Advertisement
“ಕೆಲಹಿತ್ತಲ ಗಿಡ ಮದ್ದಲ್ಲ ‘ಎಂಬ ಗಾದೆ ಮಾತನ್ನು ಕೇಳಿಕೊಂಡೇ ಬೆಳೆದವರು ನಾವು, ಅದರಂತೇ ವರ್ತಿಸುತ್ತೇವೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಇಲ್ಲಿದೆ. ಪೊಸಡಿಗುಂಪೆ ಎಂಬ ಚಾರಣ ಪ್ರದೇಶಕ್ಕೆ ನಮ್ಮ ಮನೆಯಿಂದ ಇರುವುದು ಕೇವಲ ಕಿಲೋಮೀಟರ್ ದೂರವಷ್ಟೇ. ಗಾಳಿಪಟ ಉತ್ಸವದಂತಹ ಕೆಲವು ಕಾರ್ಯಕ್ರಮಗಳು ಇಲ್ಲಿ ಸತತವಾಗಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದರೂ ನಾವು ಇಷ್ಟರವರೆಗೆ ಅಲ್ಲಿ ಭೇಟಿ ನೀಡಲಿಲ್ಲವೆಂಬುದೇ ವಿಪರ್ಯಾಸ. ಕೆಲಸದ ಒತ್ತಡದ ಮಧ್ಯೆ ಒಂದೆರಡು ದಿನಗಳ ರಜೆಯಲ್ಲಿ ಮನೆಗೆ ಹೋಗಿದ್ದೆ. ಅಂದು ರವಿವಾರವಾದ್ದರಿಂದ ಅಣ್ಣ ಮನೆಯಲ್ಲೇ ಇದ್ದ. ಬೆಳಗ್ಗೆಯಿಂದಲೇ ಪೊಸಡಿಗುಂಪೆ ರಾಗ ಶುರು ಮಾಡಿದ್ದೆ. ಅವನನ್ನು ಒಪ್ಪಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲದ್ದರಿಂದ ನಡುವೆಯೇ ನನ್ನ ತಂಗಿಗೆ ಫೋನು ಹಾಯಿಸಿದೆ. ಅವಳೂ ಒಪ್ಪಿದಳು. ಜತೆಗೆ ಅವಳ ಕಸಿನ್ಸ್ ಬರುತ್ತಾರೆಂಬ ಭರವಸೆ ಸಿಕ್ಕಿತು. ಅಂತೂ ಇಂತೂ ಮನೆಯವರನ್ನೊಪ್ಪಿಸಿ ಪೊಸಡಿಗುಂಪೆಗೆ ತಲುಪುವಾಗ ಗಂಟೆ ಮೂರಾಗಿತ್ತು.Related Articles
Advertisement
ಒತ್ತಡದ ಮಧ್ಯೆ ಮನಸ್ಸಿಗೆ ಒಂದಿಷ್ಟು ಸಮಾಧಾನ ಬೇಕಾದರೆ ಇಲ್ಲಿಗೆ ಬರಬಹುದು.
ಇದು ಕೇವಲ ಗುಡ್ಡವಲ್ಲ. ಚಾರಣಕ್ಕೆ ಹೇಳಿ ಮಾಡಿಸಿದ ಪ್ರದೇಶ. ಮೊಬೈಲ್, ವಾಟ್ಸಾಪ್‌ಗ್ಳಿಂದ ಸ್ವಲ್ಪ ಹೊತ್ತು ದೂರ ಉಳಿದರೆ ಇಲ್ಲಿನ ಪ್ರಕೃತಿ ಕಣ್ಣಿಗೆ ಗೋಚರವಾಗುತ್ತದೆ. ಸುತ್ತಲೂ ಹಬ್ಬಿ ನಿಂತಿರುವ ಮರಗಿಡಗಳು, ಆಕಾಶವನ್ನು ಮುಟ್ಟುವಂತೆ ಭಾಸವಾಗುತ್ತಿರುವ ಬೆಟ್ಟಗಳು, ನಿರ್ಮಲವಾದ ಗಾಳಿ ಹೀಗೆ ಆನಂದಿಸಲು ಹಲವಾರು ವಿಷಯಗಳಿವೆ. ಮಳೆಗಾಲದಲ್ಲಿ ಯಾವ ಹೊತ್ತಿನಲ್ಲಿ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ತುಂತುರು ಮಳೆ ಇದ್ದರಂತೂ ಹೇಳುವುದೇ ಬೇಡ ಅದ್ಭುತವಾದ ಆನಂದ. ಬೇಸಗೆಯಲ್ಲಿ ಸಂಜೆ ಭೇಟಿ ನೀಡುವುದು ಉತ್ತಮ. ಬಿಸಿಲಿನ ತೀಕ್ಷ್ಣತೆ ಗುಂಪೆಯ ಮೇಲೆ ಅಧಿಕವಾಗಿರುತ್ತದೆ. ಅರಬ್ಬೀ ಸಮುದ್ರ ಹಾಗೂ ಕುದುರೆಮುಖ ಗಿರಿಧಾಮಗಳು ಇಲ್ಲಿ ನಿಂತರೆ ಕಣ್ಣಿಗೆ ಗೋಚರವಾಗುತ್ತವೆ. ಹಾಗೇ ಒಂದಷ್ಟು ಹರಟೆ, ಫೋಟೋಗಳು ಮುಗಿದು ಬೆಟ್ಟದಲ್ಲೆಲ್ಲಾ ಸುತ್ತಾಡಿದಾಗ ಗಂಟೆ ಆರಾಗಿತ್ತು. ಹಿಂದಿರುಗಿ ಬರುವ ದಾರಿಯೂ ಅಸ್ಪಷ್ಟವಾಗಿದ್ದರೂ ಕಾಲು ಎಡವದಂತೆ ಇಳಿದು ಬಂದೆವು. ಹೆಜ್ಜೆ ಭಾರವಾಗಿತ್ತಾದರೂ ಮನಸ್ಸು ಮಾತ್ರ ಹಗುರ.
ರೂಟ್ ಮ್ಯಾಪ್· ಮಂಗಳೂರು ಭಾಗದಿಂದ ಬರುವವರಿಗೆ ಬಂದ್ಯೋಡ್‌ನಿಂದ ಬಾಯಾರು ಮಾರ್ಗವಾಗಿ 19 ಕಿ.ಮೀ. ಸಂಚರಿಸಿದರೆ ಪೊಸಡಿಗುಂಪೆ ತಲುಪುತ್ತದೆ.
· ಕಾಸರಗೋಡಿನಿಂದ ಸೀತಾಂಗೋಳಿ, ಧರ್ಮತಡ್ಕ ಮಾರ್ಗವಾಗಿ ಸಂಚರಿಸಿದರೆ 39 ಕಿ. ಮೀ ದೂರವಿದೆ.
· ಚಾರಣಕ್ಕೆ ತೆರಳುವವರು ತುಂಬಾ ಹೊತ್ತು ಅಲ್ಲೇ ಇರುವುದಾದರೆ ತಿಂಡಿಗಳನ್ನು ತೆಗೆದುಕೊಂಡು ಹೋಗಬೇಕು.
· ಅಲ್ಲಿ ಸುತ್ತಮುತ್ತಲು ಎಲ್ಲೂ ವ್ಯಾಪಾರ ಕೇಂದ್ರಗಳಿಲ್ಲ. - ಸುಶ್ಮಿತಾ ಶೆಟ್ಟಿ ಸಿರಿಬಾಗಿಲು