಪಕ್ಕೆ ಗುರಿಯಾಗಬೇಕಿತ್ತು. ಅದೇನೋ ಮಹಾರಾಜನ ಖಜಾನೆಯಿರಬಹುದು ಎಂಬಷ್ಟು ಮರ್ಯಾದೆಯಿಂದ ಹೊತ್ತು ತಂದು ಅದನ್ನು ಅಜ್ಜಿಯ ಪಕ್ಕದಲ್ಲಿಡಬೇಕಿತ್ತು. ಒಂದೊಂದಾಗಿ ಗರಿ ತೆಗೆದುಕೊಂಡು ಅದರ ಎರಡೂ ಪಕ್ಕದಲ್ಲಿರುವ ಎಲೆಯ ಭಾಗವನ್ನು ಹರಿತವಾದ ಚೂರಿಯ ಸಹಾಯದಿಂದ ಎಳೆದು ತೆಗೆದುಬಿಡುತ್ತಿದ್ದಳು. ಉದ್ದದ ಕಡ್ಡಿ ಒಂದು ಪಕ್ಕಕ್ಕೆ ಬೀಳುತ್ತಿತ್ತು. ಕೈಯ ಹಿಡಿಕೆಯೊಳಗೆ ನಿಲ್ಲುವಷ್ಟು ಕಡ್ಡಿಗಳಾದಾಗ ಅದಕ್ಕೊಂದು ಗಂಟು ಬಿಗಿದು ಮರುದಿನ ಬಿಸಿಲು ಬೀಳುವ ಜಾಗದಲ್ಲಿ ಪೇರಿಸಿಡಲಾಗುತ್ತಿತ್ತು. ಒಣಗಿದ ಮೇಲೆ ಅದರ ಹಿಂಭಾಗವನ್ನು ಒಂದೇ ಸಮವಾಗಿ ಬರುವಂತೆ ಹಿಡಿದು ಕತ್ತರಿಸಿ ಅದಕ್ಕೆ ಗಟ್ಟಿ ಹಗ್ಗದಿಂದ ಬಿಗಿದರೆ ಹಿಡಿಸೂಡಿ ಸಿದ್ಧ. ಹಿಡಿಸೂಡಿಯ ಗಂಟು ಮತ್ತು ಸಂಬಂಧಗಳ ನಂಟು ಒಂದೇ ಬಗೆಯದ್ದು ಎನ್ನುತ್ತಿದ್ದಳಜ್ಜಿ. ಎಲ್ಲೋ ಅಜಾಗರೂಕತೆಯಿಂದ ಸಡಿಲಗೊಂಡರೆ ಎಲ್ಲವೂ ಕಳಚಿ ಬೀಳುವ ಭಯವಂತೆ.
ಈ ಹಿಡಿಸೂಡಿಗಳು ಹೊಸದರಲ್ಲಿ ಮನೆಯೊಳಗಿನ ಕಸ ಗುಡಿಸಿದರೆ, ಅವುಗಳ ನಾಜೂಕುತನ ಕಳೆದುಕೊಂಡ ಮೇಲೆ ಅಂಗಳಕ್ಕೆ ಇಳಿಯುತ್ತಿದ್ದವು. ಮತ್ತೂ ಸಣ್ಣವಾದರೆ ಬಚ್ಚಲು ತೊಳೆಯಲು, ಕೊನೆಗೊಮ್ಮೆ ಮನೆಯ ಹೊರಭಾಗದ ಮೂಲೆಯಲ್ಲಿ ಸ್ವಲ್ಪ ಸಮಯ ಇದ್ದು, ತಾವೇ ತಾವಾಗಿ ಕುಂಬು ಹಿಡಿದು ಮಣ್ಣಾಗುತ್ತಿದ್ದವೇ ವಿನಃ ಮನೆಯವರಿಂದ ಬಿಸುಡಲ್ಪಡುತ್ತಿರಲಿಲ್ಲ. ಮೃದುವಾದ ಹಿಡಿಸೂಡಿ ಬೇಕಾದರೆ ಅಡಿಕೆ ಮರದ ಸೋಗೆಗಳ ಕಡ್ಡಿಗಳೂ ಇದ್ದವಲ್ಲ.
“ಉಹೂಂ, ಅವನು ಗುಡಿಸಲೇಬಾರದು’ ಎಂದು ಅಜ್ಜಿ ಹಠ ಹಿಡಿದು ಕುಳಿತುಬಿಟ್ಟಿದ್ದಳೊಂದು ದಿನ. ಮೊಮ್ಮಗ ಹಿಡಿಸೂಡಿ ಮುಟ್ಟಿದರೆ ಮೀಸೆ ಮೂಡಲಾರದು ಎಂಬ ಹೆದರಿಸುವಿಕೆ ಬೇರೆ. ಅದೇ ಮೊಮ್ಮಗ ದೊಡ್ಡವನಾಗಿ, ಅಜ್ಜಿಯನ್ನು ತನ್ನ ಮನೆಗೆ ಕರೆದೊಯ್ದಿದ್ದ. ಆತನ ಹೆಂಡತಿ ಸೂರ್ಯ ಮೂಡುವ ಮೊದಲೇ ಮನೆಬಿಟ್ಟರೆ, ಮೊಮ್ಮಗ ಮತ್ತಷ್ಟು ಹೊತ್ತು ಮಲಗಿ ನಿಧಾನಕ್ಕೆ ಕಸಬರಿಕೆ ಹಿಡಿದು ಮನೆ ಗುಡಿಸಿಯೇ ಸ್ನಾನಕ್ಕೆ ಹೋಗುತ್ತಿದ್ದ. ಮಧ್ಯಾಹ್ನ ಮೇಲೆ ಮನೆಗೆ ಬಂದವನ ಪತ್ನಿ ಮನೆ ಒರೆಸಿದರೆ ಇವನಾಗಲೇ ರಾತ್ರೆಯ ಕೆಲಸಕ್ಕೆ ಹೋಗಲು ಬ್ಯಾಗೇರಿಸಿಯಾಗುತ್ತಿತ್ತು. ಅಜ್ಜಿಗೆ ಮೊದಲ ಸಲ ತನ್ನ ಮನ ದೊಳಗಿನ ಕಸವನ್ನು ಯಾರೋ ಗುಡಿಸಿ ಹೊರಹಾಕಿದ ಅನುಭವ.
ಕಸ ಒಳಗಿನದೋ, ಹೊರಗಿನದೋ, ಗುಡಿಸುವ ನಾಜೂಕಿನ ಹಿಡಿಸೂಡಿ ನಮ್ಮಲ್ಲಿರಬೇಕು.
ಅನಿತಾ ನರೇಶ ಮಂಚಿ